More

    ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

    ಬೆಳಗಾವಿ: ಕನ್ನಡಿಗರಿಗೆ ಧಮ್ಕಿ ಹಾಕುತ್ತಿರುವ ಶಿವಸೇನೆ, ಎಂಇಎಸ್ ಮುಖಂಡರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಗುರುವಾರ ರಸ್ತೆ ತಡೆದು ಪ್ರತಿಭಟಿಸಿದರು. ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಸ್ವಲ್ಪ ಸಮಯದ ಬಳಿಕ ಬಿಡುಗಡೆ ಮಾಡಿದರು.

    ನಾಲ್ಕೈದು ವಾರಗಳಿಂದ ಮಹಾರಾಷ್ಟ್ರದಲ್ಲಿ ಆಡಳಿತರೂಢ ಸರ್ಕಾರದ ಶಿವಸೇನೆ ಪಕ್ಷದ ಮುಖಂಡರು ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಇತ್ತ ಬೆಳಗಾವಿಯಲ್ಲಿ ಕೆಂಪು, ಹಳದಿ ಬಣ್ಣದ ಶಾಲು, ಧ್ವಜ ಹಿಡಿದುಕೊಂಡು ಓಡಾಡಿದರೆ ಅಟ್ಟಾಡಿಸಿಕೊಂಡು ಹೊಡೆಯುತ್ತೇವೆ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯು ಧಮ್ಕಿ ಹಾಕುತ್ತಿದೆ. ಇಂತಹ ಪುಂಡರ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

    ತಮ್ಮ ರಾಜಕೀಯ ಲಾಭಕ್ಕಾಗಿ ಶಿವಸೇನೆ ಮತ್ತು ಎಂಇಎಸ್ ಮುಖಂಡರು ಗಡಿಭಾಗದ ಪ್ರದೇಶಗಳಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವ ಭಾಷಾ ವೈಷಮ್ಯ ಉಂಟು ಮಾಡಲು, ಶಾಂತಿ ಸುವ್ಯವಸ್ಥೆ ಕದಡುತ್ತಿದ್ದಾರೆ. ಅಲ್ಲದೆ, ಗಡಿಭಾಗದ ಕೆಲ ಪ್ರದೇಶಗಳಲ್ಲಿ ಕನ್ನಡಿಗರ ಮೇಲೆ ಗೂಂಡಾಗಿರಿ ಮಾಡುತ್ತಿದ್ದಾರೆ. ತಕ್ಷಣ ರಾಜ್ಯದಲ್ಲಿ ಎಂಇಎಸ್ ಮತ್ತು ಶಿವಸೇನೆ ಶಾಖೆಗಳನ್ನು ನಿಷೇಧಿಸಬೇಕು. ಅಲ್ಲದೆ ಕನ್ನಡಿಗರ ವಿರುದ್ಧ ಮಾತನಾಡುತ್ತಿರುವ ವಿರುದ್ಧ ರಾಜ್ಯದ್ರೋಹ ಕೇಸ್ ದಾಖಲಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

    ಕನ್ನಡ ವಿರೋಧಿ ಕೆಲಸ ಮಾಡುತ್ತಿರುವ ಎಂಇಎಸ್‌ಅನ್ನು ಸಂಪೂರ್ಣ ನಿಷೇಧಿಸಬೇಕು.ಬೆಳಗಾವಿಯಲ್ಲಿ ಶಿವಸೇನೆ ಶಾಖೆ ತೆರೆಯಲು ಅವಕಾಶ ನೀಡಬಾರದು. ಎಂಇಎಸ್, ಶಿವಸೇನೆ ಮುಖಂಡರು ತಮ್ಮ ವರ್ತನೆ ಸರಿಪಡಿಸಿಕೊಳ್ಳದಿದ್ದರೆ ಹೋರಾಟದ ಮೂಲಕವೇ ಬಿಸಿ ಮುಟ್ಟಿಸಲಾಗುವುದು. ಎಚ್ಚೆತ್ತುಕೊಳ್ಳದಿದ್ದರೆ ಮಹಾರಾಷ್ಟ್ರಕ್ಕೇ ಹೋಗಿ ಶಿವಸೇನೆ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಸಿದರು.

    ಕರವೇ ಜಿಲ್ಲಾಧ್ಯಕ್ಷ ಮಹಾಂತೇಶ ರಣಗಟ್ಟಿಮಠ, ಶಿವರಾಜೇ ಗೌಡ್ರು, ಆರ್.ಲೋಕೇಶ, ಎಂ.ಮಂಜುನಾಥ , ವಿನಯ ಚಂದರಗಿ, ಶಂಕರ ಶಿನಿಮಠ, ಅಣ್ಣಾಸಾಹೇಬ ತೆಲಸಂಗ ಇತರರು ಇದ್ದರು.

    ಕೆಂಪು, ಹಳದಿ ಶಾಲು, ಧ್ವಜ ಹಿಡಿದುಕೊಂಡು ಓಡಾಡಿದರೆ ಅಟ್ಟಾಡಿಸಿಕೊಂಡು ಹೊಡೆಯುತ್ತೇವೆ ಎಂದು ಧಮ್ಕಿ ಹಾಕಿರುವ ಎಂಇಎಸ್ ಮುಖಂಡನ ವಿರುದ್ಧ ಗೂಂಡಾ ಕೇಸ್ ದಾಖಲಿಸಿ ಗಡಿಪಾರು ಮಾಡಬೇಕು. ಶಿವಸೇನೆ, ಎಂಇಎಸ್ ಸಮಿತಿಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಕನ್ನಡಿಗರ ಬಗ್ಗೆ ಹಗುರವಾಗಿ ನಾಲಿಗೆ ಹರಿಬಿಡುತ್ತಿರುವ ಶಿವಸೇನೆ ಪುಂಡರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ.
    | ಪ್ರವೀಣ ಶೆಟ್ಟಿ , ಕರವೇ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts