More

    ಅರವಿಂದ್​ ಕೇಜ್ರಿವಾಲ್​ ವಿಜಯಪತಾಕೆ ಬೆನ್ನಲ್ಲೇ ಆ್ಯಂಗ್ರಿ ಹನುಮಂತನನ್ನು ಸೋಲಿಸಿದ ಹ್ಯಾಪಿ ಹನುಮಂತ!

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ದೆಹಲಿ ಮಾರುಕಟ್ಟೆಗೆ ಹೊಸ ಹನಮಂತನ ಎಂಟ್ರಿಯಾಗಿದೆ.

    ಯಾರಪ್ಪ ಅದು ಹೊಸ ಹನುಮಂತ ಎಂದು ಯೋಚಿಸುವ ಮುನ್ನ ಮುಂದೆ ಓದಿ… ಕೆಲ ವರ್ಷಗಳಿಂದ ಟೀಶರ್ಟ್ಸ್​ ಹಾಗೂ ವಾಹನಗಳು ಸೇರಿದಂತೆ ಇತರೆ ಭಾಗಗಳಲ್ಲಿ ಕ್ರೋಧ ತುಂಬಿದ ಹನುಮಂತ ಸ್ಟಿಕ್ಕರ್​ ಅನ್ನು ನೀವೆಲ್ಲಾ ನೋಡಿರುತ್ತೀರಿ. ನವದೆಹಲಿ ಹಾಗೂ ದೇಶದ ಇತರೆ ಭಾಗಗಳಲ್ಲಿ ಇದೊಂದು ಮಹತ್ವದ ವಿಷಯವಾಗಿತ್ತು. ಈ ಸ್ಟಿಕ್ಕರ್​ ಅನ್ನು ಕರಣ್​ ಆಚಾರ್ಯ ಎಂಬುವರು 2015ರಲ್ಲಿ ವಿನ್ಯಾಸಗೊಳಿಸಿದ್ದರು. ಕ್ರೋಧಯುಕ್ತ ಹನುಮಂತನ ಸ್ಟಿಕ್ಕರ್​ ಹಿಂದುತ್ವದ ಉತ್ಪ್ರೇಕ್ಷೆಯ ಸಂಕೇತವೆಂತಲೂ ಆರೋಪಿಸಲಾಗಿತ್ತು. ಅಲ್ಲದೆ, ಕೋಪಯುಕ್ತ ಚಿತ್ರದ ಬಗ್ಗೆ ಸಾಕಷ್ಟು ಟೀಕೆಗಳು ಹರಿದುಬಂದಿತ್ತು.

    ಆದರೆ, ಇದೀಗ ಹೊಸ ರೀತಿಯ ಹನುಮಂತನು ಪ್ರಖ್ಯಾತ ಕ್ರೋಧಯುಕ್ತ ಹನುಮಂತನ ಸ್ಟಿಕ್ಕರ್​ ಅನ್ನು ಆರಂಭದಲ್ಲೇ ಮಣಿಸಿದ್ದಾನೆ. ಭಾರತದ ಮಾರುಕಟ್ಟೆಗಳಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಇದು ರಾಮನ ಭಕ್ತನ ಸಂತೋಷಕರ ಅನುಕರಣೆ ಎಂದು ಬಿಂಬಿಸಲಾಗುತ್ತಿದೆ.

    ಈ ಸ್ಟಿಕ್ಕರ್​ ಅನ್ನು ಮಾಜಿ ಪತ್ರಕರ್ತ ಆಕಾಶ್​ ಬ್ಯಾನರ್ಜಿ ಅವರು ವಿನ್ಯಾಸಗೊಳಿಸಿದ್ದಾರೆ. ಸಾಮಾಜಿಕ ಕುಚೋದ್ಯ ವೇದಿಕೆ ನಡೆಸುತ್ತಿರುವ ಬ್ಯಾನರ್ಜಿ ಮಂದಸ್ಮಿತ ಹನುಮಂತನ(ಹ್ಯಾಪಿ ಹನುಮಂತ) ಸ್ಟಿಕ್ಕರ್​ ಅನ್ನು ಟೀಶರ್ಟ್ಸ್​ ಮೇಲೆ ಮುದ್ರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ.

    ನಮಗೆ ಗೊತ್ತಿರುವ ಹಾಗೂ ಪ್ರೀತಿ ಪಾತ್ರರಾಗಿರುವ ಹನುಮಂತನನ್ನು ಕಂಡುಕೊಳ್ಳುವ ಸಮಯ ಇದಾಗಿದೆ. ರಾಮನಿಗೆ ಹೆಚ್ಚು ನಿಷ್ಠೆಯಾಗಿದ್ದ, ನಂಬಿಕಾರ್ಹ ಸಂತೋಷದಾಯಕ ಹನುಮಂತ ನಮ್ಮ ಗೌರವ. ಹೀಗಾಗಿ ನಗೆಯನ್ನು ಮತ್ತೆ ಕರೆತರೋಣ ಎಂದು ಉತ್ಪನ್ನದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

    ಪುರಾತನ ಇತಿಹಾಸಕ್ಕೆ ಹೋದರೆ, ರಮಾನಂದ ಸಾಗರ್​ ಅವರ ರಾಮಾಯಣದಲ್ಲೂ ಸಂತೋಷ ಮತ್ತು ತುಂಟ ಹನುಮಂತನ ಚಿತ್ರಣವನ್ನು ಬಿಡಿಸಲಾಗುತ್ತಿತ್ತು. ಅದು ನಮ್ಮ ಮನದಲ್ಲೂ ಉಳಿದಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

    ಅರವಿಂದ್​ ಕೇಜ್ರಿವಾಲ್​ ಟಿವಿ ಕಾರ್ಯಕ್ರಮವೊಂದರಲ್ಲಿ ಹನುಮನ್​ ಛಾಲಿಸ್​ ಪಠಿಸಿ, ನಾನು ಒಬ್ಬ ಕಟ್ಟಾ ಹನುಮಂತನ ಭಕ್ತ ಎಂದು ಹೇಳಿದ ಬೆನ್ನಲ್ಲೇ ಹ್ಯಾಪಿ ಹನುಮಂತನ ಟೀಶರ್ಟ್ಸ್​ ಪ್ರಸಿದ್ಧವಾಗಿದೆ. ಅಲ್ಲದೆ, ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ಕೇಜ್ರಿವಾಲ್​ ಹನುಮಂತನ ದೇವಾಲಯಕ್ಕೆ ತೆರಳಿ ಧನ್ಯವಾದಗಳನ್ನು ತಿಳಿಸಿದ್ದರು.

    ಗೆಲುವಿನ ಬೆನ್ನಲ್ಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಕೇಜ್ರಿವಾಲ್​ ಈ ದಿನ ದೆಹಲಿ ಜನತೆಗೆ ಹನುಮಂತ ಆಶೀರ್ವಾದ ನೀಡಿದ ದಿನ. ಮುಂದಿನ ಐದು ವರ್ಷಗಳವರೆಗೆ ನಮ್ಮನ್ನು ಒಳ್ಳೆಯ ದಾರಿಯಲ್ಲಿ ನಡೆಸಲು ಹನುಮಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು. ಅಲ್ಲದೆ, ಫೆ. 8ರಂದು ನಡೆದ ಮತದಾನದ ವೇಳೆ ತಮ್ಮ ಹಕ್ಕು ಚಲಾಯಿಸುವ ಮುನ್ನ ಕೇಜ್ರಿವಾಲ್​ ಹನುಮಂತನ ದೇವಾಲಯಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಅರವಿಂದ್​ ಕೇಜ್ರಿವಾಲ್​ ನಮ್ಮ ಜೀವನದಲ್ಲಿ ಹ್ಯಾಪಿ ಹನುಮಂತನನ್ನು ಕರೆ ತಂದಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts