More

    ಉತ್ತರ ಬರೆದವರಿಗೆ ಸಿಕ್ಕಿದ್ದು -ರೂ; 4,000; ಒಎಂಆರ್ ಶೀಟ್ ತಿದ್ದಿದ್ದ ಪರಿವೀಕ್ಷಕರು  

    ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವ 545 ಸಬ್ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಹಗರಣದ ಕಿಂಗ್​ಪಿನ್​ಗಳು ಪಿಎಸ್​ಐ ಅಭ್ಯರ್ಥಿಗಳಿಂದ ತಲಾ 50 ರಿಂದ 80 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಆದರೆ, ಪರೀಕ್ಷೆ ಮುಗಿದ ಬಳಿಕ ಅಭ್ಯರ್ಥಿಗಳ ಒಎಂಆರ್ ಶೀಟ್​ಗಳನ್ನು ತಿದ್ದಿದ್ದ ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ಕೊಟ್ಟಿದ್ದು ಬರೀ 4000 ರೂ….! ಸಿಐಡಿ ತಂಡ ಚಾರ್ಜ್​ಶೀಟ್​ನಲ್ಲಿ ಈ ವಿಚಾರ ಉಲ್ಲೇಖಿಸಿದೆ. ಕಲಬುರಗಿ ನಗರದ ಬಿಜೆಪಿ ಸ್ಥಳೀಯ ನಾಯಕಿ ದಿವ್ಯಾ ಹಾಗರಗಿ ಮಾಲೀಕತ್ವದ ಜ್ಞಾನಜ್ಯೋತಿ ಇಂಗ್ಲಿಷ್ ಸ್ಕೂಲ್​ನಲ್ಲಿ 2015ರಿಂದ ಸೇವೆ ಸಲ್ಲಿಸಿದ್ದ ಕನ್ನಡ ಶಿಕ್ಷಕಿ ಸಾವಿತ್ರಿ ಕಾಬಾ, ತನಿಖೆ ವೇಳೆ ನೀಡಿರುವ ಹೇಳಿಕೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

    2021ರ ಅಕ್ಟೋಬರ್ 3ರಂದು ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ಪಿಎಸ್​ಐ ಲಿಖಿತ ಪರೀಕ್ಷೆ ವೇಳೆ ಸಾವಿತ್ರಿ ಕಾಬಾ ಪರಿವೀಕ್ಷಕಿಯಾಗಿದ್ದರು. ಇದಕ್ಕೂ ಮೊದಲು ಆರ್.ಡಿ. ಪಾಟೀಲ್ ಸೇರಿದಂತೆ ತನ್ನ ಗ್ಯಾಂಗ್ ನೊಂದಿಗೆ ಒಳಸಂಚುರೂಪಿಸಿದ್ದ ದಿವ್ಯಾ ಹಾಗರಗಿ ಶಾಲೆಯ ಪ್ರಾಂಶುಪಾಲ ಕಾಶಿನಾಥ್​ಗೆ ಅಕ್ರಮ ವ್ಯವಹಾರದ ಬಗ್ಗೆ ಸೂಚನೆ ಕೊಟ್ಟಿದ್ದರು. ಅದರಂತೆ ಪ್ರಾಂಶುಪಾಲರು ಸಾವಿತ್ರಿ ಕಾಬಾ ಸೇರಿದಂತೆ ತಮ್ಮ ಶಾಲೆಯ ಪರಿವೀಕ್ಷಕರನ್ನು ಕರೆದು ‘ನಿಮಗೆ ಕೆಲ ಪಿಎಸ್​ಐ ಅಭ್ಯರ್ಥಿಗಳ ರೋಲ್ ನಂಬರ್ ಮತ್ತು ಪ್ರಶ್ನೆಗಳಿಗೆ ಉತ್ತರವಿರುವ ಚೀಟಿಯನ್ನು ಕೊಡುತ್ತೇನೆ. ನೀವು ಆ ರೋಲ್ ನಂಬರ್ ಅಭ್ಯರ್ಥಿಯ ಒಎಂಆರ್ ಶೀಟ್ ತೆಗೆದುಕೊಂಡು ಖಾಲಿ ಬಿಟ್ಟಿರುವ ಉತ್ತರವನ್ನು ಭರ್ತಿ ಮಾಡಬೇಕು. ಅಂತಹ ಅಭ್ಯರ್ಥಿಗಳು, ಒಎಂಆರ್ ಶೀಟ್​ನಲ್ಲಿ ಉತ್ತರ ಬರೆಯದೆ ಖಾಲಿ ಬಿಟ್ಟಿದ್ದಾರೆ. ಉಳಿದ ಎಲ್ಲ ಕೆಲಸವನ್ನು ದಿವ್ಯಾ ಮೇಡಂ ಅಧಿಕಾರಿಗಳ ಜತೆ ಸೇರಿ ಎಲ್ಲವನ್ನು ಮ್ಯಾನೇಜ್ ಮಾಡಿದ್ದಾರೆ ಎಂದು ಹೇಳಿ ಶಿಕ್ಷಕರಿಗೆ ಅಭ್ಯರ್ಥಿಗಳ ರೋಲ್ ನಂಬರ್ ಮತ್ತು ಬಾಲ್ ಪೆನ್ ಕೊಟ್ಟು ಕಳುಹಿಸಿದ್ದರು. ಅದರಂತೆ ಪೇಪರ್-2 ಪರೀಕ್ಷೆ ಮುಗಿಯಲು 10 ರಿಂದ 15 ನಿಮಿಷ ಬಾಕಿ ಇರುವಾಗ ಅಭ್ಯರ್ಥಿಗಳು ಒಎಂಆರ್ ಶೀಟ್ ಕೊಟ್ಟು ಹೋಗಿದ್ದರು.

    ಪರೀಕ್ಷೆ ಮುಗಿದ ಮೇಲೆ ಎಲ್ಲ ಒಎಂಆರ್ ಶೀಟ್​ಗಳನ್ನು ಮುಚ್ಚಿದ ಲಕೋಟೆಯಲ್ಲಿ ಹಾಕಿ ಪೊಲೀಸ್ ಅಧಿಕಾರಿಗೆ ತಲುಪಿಸಬೇಕಿತ್ತು. ಪ್ರಾಂಶುಪಾಲರು ಹೇಳಿದಂತೆ ಶಿಕ್ಷಕರು, ಶಾಲೆ ಸಿಬ್ಬಂದಿ ಕೊಠಡಿಗೆ ತೆಗೆದುಕೊಂಡು ಹೋಗಿ ಭರ್ತಿ ಮಾಡಿ ಆನಂತರ ಸೀಲ್ಡ್ ಕವರ್ ಮಾಡಿ ಪೊಲೀಸರಿಗೆ ನೀಡಲಾಗಿತ್ತು. ಆನಂತರ ಪ್ರಾಂಶುಪಾಲರು ನೀಡಿದ ಬಾಲ್​ಪೆಲ್ ಮತ್ತು ಅಭ್ಯರ್ಥಿಗಳ ರೋಲ್ ನಂಬರ್ ಚೀಟಿಯನ್ನು ಹಿಂತಿರುಗಿಸಲಾಯಿತು. ಪರಿವೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದಕ್ಕೆ ಸರ್ಕಾರದಿಂದ 1 ಸಾವಿರ ರೂ. ಗೌರವ ಧನ ನೀಡಿದರು. ಒಂದು ವಾರದ ಬಳಿಕ ಪ್ರಾಂಶುಪಾಲ ಕಾಶಿನಾಥ್, ಪರಿವೀಕ್ಷಕರಾಗಿ ಮತ್ತು ಒಎಂಆರ್ ಶೀಟ್ ತಿದ್ದಿದ್ದ ಶಿಕ್ಷಕರನ್ನು ಕರೆದು ದಿವ್ಯಾ ಹೆಚ್ಚುವರಿ ಗೌರವ ಧನ ನೀಡಿದ್ದಾರೆ ಎಂದು ತಲಾ 4 ಸಾವಿರ ರೂ. ಪಾವತಿ ಮಾಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಪ್ರಿನ್ಸಿಪಾಲ್ ಗುರುತಿನ ಚೀಟಿ: ಪರೀಕ್ಷೆಯಲ್ಲಿ ಅಕ್ರಮ ಎಸಗಲು ಡೀಲ್ ಮುಗಿಸಿಕೊಂಡಿದ್ದ ದಿವ್ಯಾ ಹಾಗರಗಿ ಪೊಲೀಸ್ ನೇಮಕಾತಿ ವಿಭಾಗಕ್ಕೆ ಶಾಲೆಯ ಪ್ರಾಂಶುಪಾಲರ ಮತ್ತು ಶಿಕ್ಷಕರ ಪಟ್ಟಿ ಕೊಡಬೇಕಾಗಿತ್ತು. ಈ ಪಟ್ಟಿಯಲ್ಲಿ ತನ್ನ ಹೆಸರಿನ ಮುಂದೆ ಪ್ರಾಂಶುಪಾಲರು ಎಂದು ನಮೂದಿಸಿಕೊಂಡಿದ್ದರು. ಪೊಲೀಸ್ ಇಲಾಖೆಯಿಂದ ಅದೇ ರೀತಿ ದಿವ್ಯಾಗೆ ಪ್ರಿನ್ಸಿಪಾಲ್ ಎಂದೇ ಗುರುತಿನ ಚೀಟಿ ಕೊಡಲಾಗಿತ್ತು. ಇದನ್ನು ಬಳಸಿಕೊಂಡು ದಿವ್ಯಾ ಲಿಖಿತ ಪರೀಕ್ಷೆ ನಡೆಯುವಾಗ ಕೊಠಡಿ ಆವರಣದಲ್ಲಿ ರಾಜಾರೋಷವಾಗಿ ಓಡಾಡಿಕೊಂಡು ತನ್ನ ಗ್ಯಾಂಗ್​ಗೆ ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    100ಕ್ಕೆ 100 ಉತ್ತರ ಭರ್ತಿ: ಶಾಲೆಯ ಪ್ರಾಂಶುಪಾಲ ಕಾಶಿನಾಥ್ ನೀಡಿದ ಅಭ್ಯರ್ಥಿಗಳ ರೋಲ್ ನಂಬರ್​ನ ಒಎಂಆರ್ ಶೀಟ್​ಗಳನ್ನು ತೆಗೆದುಕೊಂಡಿದ್ದ ಶಿಕ್ಷಕರು ಬಹುತೇಕ ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆದಿದ್ದರು. ಅಂದರೆ, ಹಣ ಕೊಟ್ಟಿದ್ದ ಅಭ್ಯರ್ಥಿಗಳು ನಾಲ್ಕೈದು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ ಉಳಿದವನ್ನು ಖಾಲಿ ಬಿಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts