

| ಅವಿನಾಶ ಮೂಡಂಬಿಕಾನ ಬೆಂಗಳೂರು
ಪುರುಷರಿಗೆ ಸರಿಸಮನಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತ ಮುನ್ನಡೆಯುತ್ತಿರುವ ಹೆಣ್ಣುಮಕ್ಕಳು ಹೆತ್ತವರಿಗೆ ಮಾತ್ರ ಭಾರ ಎಂಬ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಕಾನೂನುಬದ್ಧ ನಿರ್ದಿಷ್ಟ ವಯಸ್ಸಿಗೂ ಮೊದಲೇ ಹೆಣ್ಣುಮಕ್ಕಳನ್ನು ಸಂಸಾರದ ನೌಕೆ ಹತ್ತಿಸುವ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ಹೆಚ್ಚುತ್ತಿರುವುದು ಒಂದೆಡೆಯಾದರೆ, ಇಂತಹ ಪ್ರಕರಣಗಳಲ್ಲಿ ಕರ್ನಾಟಕವೇ ನಂ.1 ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. 2020ರಲ್ಲಿ ರಾಜ್ಯಾದ್ಯಂತ 184 ಬಾಲ್ಯ ವಿವಾಹ ಪ್ರಕರಣಗಳು ಬೆಳಕಿಗೆ ಬಂದಿರುವುದು ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿದಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ಸಿಆರ್ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ಈ ಮಾಹಿತಿ ಬಯಲಾಗಿದೆ. ದೇಶದಲ್ಲಿ ಕಳೆದ 3 ವರ್ಷಗಳಲ್ಲಿ 1,809 ಚೈಲ್ಡ್ ಮ್ಯಾರೇಜ್ ಪ್ರಕರಣಗಳು ಬೆಳಕಿಗೆ ಬಂದಿವೆ. ಕರೊನಾ ಬರುವುದಕ್ಕೂ ಮುನ್ನ ಮತ್ತು ನಂತರಕ್ಕೆ ಹೋಲಿಸಿದರೆ ಕೋವಿಡ್ ಲಾಕ್ಡೌನ್ ಜಾರಿಯಾದ ವೇಳೆ ಶೇ.50 ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದೆ. ಬಹುತೇಕ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವುದಿಲ್ಲ. ಆಯಾ ಕೌಟುಂಬಿಕ ಚೌಕಟ್ಟಿನಲ್ಲೇ ಗೌಪ್ಯವಾಗಿ ಮುಗಿದುಹೋಗುತ್ತದೆ. ಶೇ.50 ಪ್ರಕರಣ ಠಾಣೆ ಮೆಟ್ಟಿಲೇರುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ವರ್ಷದಿಂದ ವರ್ಷಕ್ಕೆ ಹೆಚ್ಚಳ: 2018ರಲ್ಲಿ ದೇಶಾದ್ಯಂತ 501 ಕೇಸ್ ದಾಖಲಾದರೆ, 2019ರಲ್ಲಿ 523 ಹಾಗೂ 2020ರಲ್ಲಿ 785 ಪ್ರಕರಣ ವರದಿ ಯಾಗಿವೆ. ಠಾಣೆ ಮೆಟ್ಟಿಲೇರಿದ ಕೇಸ್ಗಳ ಪೈಕಿ 1,174 ಪ್ರಕರಣ ತನಿಖಾ ಹಂತದಲ್ಲಿದ್ದರೆ, 389 ಪ್ರಕರಣ ತನಿಖೆಗೆ ಬಾಕಿ ಇವೆ. 2092 ಪ್ರಕರಣಗಳು ಕೋರ್ಟ್ ವಿಚಾರಣಾ ಹಂತದಲ್ಲಿದೆ. ಕರ್ನಾಟಕದಲ್ಲಿ 2018ರಲ್ಲಿ ಕೇವಲ 73 ಕೇಸ್ ಠಾಣೆ ಮೆಟ್ಟಿಲೇರಿದರೆ, 2019ರಲ್ಲಿ 111ಕ್ಕೆ ಏರಿಕೆಯಾಗಿತ್ತು. 2020ರಲ್ಲಿ ಇದರ ಪ್ರಮಾಣ 184ಕ್ಕೆ ಹೆಚ್ಚಳವಾಗಿ ದೇಶದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹ ನಡೆಯುವ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ. ಅಸ್ಸಾಂನಲ್ಲಿ 138 ಕೇಸ್ ದಾಖಲಾಗಿದ್ದು, 2ನೇ ಸ್ಥಾನದಲ್ಲಿದೆ. ಪ.ಬಂಗಾಳ-98, ತಮಿಳುನಾಡು-77, ತೆಲಂಗಾಣ-60, ಮಹಾರಾಷ್ಟ್ರದಲ್ಲಿ 50 ಎಫ್ಐಆರ್ಗಳು ದಾಖಲಾಗಿದ್ದು, ಇವುಗಳು ನಂತರದ ಸ್ಥಾನದಲ್ಲಿದೆ. 2018ರಲ್ಲಿ ಅಸ್ಸಾಂನಲ್ಲಿ 88 ಕೇಸ್ ದಾಖಲಾದರೆ, ಕರ್ನಾಟಕದಲ್ಲಿ 73 ಎಫ್ಐಆರ್ ದಾಖಲಾಗಿದೆ. 2019ರಲ್ಲೂ ಅಸ್ಸಾಂನಲ್ಲಿ 115 ಕೇಸ್ ದಾಖಲಾಗಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ 111 ಕೇಸ್ ದಾಖಲಾಗಿ 2ನೇ ಸ್ಥಾನದಲ್ಲಿತ್ತು.
ಏನು ಶಿಕ್ಷೆ?: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಬಾಲ್ಯ ವಿವಾಹ ತಡೆ ಕಾಯ್ದೆ 2006ರ ಪ್ರಕಾರ ತಪ್ಪಿತಸ್ಥರಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶಗಳಿವೆ. ಬಾಲ್ಯ ವಿವಾಹ ಕಂಡು ಬಂದಲ್ಲಿ ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಿಸಿಕೊಳ್ಳಲು ಪೊಲೀಸರಿಗೆ ಅವಕಾಶಗಳಿವೆ. ಆದರೆ ಈ ಕಾಯ್ದೆ ಬಲವಾಗಿಲ್ಲ ಎಂಬ ಅಭಿಪ್ರಾಯವಿದೆ.
ಜಾಗೃತಿಗೆ ಸಮಿತಿ ರಚನೆ: ಬಾಲ್ಯ ವಿವಾಹ ತಡೆಗಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ರಾಜ್ಯ ಮಟ್ಟದ ಸಮಿತಿ 6 ತಿಂಗಳಿಗೊಮ್ಮೆ ಸಭೆ ನಡೆಸಿ ಬಾಲ್ಯ ವಿವಾಹ ತಡೆಗೆ ಜಾರಿಗೊಳಿಸಿರುವ ನಿರ್ದಿಷ್ಟ ಕ್ರಮಗಳನ್ನು ಅನುಷ್ಠಾನಕ್ಕೆ ತರಲಿದೆ. ಕೆಲ ಎನ್ಜಿಒ ಸಹಕಾರದೊಂದಿಗೆ ಇಲಾಖೆಯು ಬಾಲ್ಯ ವಿವಾಹ ತಡೆಗಟ್ಟಲು ಇನ್ನೂ ಕೆಲ ನೂತನ ಕ್ರಮ ಜಾರಿಗೆ ತರಲು ಚಿಂತಿಸಿದೆ.
ಸಮಸ್ಯೆ ವಿಶ್ವವ್ಯಾಪಿ: ಭಾರತದಲ್ಲಿ ಕೂಲಿ ಕಾರ್ವಿುಕರು, ಉತ್ತರದ ಗ್ರಾಮೀಣ ಭಾಗದ ಕೃಷಿಕರು, ಅನಕ್ಷರಸ್ಥರೇ ಹೆಚ್ಚಾಗಿ ಈ ಪಿಡುಗಿಗೆ ಬಲಿಯಾಗುತ್ತಾರೆ. ಒಂದು ಸಮೀಕ್ಷೆ ಪ್ರಕಾರ ವಿಶ್ವಾದ್ಯಂತ ಅಂದಾಜು 600 ಮಿಲಿಯನ್ಗೂ ಅಧಿಕ ಮಹಿಳೆಯರು ಬಾಲ್ಯದಲ್ಲೇ ವಿವಾಹವಾಗಿದ್ದಾರೆ. ಈ ಪೈಕಿ ಅರ್ಧದಷ್ಟು ಪ್ರಕರಣ ಭಾರತ, ಬಾಂಗ್ಲಾದೇಶ, ಬ್ರೆಜಿಲ್ ಮತ್ತು ನೈಜೀರಿಯದ್ದಾಗಿವೆ.
ಶಾಲೆ ಮುಚ್ಚಿದ್ದರಿಂದಲೂ ಪ್ರಕರಣ ಹೆಚ್ಚಳ: ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ ವರದಿಯಾಗುತ್ತಿವೆ. ಹಳೇ ಮೈಸೂರು, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಕಲಬುರಗಿ, ಕೊಪ್ಪಳ, ರಾಯಚೂರು, ಹಾವೇರಿ, ಬಾಗಲಕೋಟೆ, ಬೆಳಗಾವಿ, ವಿಜಯಪುರ, ಗದಗ, ತುಮಕೂರು ಸೇರಿ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕೋವಿಡ್ನಿಂದ ಶಾಲೆ ಮುಚ್ಚಿದ ಬಳಿಕ ಬಾಲ್ಯ ವಿವಾಹದ ಪ್ರಮಾಣ ವರ್ಷಕ್ಕೆ ಶೇ.25 ರಷ್ಟು ಹೆಚ್ಚಾಗಿರುವ ಮಾಹಿತಿ ಇದೆ.
ಗಡಿ ಭಾಗದಲ್ಲಿ ಬಡತನ, ಭದ್ರತೆ ದೃಷ್ಟಿಯಿಂದ ಕೂಲಿ ಕಾರ್ವಿುಕರು ಪಿಡುಗಿಗೆ ಒಳಗಾಗುತ್ತಾರೆ. ಹೆಣ್ಣು ಮಕ್ಕಳಿಗೂ ಸೂಕ್ತ ಶಿಕ್ಷಣ ಸಿಕ್ಕರೆ ಬಾಲ್ಯ ವಿವಾಹ ತಡೆಗಟ್ಟಬಹುದು.
| ಪ್ರಮೀಳಾ ನಾಯ್ಡು ಅಧ್ಯಕ್ಷೆ , ಮಹಿಳಾ ಆಯೋಗ