More

    ಗಣೇಶೋತ್ಸವಕ್ಕೆ ಕರೊನಾ ಕರಿನೆರಳು

    ರಾಣೆಬೆನ್ನೂರ: ಹಿಂದುಗಳ ಶ್ರದ್ಧೆ ಹಾಗೂ ಒಗ್ಗಟ್ಟಿನ ಹಬ್ಬವಾದ ಗಣೇಶ ಚತುರ್ಥಿಗೆ ಇನ್ನು 25 ದಿನ ಬಾಕಿ ಇದೆ. ಆದರೆ, ಈ ಬಾರಿ ಸಾರ್ವಜನಿಕ ಗಣೇಶೋತ್ಸವದ ಮೇಲೆ ಕರೊನಾ ಕರಿನೆರಳು ಬೀಳುವ ಸಾಧ್ಯತೆಯಿದೆ.

    ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸಿ, ಸರಳ ಆಚರಣೆಯ ಮಾರ್ಗಸೂಚಿಯನ್ನು ಸರ್ಕಾರವಾಗಲಿ ಅಥವಾ ಜಿಲ್ಲಾಡಳಿತವಾಗಲಿ ತಿಳಿಸಿಲ್ಲ. ಹೀಗಾಗಿ, ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಮೂರ್ತಿ ಪ್ರತಿಷ್ಠಾಪನೆ ಕುರಿತು ಗೊಂದಲದಲ್ಲಿದ್ದಾರೆ.

    ಗಣೇಶ ಚತುರ್ಥಿಗೆ ಒಂದು ತಿಂಗಳು ಮುಂಚಿತವಾಗಿಯೇ ನಗರದಲ್ಲಿ ಸಾರ್ವಜನಿಕ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ಕಲಾವಿದರು ನಿರತರಾಗುತ್ತಿದ್ದರು. ಆದರೆ, ಈ ಬಾರಿ ಅಂತಹ ಸನ್ನಿವೇಶಗಳೇ ಕಂಡುಬರುತ್ತಿಲ್ಲ. ಸದ್ಯ ಕಲಾವಿದರು ಚಿಕ್ಕ ಮೂರ್ತಿಗಳನ್ನು ಮಾತ್ರ ತಯಾರಿಸುತ್ತಿದ್ದಾರೆ.

    ನಗರ ಸೇರಿ ತಾಲೂಕಿನಲ್ಲಿ 500ಕ್ಕೂ ಅಧಿಕ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಕಳೆದ ವರ್ಷ ತಿಂಗಳು ಮುಂಚೆಯೇ 21, 15, 18, 10 ಅಡಿ ಸೇರಿ ನಾನಾ ಬಗೆಯ ಮಣ್ಣಿನ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸಲು ಕಲಾವಿದರಿಗೆ ಮುಂಗಡವಾಗಿಯೇ ತಿಳಿಸಲಾಗುತ್ತಿತ್ತು. ಆದರೆ, ಈ ಬಾರಿ ಮೂರ್ತಿ ತಯಾರಿಸುವ ಕುರಿತು ಯಾರೂ ಕಲಾವಿದರನ್ನು ಸಂರ್ಪಸಿಲ್ಲ.

    ಕಲಾವಿದರಿಗೆ ಆರ್ಥಿಕ ಸಂಕಷ್ಟ: ಕಲಾವಿದವರು ಗಣೇಶೋತ್ಸವವನ್ನೇ ನಂಬಿಕೊಂಡು ವರ್ಷವಿಡಿ ಮೂರ್ತಿ ಸಿದ್ಧತೆಯಲ್ಲಿ ತೊಡಗಿರುತ್ತಾರೆ. 10 ತಿಂಗಳು ಮುಂಚಿತವಾಗಿಯೇ ಮಣ್ಣು ತಂದು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಅದರಂತೆ ಈ ವರ್ಷದ ಗಣಪತಿ ಮೂರ್ತಿ ತಯಾರಿಸಲು 8 ತಿಂಗಳು ಮೊದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೀಗ ಪುಟ್ಟ ಪುಟ್ಟ ಗಣಪತಿ ಹೊರತುಪಡಿಸಿದರೆ, ದೊಡ್ಡ ಪ್ರಮಾಣದ ಮೂರ್ತಿ ತಯಾರಿಕೆಗೆ ಯಾರೂ ಮುಂದಾಗಿಲ್ಲ. ಹೀಗಾಗಿ, ಕಲಾವಿದರ ದುಡಿಮೆಗೂ ಸಂಕಷ್ಟ ತಂದೊಡ್ಡಿದೆ.

    ಅದ್ದೂರಿ ಆಚರಣೆಗೆ ಬ್ರೇಕ್: ವಾಣಿಜ್ಯ ನಗರಿಯಲ್ಲಿ ‘ರಾಣೆ ಬೆನ್ನೂರ ಕಾ ರಾಜಾ’ ಹಾಗೂ ವಿಶ್ವ ಹಿಂದು ಪರಿಷತ್ ವತಿಯಿಂದ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿಗಳು ವಿಶೇಷವಾಗಿವೆ. ರಾಣೆಬೆನ್ನೂರ ಕಾ ರಾಜಾ ಗಣಪತಿ ವೀಕ್ಷಣೆಗೆ ಹಾಗೂ ವಿಸರ್ಜನೆಗೆ ತಾಲೂಕು ಮಾತ್ರವಲ್ಲದೆ, ಅಕ್ಕಪಕ್ಕದ ಜಿಲ್ಲೆಯ ಸಾವಿರಾರು ಜನರು ಪಾಲ್ಗೊಳ್ಳುತ್ತಿದ್ದರು. ಆದರೆ, ಈಗ ಅದ್ದೂರಿ ಆಚರಣೆಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ.

    ಆಗಸ್ಟ್ 22ರಂದು ಗಣೇಶನ ಹಬ್ಬವಿದೆ. ಈವರೆಗೂ ದೊಡ್ಡ ಗಣಪತಿ ಮೂರ್ತಿ ತಯಾರಿಕೆಗೆ ಯಾವುದೇ ಮಂಡಳಿಯವರು ಸಂರ್ಪಸಿಲ್ಲ. ಕೇವಲ ಎರಡು ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ, ಮಂಡಳಿ ಯವರಲ್ಲಿ ಹಾಗೂ ಕಲಾವಿದರಲ್ಲಿ ಗೊಂದಲ ಉಂಟಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕೂಡಲೆ ಸ್ಪಷ್ಟ ಆದೇಶ ಹೊರಡಿಸಿ, ಗೊಂದಲಕ್ಕೆ ತೆರೆ ಎಳೆಯಬೇಕು. ಯಾವ ಕಾರಣಕ್ಕೂ ಪಿಒಪಿ ಮೂರ್ತಿಗಳಿಗೆ ಅವಕಾಶ ನೀಡಬಾರದು.

    | ರಾಘವೇಂದ್ರ ತ್ರಾಸದ ಗಣಪತಿ ಮೂರ್ತಿ ಕಲಾವಿದ

    ಸಾರ್ವಜನಿಕ ಗಣೇಶೋತ್ಸವದ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಆದೇಶಿಸಿದ ಕೂಡಲೆ ಮಂಡಳಿಗಳಿಗೆ ತಿಳಿಸಲಾಗುವುದು. ಕಲಾವಿದರ ಸಮಸ್ಯೆ ಕುರಿತು ಜಿಲ್ಲಾಡಳಿತದ ಗಮನಕ್ಕೂ ತರಲಾಗುವುದು.

    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts