More

    ಕರುನಾಡು ಸುಸಂಸ್ಕೃತಿಯ ಬೀಡು

    ಗದಗ: ಕರ್ನಾಟಕ ನಾದ-ನೃತ್ಯ-ನಾಟಕಗಳ ನಾಡು, ಶ್ರೀಮಂತಿಕೆಯ ಬೀಡು. ರಾಜ್ಯದ ನಕ್ಷೆಯಲ್ಲಿ ಗದಗ ಜಿಲ್ಲೆಗೆ ವಿಶಿಷ್ಟ ಸ್ಥಾನವಿದೆ. ಪ್ರವಾಸಿಗರನ್ನು ಬೆರಗುಗೊಳಿಸುವ ವೀರನಾರಾಯಣ-ತ್ರಿಕೋಟೇಶ್ವರ ದೇವಾಲಯಗಳು, ಲಕ್ಕುಂಡಿ ಜಿನಾಲಯಗಳು, ದಾನ ಚಿಂತಾಮಣಿ ಅತ್ತಿಮಬ್ಬೆ ಸ್ಮಾರಕಗಳು, ಶಿಲ್ಪಕಲೆ, ಪಂ. ಪುಟ್ಟರಾಜ ಗವಾಯಿಗಳವರ ಆಶ್ರಮದ ಮಧುರ ಸಂಗೀತ ಜಿಲ್ಲೆಗೆ ಮುಕುಟಪ್ರಾಯವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

    ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಕನ್ನಡ ನಾಡು ಸುಂದರ ಬೀಡು. ಕನ್ನಡ ನುಡಿ ಸುಸಂಸ್ಕೃತಿಯ ಸಂಕೇತ. ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕನ್ನಡ ಭಾಷೆ ಪ್ರಾಚೀನವಾದದ್ದು’ ಎಂದರು.

    ಗದುಗಿನ ಕೀರ್ತಿ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿದ ಹುಯಿಲಗೋಳ ನಾರಾಯಣರಾವ್, ಡಾ. ಎಂ.ಎಸ್. ಸುಂಕಾಪುರ, ಕೀರ್ತಿನಾಥ ಕುರ್ತಕೋಟಿ, ಡಾ. ಚನ್ನವೀರ ಕಣವಿ. ಡಾ ಎನ್.ಕೆ. ಕುಲಕರ್ಣಿ, ಮಾಧವ ಕುಲಕರ್ಣಿ ಡಾ. ಎಚ್. ಎನ್. ಹೂಗಾರ, ಭಾರತ ರತ್ನ ಪುರಸ್ಕೃತ ಹಿಂದುಸ್ಥಾನಿ ಗಾಯಕ ಪಂಡಿತ್ ಭೀಮಸೇನ ಜೋಶಿ, ಕ್ರಿಕೆಟಿಗ ಸುನಿಲ ಜೋಶಿ ಇವರೆಲ್ಲ ಗದುಗಿನ ಹೆಮ್ಮೆಯಾಗಿದ್ದಾರೆ ಎಂದರು.

    ಅಲ್ಲದೆ, ಪುಲಿಗೆರೆ ತಿರುಳ್ಗನ್ನಡದ ಪ್ರದೇಶವೆಂದು ಕ್ರಿ.ಶ. 10ನೇ ಶತಮಾನದ ಮಹಾಕವಿ ಪಂಪನ ಪ್ರಶಂಸೆಯಾಗಿದೆ. ಲಕ್ಕುಂಡಿಯನ್ನು ಧಾರ್ವಿುಕ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ದಾನ ಚಿಂತಾಮಣಿ ಎಂಬ ಬಿರುದಿಗೆ ಪಾತ್ರಳಾದ ಅತ್ತಿಮಬ್ಬೆ ರನ್ನ ಕವಿಗೆ ಆಶ್ರಯ ನೀಡಿದ್ದಳು. ಪೊನ್ನ ಕವಿಯ ಶಾಂತಿಪುರಾಣದ 1000 ಪ್ರತಿಗಳನ್ನು ಬರೆಸಿ ದಾನ ಮಾಡಿದ ರೋಚಕ ಸಂಗತಿ ನಾಡು-ನುಡಿ ನೆಲಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.

    1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗದುಗಿನ ಹುಯಿಲಗೋಳ ನಾರಾಯಣರಾವ್ ಮಹಾತ್ಮ ಗಾಂಧೀಜಿಯವರ ಸಮ್ಮುಖದಲ್ಲಿ ಉದಯವಾಗಲಿ ಚಲುವ ಕನ್ನಡ ನಾಡು ಎಂಬ ಗೀತೆಯನ್ನು ರಚಿಸಿ ಹಾಡಿರುವುದು ಕನ್ನಡಿಗರಲ್ಲಿ ಕನ್ನಡದ ಬಗ್ಗೆ ಶ್ರದ್ಧೆ, ಗೌರವ, ಭಕ್ತಿಯ ಹೊಳೆಯನ್ನು ಹರಿಸಲು ಮುನ್ನುಡಿ ಬರೆಯಿತು ಎಂದರು.

    ರಾಜ್ಯದಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾದವರ ಪ್ರಮಾಣದಲ್ಲಿ ಗದಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು ಅದಕ್ಕಾಗಿ ಶ್ರಮಿಸಿದ ಎಲ್ಲ ಕರೊನಾ ಸೇನಾನಿಗಳಿಗೆ ಸಚಿವರು ಧನ್ಯವಾದ ಅರ್ಪಿಸಿದರು.

    ಇದಕ್ಕೂ ಮುನ್ನ ನಗರದ ಮುನ್ಸಿಪಲ್ ಕಾಲೇಜ್ ಆವರಣದಲ್ಲಿ ಭುವನೇಶ್ವರಿ ಪ್ರತಿಮೆಗೆ ಸಚಿವರು ಪುಷ್ಪನಮನ ಸಲ್ಲಿಸಿದರು. ಶಾಸಕ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ, ಉಪಾಧ್ಯಕ್ಷೆ ಶೋಭಾ ಮೇಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ಜಿಪಂ ಸಿಇಒ ಡಾ.ಆನಂದ ಕೆ, ಎಸ್ಪಿ ಯತೀಶ್ ಎನ್, ಇತರರು. ಇದ್ದರು. ಪಂ.ಪುಟ್ಟರಾಜ ಗವಾಯಿ ಸಂಗೀತ ಶಾಲೆ ವಿದ್ಯಾರ್ಥಿಗಳು ನಾಡಗೀತೆ ಪ್ರಸ್ತುತಪಡಿಸಿದರು. ದತ್ತಪ್ರಸನ್ನ ಪಾಟೀಲ ಹಾಗೂ ಲಕ್ಷ್ಮಿದೇವಿ ಗವಾಯಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts