More

    ಬ್ರಿಟಿಷರ ಮಾತಿಗೆ ಛಲದಿಂದ ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯ: ಹಾಗಾದರೆ, ಬ್ರಿಟಿಷ್ ವ್ಯಕ್ತಿ ಹೇಳಿದ್ದೇನು?

    ಬೆಂಗಳೂರು ಬೆಂಗಳೂರೆಲ್ಲ ಸುತ್ತಿದ ಬಳಿಕ ನಗರದೆಲ್ಲೆಡೆ ಬ್ರಿಟಿಷ್ ವಾಸ್ತುಶಿಲ್ಪವನ್ನು ಹೊಂದಿರುವ ಕಟ್ಟಡಗಳೇ ಇವೆ ಎಂದು ಬ್ರಿಟಿಷ್ ವ್ಯಕ್ತಿಯೊಬ್ಬರು ಹೇಳಿದ ಪರಿಣಾಮ, ರಾಜ್ಯಕ್ಕೆ ತಮ್ಮದೇ ವಾಸ್ತುಶಿಲ್ಪ ಹೊಂದಿರುವ ಕಟ್ಟಡ ನಿರ್ಮಿಸಬೇಕೆಂಬ ಛಲದಿಂದ ಕೆಂಗಲ್ ಹನುಮಂತಯ್ಯ ಮೈಸೂರು ರಾಜ್ಯದ ಶೈಲಿಯಲ್ಲಿ ವಿಧಾನಸೌಧ ನಿರ್ಮಿಸಿದರು ಎಂದು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ವೂಡೇ ಪಿ.ಕೃಷ್ಣ ತಿಳಿಸಿದರು.

    ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಭಾನುವಾರ ಶೇಷಾದ್ರಿಪುರಂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಕೆಂಗಲ್ ಹನುಮಂತಯ್ಯ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

    ಆಡಳಿತದಲ್ಲಿ ನಾಡು, ನುಡಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕೆಂಬ ಉದ್ದೇಶದಿಂದ ಕೆಂಗಲ್ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಹುಟ್ಟಿ ಹಾಕಿದರು. ಬಳಿಕ ಹಲವು ರಾಜ್ಯಗಳು ಇದನ್ನೇ ಅನುಸರಿಸಿದವು. ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಮನ್ನಣೆ ನೀಡಬೇಕೆಂಬುದನ್ನು ತಿಳಿಸಿಕೊಟ್ಟರು ಎಂದರು.

    ಹಲವು ಕೊಡುಗೆ

    ಹುಬ್ಬಳ್ಳಿಗೆ ಹೋಗುತ್ತಿದ್ದ ರಾಜಧಾನಿಯನ್ನು ಬೆಂಗಳೂರಿಗೆ ತಂದಿದ್ದು, ಮೈಸೂರು ಶೈಲಿಯಲ್ಲಿ ವಿಧಾಸೌಧ ನಿರ್ಮಾಣ, ರೈಲ್ವೆ ಸಚಿವರಾಗಿ ಸರಿಯಾದ ಸಮಯಕ್ಕೆ ರೈಲು ನಿಲ್ದಾಣಕ್ಕೆ ಬರುವಂತೆ ಸೇರಿ ಕೆಂಗಲ್ ಹನುಮಂತಯ್ಯ ಅವರು ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಸ್ಮರಿಸಿದರು.

    ವಿಧಾನಸೌಧ ಮೀರಿದ ವ್ಯಕ್ತಿತ್ವ

    ಮಹಾತ್ಮ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಒಂದು ಕಾರ್ಯವಷ್ಟೆ. ಅದಕ್ಕಿಂತ ಮಿಗಿಲಾಗಿ ಶಾಂತಿ ನೆಲಸಬೇಕೆಂದು ಹೋರಾಟ ಮಾಡಿದರು. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧದಿಂದ ಜನಪ್ರಿಯತೆ ಕಳಿಸಿದ್ದರೂ ಅದಕ್ಕಿಂತ ಮಿಗಿಲಾದ ಆಡಳಿತ ನೀಡಿದ ವ್ಯಕ್ತಿತ್ವ ಹೊಂದಿದ್ದರು. ಡಿ.ವಿ.ಜಿ. ಅವರು ಮಂಕುತಿಮ್ಮನ ಕಗ್ಗವನ್ನು ಮೀರಿದ ಪಾಂಡಿತ್ಯವನ್ನು ಹೊಂದಿದ್ದರೆಂದು ಹೇಳಿದರು.

    ರಮಣಶ್ರೀ ಸಂಸ್ಥೆಯ ಅಧ್ಯಕ್ಷ ಎಸ್. ಷಡಕ್ಷರಿ ಮಾತನಾಡಿ, ಹಿಂದೆಲ್ಲ ಎಲೆಮರೆ ಕಾಯಿಯಂತಿರುವ ಸಾಧಕರನ್ನು ರಾಜ-ಮಹಾರಾಜರು ಗುರುತಿಸಿ ಸನ್ಮಾನಿಸುತ್ತಿದ್ದರು. ಆದರೆ, ಈಗ ಸಾಧಕರನ್ನು ಗುರುತಿಸುವ ಹೊಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಾಡಹಬ್ಬ ದಸರಾ ಸಮಯದಲ್ಲಿ ಇವರ ಜತೆಗೆ ಮತ್ತಷ್ಟು ನಮ್ಮ ಸುತ್ತಲಿನ ಸಾಧಕರನ್ನು ಗುರುತಿಸುವ ಕೆಲಸ ಮಾಡೋಣವೆಂದು ಸಲಹೆ ನೀಡಿದರು. ದೇಶ ಗುರುವಿನ ಸ್ಥಾನದಲ್ಲಿರಬೇಕು:

    ಉದ್ಯಮಿ ಡಾ. ಆರ್.ಎಲ್. ರಮೇಶ್ ಬಾಬು ಮಾತನಾಡಿ, ದೇಶ-ವಿದೇಶಗಳಲ್ಲಿ ಪ್ರಸ್ತುತ ದಿನಗಳಲ್ಲಿನ ಜನರು ಎಷ್ಟೇ ಹಣ ಸಂಪಾದಿಸಿದರೂ ಅಂತಿಮವಾಗಿ ನೆಮ್ಮದಿಯಾಗಿರಬೇಕೆಂದು ಬಯಸುತ್ತಿದ್ದಾರೆ. ಎಲ್ಲರೂ ಆನಂದವಾಗಿರಬೇಕಾದರೆ, ಭಾರತ ಗುರುವಿನ ಸ್ಥಾನದಲ್ಲಿರಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

    40 ಗಣ್ಯರಿಗೆ ಸನ್ಮಾನ

    ಸಮಾಜ ಸೇವೆ, ಶಿಕ್ಷಣ, ಆರೋಗ್ಯ, ಪೊಲೀಸ್ ಇಲಾಖೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಸೇವೆ ಸಲ್ಲಿಸಿರುವ 40 ಗಣ್ಯರನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತರ ಸಂಘದ ಅಧ್ಯಕ್ಷ ಡಿ. ಸುಬ್ಯಮಣ್ಯ ಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ಎಸ್.ಆರ್. ವಿಜಯ ಸಮರ್ಥ ಉಪಸ್ಥಿತರಿದ್ದರು.

    ಯಾವುದೇ ಸಾಧಕರು ಕೂಡ ಪ್ರಶಸ್ತಿಗಾಗಿ ಕೆಲಸ ಮಾಡಿಲ್ಲ. ಆದರೆ, ಅಂತಹವರಿಗೆ ಪ್ರಶಸ್ತಿ ನೀಡಿ ನಮ್ಮ ಗೌರವವನ್ನು ಹೆಚ್ಚಳ ಮಾಡಿಕೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ.
    – ಎಸ್.ಆರ್. ವಿಜಯ ಸಮರ್ಥ, ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts