More

    ಕೇಂದ್ರೀಯ ವಿದ್ಯಾಲಯ ಪ್ರಾರಂಭಕ್ಕೆ ವಿಘ್ನ

    ಕಾರವಾರ: ಸೂಕ್ತ ಜಾಗದ ಗೊಂದಲದಿಂದಾಗಿ ಜಿಲ್ಲೆಯಲ್ಲಿ ಮತ್ತೊಂದು ಸರ್ಕಾರಿ ಕೇಂದ್ರೀಯ ವಿದ್ಯಾಲಯ ಪ್ರಾರಂಭದ ವಿಚಾರ ನನೆಗುದಿಗೆ ಬಿದ್ದಿದೆ.
    ಸಾರ್ವಜನಿಕರಿಗೆ ಅನುಕೂಲವಾಗುವಂತೆ 50ಕ್ಕೂ ಹೆಚ್ಚು ಕೇಂದ್ರೀಯ ವಿದ್ಯಾಲಯ ಪ್ರಾರಂಭಕ್ಕೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕೆಲ ವರ್ಷಗಳ ಹಿಂದೆಯೇ ನಿರ್ಧರಿಸಿತ್ತು. ಅದರ ಭಾಗವಾಗಿ ಜಿಲ್ಲೆಯಲ್ಲಿ ಮತ್ತೊಂದು ಕೇಂದ್ರೀಯ ವಿದ್ಯಾಲಯ ಪ್ರಾರಂಭಕ್ಕೆ ಮಾನವ ಸಂಪನ್ಮೂಲ ಇಲಾಖೆ 2019ರಲ್ಲಿ ಆಸಕ್ತಿ ತೋರಿತ್ತು. ಅಗತ್ಯ ಸ್ಥಳವನ್ನು ರಾಜ್ಯ ಸರ್ಕಾರ ನೀಡಿದಲ್ಲಿ ಶೀಘ್ರವೇ ವಿದ್ಯಾಲಯ ಪ್ರಾರಂಭಿಸುವುದಾಗಿ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯಗಳ ನಿರ್ದೇಶನಾಲಯ ತಿಳಿಸಿತ್ತು. ಅದರಂತೆ ಕಾರವಾರದ ಮುಡಗೇರಿಯಲ್ಲಿ ಜಿಲ್ಲಾಡಳಿತ ಜಾಗ ಗುರುತಿಸಿತ್ತು. ಅಲ್ಲಿ, ಸೀಬರ್ಡ್ ನೌಕಾ ಯೋಜನೆ ನಿರಾಶ್ರಿತರ ಪುನರ್ವಸತಿಗಾಗಿ ನಿರ್ವಿುಸಿದ ಹಳೆಯ ಕಟ್ಟಡಗಳನ್ನು ನವೀಕರಣ ಮಾಡಿ ವಿದ್ಯಾಲಯ ಪ್ರಾರಂಭಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿತ್ತು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ನೇಮಿಸಲ್ಪಟ್ಟ ಅಧಿಕಾರಿಗಳ ಸಮಿತಿ ಸ್ಥಳವನ್ನು ಪರಿಶೀಲಿಸಿತ್ತು. ಆದರೆ, ಮುಡಗೇರಿಯಲ್ಲಿ ಗುರುತಿಸಿದ ಸ್ಥಳ ವಿದ್ಯಾಲಯಕ್ಕೆ ಸೂಕ್ತವಲ್ಲ ಎಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದರು. ಬೇರೆ ಸ್ಥಳ ಗುರುತಿಸುವಂತೆ ತಿಳಿಸಿದ್ದರು. ಆದರೆ, ಕಾರವಾರದಲ್ಲಿ ಬೇರೆ ಸ್ಥಳ ಸಿಗುವುದು ಕಷ್ಟ ಎಂದು ಜಿಲ್ಲಾಡಳಿತ ಪ್ರಸ್ತಾವವನ್ನು ಅಲ್ಲಿಗೇ ಕೈಬಿಟ್ಟಿದೆ.
    ಶಿರಸಿಯಲ್ಲಿ ಸ್ಥಳ ಗುರುತು
    ಶಿರಸಿಯ ದೊಡ್ನಳ್ಳಿ ಗ್ರಾಮದ ಸರ್ವೆ ನಂ. 21ರಲ್ಲಿ 10 ಎಕರೆ ಸರ್ಕಾರಿ ಪಡ ಜಾಗವನ್ನು 2019ರಲ್ಲಿ ಗುರುತಿಸಿ ಅದನ್ನು ಕೆವಿಗೆ ನೀಡಲು ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆದರೆ, ಕಾರವಾರದಲ್ಲೇ ಜಾಗ ಗುರುತಿಸುವುದು ಸೂಕ್ತ ಎಂದು ಕೇಂದ್ರೀಯ ವಿದ್ಯಾಲಯಗಳ ನಿರ್ದೇಶನಾಲಯ ಅಭಿಪ್ರಾಯಪಟ್ಟಿದ್ದರಿಂದ ಆ ಪ್ರಕ್ರಿಯೆಯನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ ಎನ್ನುತ್ತಾರೆ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ.
    ಎರಡು ವಿದ್ಯಾಲಯಗಳು: ಕಾರವಾರದಲ್ಲಿ ಸದ್ಯ ಕೇಂದ್ರ ಸರ್ಕಾರದಡಿ 2 ಕೇಂದ್ರೀಯ ವಿದ್ಯಾಲಯಗಳಿವೆ. ನೌಕಾನೆಲೆಯ ವ್ಯಾಪ್ತಿಯಲ್ಲಿ ಒಂದು. ಇನ್ನೊಂದು ಕೈಗಾ ಅಣು ವಿದ್ಯುತ್ ನಿಗಮದ ವ್ಯಾಪ್ತಿಯಲ್ಲಿದೆ. ಅರಗಾದ ಸೀಬರ್ಡ್ ನೌಕಾನೆಲೆ ವ್ಯಾಪ್ತಿಯಲ್ಲಿ ನೌಕಾಸೇನೆಯ ನಾವಿಕರು ಹಾಗೂ ಇತರ ನೌಕರರ ಮಕ್ಕಳು, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೌಕರರ ಮಕ್ಕಳು ಹಾಗೂ ನೌಕಾಯೋಜನೆಯ ನಿರಾಶ್ರಿತರ ಮಕ್ಕಳಿಗೆ ಮಾತ್ರ ಕಲಿಯಲು ಅವಕಾಶವಿದೆ. ಕೈಗಾದಲ್ಲಿರುವ ಕೆವಿಯಲ್ಲೂ ಅಲ್ಲಿನ ನೌಕರರ ಮಕ್ಕಳು ಹಾಗೂ ಅಲ್ಪ ಪ್ರಮಾಣದಲ್ಲಿ ಸ್ಥಳೀಯ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಸ್ಥಳೀಯ ಇನ್ನಷ್ಟು ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯದಲ್ಲಿ ಕಲಿಯುವ ಭಾಗ್ಯ ದೊರೆಯಲು ಇನ್ನೊಂದು ಕೇಂದ್ರೀಯ ವಿದ್ಯಾಲಯದ ಅವಶ್ಯಕತೆ ಇದೆ ಎಂಬ ಬೇಡಿಕೆ ಜನರಲ್ಲಿತ್ತು.
    ನೌಕಾಸೇನೆಯಿಂದ ಆಸಕ್ತಿ: ಸೀಬರ್ಡ್ ನೌಕಾ ಯೋಜನೆ ವಿಸ್ತರಣೆಯಾಗುತ್ತಿದೆ. ಇನ್ನೂ ನಾಲ್ಕೈದು ವರ್ಷಗಳಲ್ಲಿ ನೌಕಾನೆಲೆಗೆ ಲಕ್ಷಕ್ಕೂ ಅಧಿಕ ನೌಕರರು ಆಗಮಿಸಲಿದ್ದಾರೆ. ಇದರಿಂದ ಇನ್ನೊಂದು ಕೇಂದ್ರೀಯ ವಿದ್ಯಾಲಯದ ಅವಶ್ಯಕತೆ ಇದೆ ಎಂದು ಸೀಬರ್ಡ್ ನೌಕಾ ಯೋಜನೆಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಅಲ್ಲದೆ, ಕೈಗಾದಲ್ಲಿ 5 ಮತ್ತು 6ನೇ ಘಟಕ ನಿರ್ವಣವಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಇನ್ನೊಂದು ಕೇಂದ್ರೀಯ ವಿದ್ಯಾಲಯ ನಿರ್ವಣಕ್ಕೆ ಸರ್ಕಾರ ಆಸಕ್ತಿ ತೋರಿತ್ತು ಎನ್ನಲಾಗಿದೆ.


    ಈ ಹಿಂದೆ ಜಿಲ್ಲಾಡಳಿತ ಮುಡಗೇರಿಯಲ್ಲಿ ಗುರುತಿಸಿದ ಸ್ಥಳ ಸೂಕ್ತವಲ್ಲ ಎಂದು ಕೇಂದ್ರೀಯ ವಿದ್ಯಾಲಯಗಳ ನಿರ್ದೇಶನಾಲಯ ಲಿಖಿತವಾಗಿ ತಿಳಿಸಿದೆ. ಇದರಿಂದ ಪ್ರಸ್ತಾವನೆಯನ್ನು ಕೈ ಬಿಡಲಾಗಿದೆ. ಕಾರವಾರದಲ್ಲಿ ಬೇರೆ ಜಾಗ ಸಿಗುವುದು ಕಷ್ಟ. ಕೇಂದ್ರೀಯ ವಿದ್ಯಾಲಯಗಳ ನಿರ್ದೇಶನಾಲಯ ಶಿರಸಿ ಅಥವಾ ಕುಮಟಾದಲ್ಲಿ ಶಾಲೆ ಪ್ರಾರಂಭಿಸುವುದಿದ್ದರೆ ಜಿಲ್ಲಾಡಳಿತ ಸ್ಥಳ ಗುರುತಿಸಿಕೊಡಲು ಸಿದ್ಧ.
    ಕೃಷ್ಣಮೂರ್ತಿ ಎಚ್.ಕೆ., ಅಪರ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts