More

    ಶಾಸಕ ಈಶ್ವರ್ ಖಂಡ್ರೆಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್; ಕೋವಿಡ್ ನಿಧಿಗೆ ದಂಡದ ಮೊತ್ತ

    ಬೆಂಗಳೂರು: ಚುನಾವಣಾ ತಕರಾರು ಅರ್ಜಿ ಸಂಬಂಧ ನೋಟಿಸ್ ಹಾಗೂ ಸಮನ್ಸ್ ಜಾರಿಗೊಳಿಸಿದ ಹೊರತಾಗಿಯೂ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆಗೆ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರ್ ಖಂಡ್ರೆ ಅಕ್ರಮ ನಡೆಸಿ ಆಯ್ಕೆಯಾಗಿದ್ದು, ಅವರನ್ನು ಅನರ್ಹಗೊಳಿಸಬೇಕೆಂದು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಕೆ.ಸಿದ್ರಾಮ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ನಿರಂತರವಾಗಿ ಗೈರಾದ ಕಾರಣದಿಂದ ಈಶ್ವರ್ ಖಂಡ್ರೆ ಅವರಿಗೆ 5 ಲಕ್ಷ ರೂ. ದಂಡ ವಿಧಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠ, ದಂಡದ ಮೊತ್ತವನ್ನು ಮುಖ್ಯಮಂತ್ರಿ ಕೋವಿಡ್-19 ಸುರಕ್ಷಾ ನಿಧಿಗೆ ಪಾವತಿಸುವಂತೆ ಸೂಚಿಸಿದೆ.

    ಪ್ರಕರಣದ ವಿಚಾರಣೆಯಿಂದ ಕೈಬಿಟ್ಟಿದ್ದ ಕೋರ್ಟ್: ಚುನಾವಣಾ ತಕರಾರು ಅರ್ಜಿ ಸಂಬಂಧ 2018ರಿಂದಲೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಅರ್ಜಿಯಲ್ಲಿ ಮೊದಲನೇ ಪ್ರತಿವಾದಿಯಾದ ಈಶ್ವರ್ ಖಂಡ್ರೆಗೆ ನೋಟಿಸ್ ಜಾರಿಗೊಳಿಸಿದ್ದ ಹೈಕೋರ್ಟ್, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು. ಆಕ್ಷೇಪಣೆ ಸಲ್ಲಿಸದ ಹಿನ್ನೆಲೆಯಲ್ಲಿ ಸಮನ್ಸ್ ಸಹ ಜಾರಿ ಮಾಡಿತ್ತು. ಹೀಗಿದ್ದರೂ ಖಂಡ್ರೆ ವಿಚಾರಣೆಗೆ ಗೈರಾಗಿದ್ದರು. ಇದರಿಂದ ಪ್ರಕರಣದ ವಿಚಾರಣೆಯಿಂದ ಅವರನ್ನು ಕೈಬಿಟ್ಟು 2019ರ ಆ.6ರಂದು ಹೈಕೋರ್ಟ್ ಆದೇಶಿಸಿತ್ತು.

    ಇದರಿಂದ, ಈಶ್ವರ್ ಖಂಡ್ರೆ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ ತಮ್ಮ ವಾದ ಮಂಡನೆಗೂ ಅನುಮತಿ ನೀಡುವಂತೆ ಕೋರಿದ್ದರು. ಖಂಡ್ರೆ ಪರ ವಕೀಲರು ವಾದ ಮಂಡಿಸಿ, ನ್ಯಾಯಾಲಯ ಜಾರಿ ಮಾಡಿದ ನೋಟಿಸ್ ಹಾಗೂ ಸಮನ್ಸ್ ಖಂಡ್ರೆ ಅವರ ಆಪ್ತ ಸಹಾಯಕರು ಸ್ವೀಕರಿಸಿದ್ದರು. ಅವರಿಗೆ ಮರೆವಿನ ಕಾಯಿಲೆಯಿದ್ದು, ಅದಕ್ಕಾಗಿ ಪುಣೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ, ಸಂಪೂರ್ಣ ಗುಣಮುಖರಾಗದೆ 2020ರ ಅ.11ರಂದು ಸಾವಿಗೀಡಾದರು ಎಂದು ತಿಳಿಸಿ ವೈದ್ಯಕೀಯ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಜತೆಗೆ, 2020ರ ಜು.10 ಮತ್ತು 11ರಂದು ವಿವಿಧ ಪತ್ರಿಕೆಗಳಲ್ಲಿ ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಪ್ರಕಟಗೊಂಡ ಸುದ್ದಿಯಿಂದ ಈ ವಿಚಾರ ಗಮನಕ್ಕೆ ಬಂದಿದೆ. ಆದ್ದರಿಂದ, ಪ್ರಕರಣದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿದ್ದರು.

    ವಿಳಂಬಕ್ಕೆ ದಂಡ ವಿಧಿಸಲು ಮನವಿ: ಡಿ.ಕೆ. ಸಿದ್ರಾಮ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಉದಯ ಹೊಳ್ಳ, ಈಶ್ವರ್ ಖಂಡ್ರೆ ಅವರಿಗೆ ಚುನಾಣಾ ತಕರಾರು ಅರ್ಜಿ ಕುರಿತು ಮಾಹಿತಿ ಇದೆ. 2018ರಿಂದಲೂ ಈ ಸಂಬಂಧ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿದೆ. ಹೀಗಿದ್ದರೂ, ಅವರು ವಿಚಾರಣೆಗೆ ಹಾಜರಾಗದೆ ವಿಳಂಬ ಮಾಡಿದ್ದಾರೆ. ಅವರಿಗೆ ದೊಡ್ಡ ಮೊತ್ತದ ದಂಡ ಡವಿಧಿಸಿ, ಕೋವಿಡ್-19 ಪರಿಹಾರ ನಿಧಿಗೆ ಪಾವತಿಸುವಂತೆ ಆದೇಶಿಸಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ಪೀಠ, ಈಶ್ವರ್ ಖಂಡ್ರಗೆ 5 ಲಕ್ಷ ರೂ. ದಂಡ ವಿಧಿಸಿ ವಿಚಾರಣೆಯಲ್ಲಿ ಭಾಗವಹಿಸಲು ಅನುಮತಿ ನೀಡಿತು. ಜತೆಗೆ, ಮುಂದೆ ಪ್ರಕರಣದಲ್ಲಿ ಅನಗತ್ಯವಾಗಿ ವಿಚಾರಣೆ ಮುಂದೂಡಲು ಮನವಿ ಮಾಡಬಾರದು ಎಂದು ಷರತ್ತು ವಿಧಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts