More

    ಮೇಲ್ಮನೆ ಗದ್ದಲಕ್ಕೆ ಸಚಿವರೇ ಪ್ರೇರಣೆ; ಅಶ್ವತ್ಥನಾರಾಯಣ, ಮಾಧುಸ್ವಾಮಿ, ಕೋಟಗೆ ಜವಾಬ್ದಾರಿ ಬೇಡ…

    ಬೆಂಗಳೂರು: ವಿಧಾನಪರಿಷತ್ ಸಭಾಪತಿ ಪ್ರತಾಪ್​ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ಮಂಡನೆ ವಿಚಾರವಾಗಿ ಡಿ.15ರಂದು ಮೇಲ್ಮನೆಯಲ್ಲಿ ನಡೆದಿದ್ದ ಅಹಿತಕರ ಘಟನೆಗೆ ಡಿಸಿಎಂ ಅಶ್ವತ್ಥನಾರಾಯಣ, ಸಚಿವ ಜೆ.ಸಿ.ಮಾಧುಸ್ವಾಮಿ ಅವರೇ ಕಾರಣ ಎಂದು ಪರಿಷತ್ ಸದನ ಸಮಿತಿ ಮಧ್ಯಂತರ ವರದಿ ನೀಡಿದೆ. ಇವರಿಬ್ಬರ ಜತೆಗೆ ಪ್ರಚೋದನಾತ್ಮಕ ನಡೆ ತೋರಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನೂ ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಪರೋಕ್ಷವಾಗಿ ಶಿಫಾರಸು ಮಾಡಲಾಗಿದೆ. ಸಮಿತಿ ಮಾಡಿರುವ 12 ಪ್ರಮುಖ ಶಿಫಾರಸುಗಳಲ್ಲಿ ನೂತನ ಉಪ ಸಭಾಪತಿ ಸಹಿತ 12 ಸದಸ್ಯರು ಮುಂದಿನ ಎರಡು ಅಧಿವೇಶನದಲ್ಲಿ ಪಾಲ್ಗೊಳ್ಳದಂತೆ ಕ್ರಮಕೈಗೊಳ್ಳಬೇಕೆಂದು ಹೇಳಲಾಗಿದೆ.

    ಪರಿಷತ್​ನಲ್ಲಿ ನಡೆದ ಕಾನೂನುಬಾಹಿರ ನಡವಳಿಕೆ, ಘಟನೆಗೆ ಡಿಸಿಎಂ ಅಶ್ವತ್ಥನಾರಾಯಣ, ಅಂದಿನ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮೂಲಪ್ರೇರಿತರು ಎಂದು ದೃಢಪಟ್ಟಿದೆ. ಇವರಿಬ್ಬರು ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲ. ಸಭಾನಾಯಕ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಚೋದನಾತ್ಮಕ ನಡವಳಿಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಅವರು ಕಾರ್ಯನಿರ್ವಹಿಸುವುದು ಸೂಕ್ತವಲ್ಲ. ಅಲ್ಲದೆ, ಮುಂದಿನ ಎರಡು ಅವಧಿಯ ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಸಮಿತಿ ಹೇಳಿದೆ.

    ಕೈ-ದಳದವರಿಗೂ ಶಾಕ್

    ಬಿಜೆಪಿ ಸದಸ್ಯರಾದ ಎಂ.ಕೆ.ಪ್ರಾಣೇಶ್ (ನೂತನ ಉಪ ಸಭಾಪತಿ), ಆಯನೂರು ಮಂಜುನಾಥ್, ಡಾ.ವೈ.ಎ.ನಾರಾಯಣಸ್ವಾಮಿ, ಅರುಣ್ ಶಹಪುರ, ಜೆಡಿಎಸ್​ನ ಬಸವರಾಜ ಹೊರಟ್ಟಿ, ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್​ನ ಗೋವಿಂದರಾಜ್ ಅವರಿಗೆ ಮುಂದಿನ ಎರಡು ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧಿಸಲು ಸಮಿತಿ ಶಿಫಾರಸಿನಲ್ಲಿ ತಿಳಿಸಿದೆ. ಕಾಂಗ್ರೆಸ್​ನ ಚಂದ್ರಶೇಖರ್ ಪಾಟೀಲ್, ನಜೀರ್ ಅಹ್ಮದ್, ವಿರೋಧಪಕ್ಷದ ಮುಖ್ಯ ಸಚೇತಕ ಎಂ.ನಾರಾಯಣಸ್ವಾಮಿ, ಶ್ರೀನಿವಾಸ ಮಾನೆ ಹಾಗೂ ಪ್ರಕಾಶ ರಾಥೋಡ್ ಅವರು ತಲಾ ಒಂದು ಅಧಿವೇಶನದ ಕಾರ್ಯಕಲಾಪಗಳಲ್ಲಿ ಭಾಗವಹಿಸಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.

    ವರದಿ ಮಂಡನೆ

    ಶುಕ್ರವಾರದ ಕಲಾಪದ ವೇಳೆ ಸಭಾಪತಿ ಕೆ.ಪ್ರತಾಪಚಂದ್ರಶೆಟ್ಟಿ ವರದಿ ಒಪ್ಪಿಸಬೇಕೆಂದು ಸೂಚಿಸಿದರು. ಡಿ.15ರ ಕಹಿ ಘಟನೆಯ ವಿಚಾರಣೆಗೆ ನೇಮಕವಾಗಿದ್ದ ವಿಧಾನ ಪರಿಷತ್ ಸದನ ಸಮಿತಿ ಅಧ್ಯಕ್ಷ ಮರಿತಿಬ್ಬೇಗೌಡ ಅವರು 2 ಸಿಡಿಗಳ ಸಹಿತ 84 ಪುಟಗಳ ಮಧ್ಯಂತರ ವರದಿಯನ್ನು ಮಂಡಿಸಿದರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಧ್ಯಂತರ ವರದಿಯನ್ನು ಎಲ್ಲ ಸದಸ್ಯರಿಗೆ ಓದಲು ಕಾಲಾವಕಾಶ ನೀಡಿ ಬಳಿಕ ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು. ಪ್ರತಾಪಚಂದ್ರಶೆಟ್ಟಿ ಪ್ರತಿಕ್ರಿಯಿಸಿ ಪೂರ್ಣ ವರದಿ ಸಲ್ಲಿಸಿದ್ದರೆ ರ್ಚಚಿಸುವುದು ಸೂಕ್ತವಾಗಿತ್ತು. ಆದರೆ ಮಧ್ಯಂತರ ವರದಿಯ ಮೇಲೆ ಚರ್ಚೆ ಅರ್ಥಹೀನವೆಂದು ಹೇಳಿ ಆ ವಿಷಯಕ್ಕೆ ತೆರೆ ಎಳೆದರು.

    ನ್ಯಾಯಾಂಗ ತನಿಖೆಗೆ ಶಿಫಾರಸು

    ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ವೈಫಲ್ಯವೇ ಈ ಅಹಿತಕರ ಘಟನೆಗೆ ಕಾರಣ. ಕಾರ್ಯದರ್ಶಿಯವರ ಆಡಳಿತಾತ್ಮಕ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ವರ್ತನೆ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಸದನ ಸಮಿತಿಯು ಅಂತಿಮ ವರದಿ ಸಲ್ಲಿಸುವವರೆಗೆ ಅವರು ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧ ವಿಧಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

    ಅಂತಿಮ ವರದಿಯಲ್ಲಿ ಉಳಿದವರು

    ಕಾನೂನುಬಾಹಿರವಾಗಿ ನಡೆದುಕೊಂಡ ಉಳಿದ ಸದಸ್ಯರ ವರ್ತನೆ, ಸಭಾಪತಿ ಪೀಠದ ಬಳಿ ಹಾಜರಿದ್ದವರು, ಅಹಿತಕರ ಘಟನೆಯಲ್ಲಿ ಭಾಗಿಯಾದವರ ವಿವರಗಳನ್ನು ಅಂತಿಮ ವರದಿಯಲ್ಲಿ ನೀಡಲಾಗುವುದೆಂದು ಸಮಿತಿ ತಿಳಿಸಿದೆ. ಅಲ್ಲದೆ ಅಂತಿಮ ವರದಿ ಸಲ್ಲಿಸುವ ತನಕ ಅಹಿತಕರ ಘಟನೆ, ಸಮಿತಿ ರಚನೆ ಕುರಿತು ಸಾರ್ವಜನಿಕ ಹೇಳಿಕೆ, ಪತ್ರ ವ್ಯವಹಾರ ಮಾಡಿ ಸದನ ಹಾಗೂ ಪೀಠದ ಗೌರವಕ್ಕೆ ಚ್ಯುತಿ ತರುವಂತಹ ನಡವಳಿಕೆಗೂ ಸಮಿತಿ ನಿರ್ಬಂಧ ವಿಧಿಸಿ, ಶಿಫಾರಸು ಮಾಡಿದೆ.

    ಏನಾಗಬಹುದು?

    ಇದು ಮಧ್ಯಂತರ ವರದಿ. ಅಂತಿಮ ವರದಿ ಬರುವುದು ಬಾಕಿ ಇದೆ. ಸದನ ಸಮಿತಿ ವರದಿಯನ್ನು ಮಂಡಿಸಿದ ಮೇಲೆ ಚರ್ಚೆಯಾಗಿ ಸದನ ಅಂಗೀಕಾರ ಮಾಡಬೇಕು. ಆಗ ಮಾತ್ರ ಕ್ರಮ ಸಾಧ್ಯ. ಆದರೆ ಈವರೆಗೆ ಯಾವುದೇ ಸದನ ಸಮಿತಿ ವರದಿಗಳು ಕ್ರಮಕ್ಕೆ ಒಳಪಟ್ಟಿರುವ ಉದಾಹರಣೆಗಳಿಲ್ಲ.

    ವರದಿಯ ಪ್ರಮುಖಾಂಶ

    • ಕಾನೂನುಬಾಹಿರ ನಡವಳಿಕೆಗೆ ಡಿಸಿಎಂ ಅಶ್ವತ್ಥನಾರಾಯಣ, ಸಚಿವ ಜೆ.ಸಿ.ಮಾಧುಸ್ವಾಮಿ ಮೂಲ ಪ್ರೇರಿತರು
    • ಶ್ರೀನಿವಾಸ ಪೂಜಾರಿ ಅವರ ಪ್ರಚೋದನಾತ್ಮಕ ನಡೆ ಸಾಬೀತಾಗಿದೆ. ಇವರ್ಯಾರೂ ಸರ್ಕಾರದ ಯಾವುದೇ ಜವಾಬ್ದಾರಿ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಬಾರದು, ಇವರೊಂದಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್​ನ ಒಟ್ಟು 12 ಸದಸ್ಯರಿಗೂ ಮುಂದಿನ 2 ಅವಧಿಯ ಅಧಿವೇಶನದ ಕಾರ್ಯಕಲಾಪಗಳಿಗೆ ನಿರ್ಬಂಧ ವಿಧಿಸಬೇಕು
    • ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ತನಿಖೆಗೆ ಶಿಫಾರಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts