More

    ದೇಶದಲ್ಲೇ ಕರ್ನಾಟಕ ಪೊಲೀಸ್ ಶ್ರೇಷ್ಠ – ಬಸವರಾಜ ಬೊಮ್ಮಾಯಿ

    ಬೆಳಗಾವಿ: ಕರ್ನಾಟಕದ ಪೊಲೀಸರು ರಾಷ್ಟ್ರದಲ್ಲಿಯೇ ಅತ್ಯಂತ ಶ್ರೇಷ್ಠ ಪೊಲೀಸರಾಗಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು. ಇಲ್ಲಿನ ರಾಜ್ಯ ಮೀಸಲು ಪೊಲೀಸ್ ಪಡೆಯ ಆವರಣದಲ್ಲಿ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ 6ನೇ ಪಡೆಯ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

    ಶ್ರೇಷ್ಠ ಕರ್ನಾಟಕ ಪೊಲೀಸ್ ತಂಡಕ್ಕೆ ಸೇರಿದ ಪ್ರಶಿಕ್ಷಣಾರ್ಥಿಗಳು ಖಾಕಿ, ಶಸ್ತ್ರಾಸ್ತ್ರಗಳ ಗೌರವ ಉಳಿಸುವ ಕೆಲಸ ಮಾಡಬೇಕು. ಯಾವುದೇ ಒತ್ತಡಕ್ಕೂ ಮಣಿಯದೆ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ನಿಮ್ಮಿಂದ ಸಮಾಜಕ್ಕೆ ಅನ್ಯಾಯವಾಗಬಾರದು ಎಂದು ಸಲಹೆ ನೀಡಿದರು. ಒಂದು ವರ್ಷದ ತರಬೇತಿಯಲ್ಲಿ ಅತ್ಯುತ್ತಮ ಸಾಮರ್ಥ್ಯ, ದಕ್ಷತೆ ಮೈಗೂಡಿಸಿಕೊಂಡಿದ್ದೀರಿ. 2021ರಲ್ಲಿ ವಿದೇಶದಲ್ಲಿ ಅತ್ಯಂತ ವಿಶೇಷ ತರಬೇತಿ ಸ್ಥಳಗಳಾದ ಸ್ಕಾಟಲೆಂಡ್ ಯಾರ್ಡ್, ಅಮೆರಿಕನ್ ಪೊಲೀಸ್ ಅಕಾಡೆಮಿ ಸೇರಿ ಎಲ್ಲ ಪ್ರಮುಖ ಪೊಲೀಸ್ ತರಬೇತಿ ಶಾಲೆಗಳ ಜತೆ ಸಂಬಂಧ ಬೆಳೆಸಲಾಗುವುದು ಎಂದರು.

    30 ಲಕ್ಷ ರೂ. ಪರಿಹಾರ: ಸೇವೆಯಲ್ಲಿದ್ದಾಗ ಕರೊನಾದಿಂದ ಮೃತಪಟ್ಟ ಶಿಗ್ಗಾವಿ ಕೆಎಸ್‌ಆರ್‌ಪಿ 10ನೇ ಪಡೆಯ ಎಎಸ್‌ಐ ಭೂಪಾಲ ಮರೆಣ್ಣವರ, ಹೆಡ್ ಕಾನ್ಸ್ ಟೇಬಲ್ ವೀರಭದ್ರಪ್ಪ ವಾರದ ಕುಟುಂಬಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಲಾ 30 ಲಕ್ಷ ರೂ. ಪರಿಹಾರ ವಿತರಿಸಿದರು. ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕಕುಮಾರ್, ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಪ್ರಾಚಾರ್ಯ ರಮೇಶ ಬೋರಗಾಂವೆ, ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಹಂಜಾ ಹುಸೇನ್ ಇತರರು ಉಪಸ್ಥಿತರಿದ್ದರು.

    187 ಪ್ರಶಿಕ್ಷಣಾರ್ಥಿಗಳ ನಿರ್ಗಮನ: ಕೆಎಸ್‌ಆರ್‌ಪಿ 6ನೇ ಪಡೆಯ ಒಟ್ಟು 187 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ. ಈ ಪೈಕಿ 82 ಪದವೀಧರರು, 7 ಸ್ನಾತಕೋತ್ತರ ಪದವೀಧರರು ಹಾಗೂ 13 ಜನ ಇಂಜಿನಿಯರಿಂಗ್ ಪದವಿ ಗಳಿಸಿದ್ದಾರೆ. ಇವರೆಲ್ಲರೂ ಹೊಸದಾಗಿ ರೂಪಗೊಂಡಿರುವ ಪಠ್ಯಕ್ರಮದನ್ವಯ ಉನ್ನತ ಮಟ್ಟದ ಹೊರಾಂಗಣ ಮತ್ತು ಒಳಾಂಗಣ ತರಬೇತಿ ಪಡೆದುಕೊಂಡಿದ್ದಾರೆ.

    ಹೊರಾಂಗಣ ತರಬೇತಿಯ ಭಾಗವಾಗಿ ದೈಹಿಕ ತರಬೇತಿ, ಶಸ್ತ್ರರಹಿತ ಮತ್ತು ಶಸ್ತ್ರಸಹಿತ ಕವಾಯತು, ಆಧುನಿಕ ಆಯುಧಗಳ ಬಳಕೆ, ಲಾಠಿ ಕವಾಯತು, ಯುದ್ಧ ಕೌಶಲ, ಅಶ್ರುವಾಯು ಪ್ರಯೋಗ, ಗುಂಪು ನಿಯಂತ್ರಣ, ನಿರಾಯುಧ ಹೋರಾಟ, ವಿವಿಐಪಿ ಭದ್ರತೆ, ಗುಪ್ತ ಮಾಹಿತಿ ಸಂಗ್ರಹ, ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಪತ್ತು ನಿರ್ವಹಣೆ, ಅಗ್ನಿಶಾಮಕ ದಳಗಳ ಬಗ್ಗೆ ತರಬೇತಿ ಪಡೆದುಕೊಂಡಿದ್ದಾರೆ.

    ತರಬೇತಿ ಪಡೆಯುವ ವೇಳೆ 51 ಪ್ರಶಿಕ್ಷಣಾರ್ಥಿಗಳಿಗೆ ಕೋವಿಡ್ ತಗುಲಿ ಗುಣಮುಖರಾಗಿದ್ದಾರೆ. ಆ ಪೈಕಿ 33 ಪ್ರಶಿಕ್ಷಣಾರ್ಥಿಗಳು ತಮ್ಮ ಪ್ಲಾಸ್ಮಾ ದಾನ ಮಾಡಲು ಸ್ವಇಚ್ಛೆಯಿಂದ ಮುಂದೆ ಬಂದಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts