More

    ವಿಜಯ್ ಹಜಾರೆ ಟ್ರೋಫಿಯಲ್ಲಿ ವಿಜಯದ ಹಾದಿಗೆ ಕರ್ನಾಟಕ, ನಾಕೌಟ್ ಆಸೆ ಜೀವಂತ

    ತಿರುವನಂತಪುರ: ಸ್ಪಿನ್ನರ್ ಪ್ರವೀಣ್ ದುಬೆ (29ಕ್ಕೆ 4) ಬಿಗಿ ಬೌಲಿಂಗ್ ದಾಳಿ ಹಾಗೂ ಆರಂಭಿಕ ಆರ್. ಸಮರ್ಥ್ (96*ರನ್, 129 ಎಸೆತ, 9 ಬೌಂಡರಿ) ದಿಟ್ಟ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡಕ್ಕೆ 7 ವಿಕೆಟ್‌ಗಳಿಂದ ಸೋಲುಣಿಸಿದೆ. ಈ ಜಯದೊಂದಿಗೆ ಮನೀಷ್ ಪಾಂಡೆ ಪಡೆ ನಾಕೌಟ್‌ಗೇರುವ ಆಸೆ ಜೀವಂತ ಉಳಿಸಿಕೊಂಡಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ ತಂಡ ಆರಂಭಿಕ ಯಶಸ್ವಿ ಜೈಸ್ವಾಲ್ (61ರನ್, 91 ಎಸೆತ, 5 ಬೌಂಡರಿ) ಅರ್ಧಶತಕದ ಹೊರತಾಗಿಯೂ 9 ವಿಕೆಟ್‌ಗೆ 208 ರನ್‌ಗಳ ಸಾಧಾರಣ ಮೊತ್ತ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಕರ್ನಾಟಕ ತಂಡ ಆರ್. ಸಮರ್ಥ್ ಆಸರೆಯಲ್ಲಿ 45.3 ಓವರ್‌ಗಳಲ್ಲಿ 3 ವಿಕೆಟ್‌ಗೆ 211 ರನ್ ಪೇರಿಸಿ ಜಯಿಸಿತು. ಕಳೆದ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಹೀನಾಯವಾಗಿ ಸೋತಿದ್ದ ರಾಜ್ಯ ತಂಡ ಈ ಬಾರಿ ಸರ್ವಾಂಗೀಣ ನಿರ್ವಹಣೆ ತೋರಿತು. ಇದರೊಂದಿಗೆ ಕರ್ನಾಟಕ ತಂಡ ಬಿ ಗುಂಪಿನಲ್ಲಿ 2ನೇ ಸ್ಥಾನ ಕಾಯ್ದುಕೊಂಡಿತು.

    ಕಾರ್ಯಪ್ಪ ಬಿಗಿ ದಾಳಿ
    ಪ್ರವೀಣ್ ದುಬೆ ವಿಕೆಟ್ ಬೇಟೆಯಾಡಿದರೆ, ಮತ್ತೋರ್ವ ಸ್ಪಿನ್ನರ್ ಕೆಸಿ ಕಾರ್ಯಪ್ಪ 10 ಓವರ್‌ಗಳ ದಾಳಿಯಲ್ಲಿ 2 ಮೇಡನ್ ಸಹಿತ ಕೇವಲ 18 ರನ್ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದರು. ಮತ್ತೋರ್ವ ಸ್ಪಿನ್ನರ್ ಜೆ. ಸುಚಿತ್ ಕೂಡ 10 ಓವರ್‌ಗಳಲ್ಲಿ 34 ರನ್ ಬಿಟ್ಟುಕೊಟ್ಟು 1 ವಿಕೆಟ್ ಪಡೆದರು. ಈ ತ್ರಿವಳಿ ಸ್ಪಿನ್ ದಾಳಿ ಎದುರು ಮುಂಬೈ ರನ್‌ಗಾಗಿ ಪರದಾಡಿತು.

    ಸಮರ್ಥ್ ಆಸರೆ
    ರೋಹನ್ ಕದಂ (44) ಜತೆಗೂಡಿ ಮೊದಲ ವಿಕೆಟ್‌ಗೆ 95 ರನ್ ಸೇರಿಸುವ ಮೂಲಕ ಸಮರ್ಥ್ ರಾಜ್ಯದ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಕೆವಿ ಸಿದ್ಧಾರ್ಥ್ (17) ಮತ್ತು ನಾಯಕ ಮನೀಷ್ ಪಾಂಡೆ (5) ವಿಕೆಟ್ ಅಲ್ಪ ಅಂತರದಲ್ಲಿ ಉರುಳಿತು. ಆಗ ಸಮರ್ಥ್ ಜತೆಗೂಡಿದ ಅನುಭವಿ ಬ್ಯಾಟರ್ ಕರುಣ್ ನಾಯರ್ (39*) ಮುರಿಯದ 4ನೇ ವಿಕೆಟ್‌ಗೆ 77 ರನ್ ಸೇರಿಸಿ ಇನ್ನೂ 4.3 ಓವರ್ ಬಾಕಿ ಇರುವಂತೆಯೇ ಗೆಲುವು ತಂದರು.

    ಮುಂಬೈ: 9 ವಿಕೆಟ್‌ಗೆ 208 (ಯಶಸ್ವಿ ಜೈಸ್ವಾಲ್ 61, ಅರ್ಮಾನ್ ಜಾರ್ 43, ಸೂರ್ಯಕುಮಾರ್ 8, ಹಾರ್ದಿಕ್ ತಮೋರ್ 46*, ಪ್ರವೀಣ್ ದುಬೆ 29ಕ್ಕೆ 4, ಕೆಸಿ ಕಾರ್ಯಪ್ಪ 34ಕ್ಕೆ 1, ವಿ. ಕೌಶಿಕ್ 25ಕ್ಕೆ 1, ಆರ್. ಸಮರ್ಥ್ 14ಕ್ಕೆ 1, ಜೆ. ಸುಚಿತ್ 34ಕ್ಕೆ 1), ಕರ್ನಾಟಕ: 45.3 ಓವರ್‌ಗಳಲ್ಲಿ 3 ವಿಕೆಟ್‌ಗೆ 211 (ಆರ್. ಸಮರ್ಥ್ 96*, ರೋಹನ್ ಕದಂ 44, ಕೆವಿ ಸಿದ್ಧಾರ್ಥ್ 17, ಕರುಣ್ ನಾಯರ್ 39*, ಸೋಲಂಕಿ 48ಕ್ಕೆ 2, ತನುಷ್ 44ಕ್ಕೆ 1).

    ಕರ್ನಾಟಕಕ್ಕೆ ಭಾನುವಾರದ ಪಂದ್ಯ
    ಎದುರಾಳಿ: ಬರೋಡ
    ಆರಂಭ: ಬೆಳಗ್ಗೆ 9.00

    VIDEO| ಮಂಡಿಯೂರಿ ಮಾಡಿದ ಪ್ರೇಮ ನಿವೇದನೆ: ಕ್ರಿಕೆಟ್​ ಮಧ್ಯೆ ವೀಕ್ಷಕರಿಗೆ ಸಿಕ್ಕ ಸವಿ ದೃಶ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts