More

    ‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಪ್ರತಿಭಟನೆಗೆ ನಿಷೇಧವಲ್ಲ, ನಿಬಂಧನೆ ಮಾತ್ರ

    ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ ತಡೆಯಲು ಹಲೋ ನೇಬರ್ ಯೋಜನೆ, ಡ್ರಗ್ಸ್ ದಂಧೆ ತಡೆಯಲು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ಸೇರಿ ಬೆಂಗಳೂರು ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಾರ್ಯಪ್ರವೃತ್ತರಾಗಿದ್ದಾರೆ. ಶುಕ್ರವಾರ ವಿಜಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ಫೋನ್​ಇನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಮಿಷನರ್, ಪೊಲೀಸ್ ಇಲಾಖೆ ಕಾರ್ಯವೈಖರಿ, ಭ್ರಷ್ಟಾಚಾರ ಹಾಗೂ ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಹೇಗಿರಬೇಕು ಎಂಬುದರ ಕುರಿತು ಹಂಚಿಕೊಂಡ ಸಮಗ್ರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ರಾಜಧಾನಿಯಲ್ಲಿ ಪ್ರತಿಭಟನೆ ಮತ್ತು ರ‍್ಯಾಲಿ, ಮೆರವಣಿಗೆ ಮಾಡುವುದಕ್ಕೆ ನಿಷೇಧ ವಿಧಿಸುವುದಿಲ್ಲ. ಬದಲಿಗೆ ಸಂಘಟನಾಕಾರರಿಗೆ ಷರತ್ತು ವಿಧಿಸುತ್ತೇವೆ ಎಂಬ ಭಾಸ್ಕರ್ ರಾವ್ ಸ್ಪಷ್ಪಪಡಿಸಿದರು. ಹಕ್ಕುಗಳು ಮತ್ತು ಬೇಡಿಕೆ ಈಡೇರಿಸಿಕೊಳ್ಳಲು ಸರ್ಕಾರಕ್ಕೆ ಒತ್ತಾಯ ಮಾಡಲು ನೊಂದ ಜೀವಗಳು ಬರುತ್ತವೆ. ಅವರ ಕೂಗು ಸರ್ಕಾರಕ್ಕೆ ತಲುಪಿಸುವ ಕೆಲಸ ನಮ್ಮ ಮೇಲೂ ಇದೆ. ಜತೆಗೆ ನಗರದಲ್ಲಿ ಸಂಚಾರ ದಟ್ಟಣೆ ಮತ್ತು ನಿತ್ಯದ ಕೆಲಸ ಕಾರ್ಯಗಳಿಗೂ ಅಡ್ಡಿ ಆಗದಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಸಹ ಪೊಲೀಸರ ಮೇಲಿದೆ. ಅದಕ್ಕಾಗಿ ಸಾರ್ವಜನಿಕ ಆಸ್ತಿಪಾಸ್ತಿಗೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಪ್ರತಿಭಟನೆ, ರ‍್ಯಾಲಿ ನಡೆಸಲು ಅವಕಾಶ ಕಲ್ಪಿಸುತ್ತೇವೆ. ಜತೆಗೆ ಕೆಲ ಷರತ್ತುಗಳನ್ನು ವಿಧಿಸುತ್ತೇವೆ ಎಂದು ತಿಳಿಸಿದರು.

    ಹೌದು.. ವಾರದ ರಜೆ ಸಿಗುತ್ತಿಲ್ಲ

    ಬೆಂಗಳೂರಿನಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕೊರತೆ ಕಾಡುತ್ತಿದೆ. 18 ಸಾವಿರ ಪೊಲೀಸರು ಮಾತ್ರ ಇದ್ದಾರೆ. ನಗರದ ಜನಸಂಖ್ಯೆಗೆ 32 ಸಾವಿರ ಸಿಬ್ಬಂದಿ ಅಗತ್ಯವಿದೆ. ಇರುವ ಪೊಲೀಸರನ್ನೇ ಬಳಸಿಕೊಂಡು ಕಾನೂನು ಸುವ್ಯವಸ್ಥೆ, ಸಂಚಾರ ದಟ್ಟಣೆ ನಿವಾರಣೆ ಮತ್ತು ಅಪರಾಧ ತನಿಖೆ ನಡೆಸಲಾಗುತ್ತಿದೆ. ಅದಕ್ಕಾಗಿ ಸರಿಯಾಗಿ ವಾರದ ರಜೆ ಸಿಗುತ್ತಿಲ್ಲ ಎಂದು ಭಾಸ್ಕರ್ ರಾವ್ ಅಸಹಾಯಕತೆ ತೋಡಿಕೊಂಡರು.

    ಗೂಗಲ್ ಪೇ, ಬೀಮ್ ಅಳವಡಿಸಿ

    ಸಂಚಾರ ದಟ್ಟಣೆ ಉಲ್ಲಂಘನೆಗೆ ದಂಡ ವಸೂಲಿ ಮಾಡುವಾಗ ಮಾಗಡಿ ರಸ್ತೆ ಸಂಚಾರ ಪೊಲೀಸರು ಕ್ರೆಡಿಟ್, ಡೆಬಿಟ್ ಕಾರ್ಡ್​ನಲ್ಲಿ ಹಣ ಪಡೆಯುವಾಗ ಶೇ.2 ಸರ್ವೀಸ್ ಚಾರ್ಜ್ ಕೇಳಿದರು ಎಂದು ಬೈಕ್ ಸವಾರರೊಬ್ಬರು ದೂರು ನೀಡಿದರು. ಇದಕ್ಕೆ ಉತ್ತರಿಸಿದ ಭಾಸ್ಕರ್ ರಾವ್, ಯಾವುದೇ ಕಾರಣಕ್ಕೂ ಸರ್ವೀಸ್ ಚಾರ್ಜ್ ಕೊಡಬೇಡಿ. ಕೇಳಿದರೆ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ತಕ್ಷಣ ದೂರು ನೀಡುವಂತೆ ತಿಳಿಸಿದರು. ಜತೆಗೆ ಅಲ್ಲೇ ಇದ್ದ ಸಂಚಾರ ಪೊಲೀಸ್ ಅಧಿಕಾರಿಗೆ, ಇನ್ನುಮುಂದೆ ಗೂಗಲ್ ಪೇ, ಬೀಮ್ ಫೋನ್ ಪೇ ಸೇರಿ ಆನ್​ಲೈನ್​ನಲ್ಲಿಯೂ ದಂಡ ವಸೂಲಿ ಮಾಡುವ ಯೋಜನೆ ಶುರು ಮಾಡಿ ಎಂದು ಸೂಚನೆ ನೀಡಿದರು.

    ಕೌಟುಂಬಿಕ ಕಲಹ ಪರಿಹಾರಕ್ಕೆ ಕೇಂದ್ರ

    ಗಂಡ, ಹೆಂಡತಿ ಮತ್ತು ಕೌಟುಂಬಿಕ ಕಲಹಗಳನ್ನು ಬಗೆಹರಿಸಲು ಇನ್​ಫ್ಯಾಂಟ್ರಿ ರಸ್ತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಠಾಣೆಗೂ ಹೋಗುವ ಮೊದಲು ಇಲ್ಲಿಗೆ ಬಂದು ದೂರು ನೀಡಿ. ಎರಡೂ ಕಡೆಯವರನ್ನು ಕೂರಿಸಿ ಕೌನ್ಸೆಲಿಂಗ್ ಮಾಡಿ ಸಮಸ್ಯೆ ಪರಿಹರಿಸುತ್ತಾರೆ. ಇದಕ್ಕೆ ನಾನೇ (ಪೊಲೀಸ್ ಕಮಿಷನರ್) ಅಧ್ಯಕ್ಷ ಆಗಿರುತ್ತೇನೆ ಎಂದು ಭಾಸ್ಕರ್ ರಾವ್, ಹೂವಿನ ಹಡಗಲಿಯಿಂದ ಕರೆ ಮಾಡಿದ್ದ ವ್ಯಕ್ತಿಗೆ ಭರವಸೆ ನೀಡಿದರು.

    ಟೋಯಿಂಗ್ ವಾಹನಕ್ಕೆ ಸಿಸಿ ಕ್ಯಾಮರಾ

    ನೋ ಪಾರ್ಕಿಂಗ್​ ಸ್ಥಳದಲ್ಲಿ ಮತ್ತು ಟ್ರಾಫಿಕ್ ಫೈನ್ ವಿಧಿಸುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದರೆ ಲಂಚ ಪಡೆಯುವುದಿಲ್ಲ ಎಂದು ದಾಸರಹಳ್ಳಿಯ ವಸಂತ್​ಕುಮಾರ್ ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಭಾಸ್ಕರ್ ರಾವ್, ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿದರೆ ದಂಡ ಕಟ್ಟುವ ಮತ್ತು ಲಂಚ ಕೊಡುವ ಸಂದರ್ಭವೇ ಬರುವುದಿಲ್ಲ. ಮನೆಯಲ್ಲಿ ಹೆಂಡತಿ ಮಕ್ಕಳು ಕಾಯುತ್ತಿರುತ್ತಾರೆ. ಅವರಿಗಾಗಿ ನೀವು ಹೆಲ್ಮೆಟ್, ಸೀಟ್ ಬೆಲ್ಟ್ ಸೇರಿ ಸಂಚಾರ ನಿಯಮ ಪಾಲಿಸಿ ಸುರಕ್ಷಿತವಾಗಿ ಮನೆ ಸೇರಿ. ಪೊಲೀಸರಿಗಾಗಿ ನಿಯಮ ಪಾಲಿಸಬೇಡಿ. ಟೋಯಿಂಗ್ ವಾಹನಕ್ಕೆ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

    ನೇಮಕಾತಿಗೆ ಯುವಕರು ಸಿಗುತ್ತಿಲ್ಲ

    ರಾಜ್ಯದಲ್ಲಿ ಪೊಲೀಸ್ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತಿದೆ. ಇಲ್ಲಿಯವರೆಗೂ ನೇಮಕಾತಿ ಪ್ರಶ್ನಿಸಿ ಯಾರೊಬ್ಬರೂ ಕೋರ್ಟ್​ಗೆ ಹೋಗಿಲ್ಲ. ಇನ್ನೂ ನಗರದಲ್ಲಿ ಕಾನ್​ಸ್ಟೆಬಲ್​ಗಳ ನೇಮಕಾತಿಗೆ ಉತ್ತರ ಕರ್ನಾಟಕದ ಯುವಕರು ಇಲಾಖೆಗೆ ಹೆಚ್ಚಾಗಿ ಬರುತ್ತಿದ್ದಾರೆ. ಆದರೂ ಕೊರತೆ ಕಾಡುತ್ತಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶ ಯುವಕರು ಪರೀಕ್ಷೆ ಪಾಸ್ ಮಾಡಿ ಇಲಾಖೆಗೆ ಸೇರುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದರು.

    ಅಪರಾಧ ಪ್ರಕರಣ ತಡೆಗಟ್ಟುವ ಭರವಸೆ

    ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಜತೆ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಲವು ನಿವಾಸಿಗಳು ಕರೆ ಮಾಡಿ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ಸಮಸ್ಯೆ, ಕುಂದು-ಕೊರತೆಗಳ ಬಗ್ಗೆ ಗಮನಸೆಳೆದರು. ಸಾರ್ವಜನಿಕರ ಎಲ್ಲ ಪ್ರಶ್ನೆಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ಪೊಲೀಸ್ ಆಯುಕ್ತರು, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

    ನಗರದಲ್ಲಿ ನಡೆಯುತ್ತಿರುವ ಕಳ್ಳತನ, ದರೋಡೆ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿ ಎಲ್ಲ ಬಗೆಯ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಪೊಲೀಸರು ಶ್ರಮಿಸುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts