More

    ವಿದೇಶಿ ಹೂಡಿಕೆ ಸೆಳೆಯಲು ಏಜೆನ್ಸಿ: ಸಂಪುಟದಲ್ಲಿ ತೀರ್ಮಾನ

    ಬೆಂಗಳೂರು: ರಾಜ್ಯಕ್ಕೆ ವಿದೇಶಿ ಬಂಡವಾಳ ಆಕರ್ಷಿಸಲು ಸರ್ಕಾರ ಅಂತಾರಾಷ್ಟ್ರೀಯ ಮಟ್ಟದ ಏಜೆನ್ಸಿಯೊಂದಕ್ಕೆ ಜವಾಬ್ದಾರಿ ನೀಡಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

    ಕೈಗಾರಿಕೆ ಆರಂಭಕ್ಕೆ ಇದ್ದ ಅಡಚಣೆ ನಿವಾರಣೆ ಸಂಬಂಧಿಸಿದಂತೆ ಕಳೆದ ಸಂಪುಟದಲ್ಲಿ ಸುಗ್ರೀವಾಜ್ಞೆ ತಂದಿದ್ದ ಸರ್ಕಾರ, ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಹೊಸ ಕೈಗಾರಿಕಾ ನೀತಿ ಜಾರಿಯ ಹೊಸ್ತಿಲಿನಲ್ಲಿದೆ. ಇದೇ ವೇಳೆ ವಿದೇಶಿ ಬಂಡವಾಳ ತರಲು ಹೊಸ ಪ್ರಯತ್ನಕ್ಕೆ ಮುಂದಾಗಿದೆ.

    ಸಭೆ ಬಳಿಕ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಈ ಬಗ್ಗೆ ವಿವರಣೆ ನೀಡಿ, ಬೋಸ್ಟನ್ ಕನ್ಸೆಲ್ಟಿಂಗ್ ಗ್ರೂಪ್ ಇಂಡಿಯಾ ಲಿಮಿಟೆಡ್ ಅನ್ನು ವರ್ಷದ ಅವಧಿಗೆ ನಾಲೆಡ್ಜ್ ಪಾರ್ಟ್​ನರ್- ಸಮಾಲೋಚಕರನ್ನಾಗಿ ನೇಮಿಸಿಕೊಳ್ಳಲು ನಿರ್ಧರಿಸಿದ್ದೇವೆ. ಇವರಿಗೆ ವೃತ್ತಿಪರ ಶುಲ್ಕ 12 ಕೋಟಿ ರೂ. ನಿಗದಿ ಮಾಡಲಾಗಿದೆ. ಈ ಸಮಾಲೋಚಕರು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತಂದು ಹೂಡಿಕೆ ಮಾಡಿಸುತ್ತಾರೆ ಎಂದರು.

    ಲೋಕಾಗೆ ಸಮಯ ಮಿತಿ

    ಕರ್ನಾಟಕ ಲೋಕಾಯುಕ್ತ ಕಾಯ್ದೆ ಸೆಕ್ಷನ್ 9ಕ್ಕೆ ಸಣ್ಣ ತಿದ್ದುಪಡಿ ಮಾಡಲು ಸಂಪುಟದಲ್ಲಿ ತೀರ್ವನಿಸಿದ್ದು, ಆ ಪ್ರಕಾರ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಯಾವುದೇ ಪ್ರಕರಣದ ಪ್ರಾಥಮಿಕ ತನಿಖೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು, ಹಾಗೆಯೇ ಆರು ತಿಂಗಳ ಒಳಗೆ ಆರೋಪಪಟ್ಟಿ ಸಿದ್ಧಪಡಿಸಬೇಕಾಗುತ್ತದೆ ಎಂದು ಕಾಯ್ದೆ ಮೂಲಕ ಸಮಯ ನಿಗದಿ ಮಾಡಲಾಗುತ್ತಿದೆ.

    ಇ-ಸಂಗ್ರಹಕ್ಕೆ ಹೊಸ ಮಾರ್ಗ

    ಇ ಆಡಳಿತದಡಿ ‘ಇ -ಸಂಗ್ರಹ 2.0’ ಎಂಬ ಹೊಸಸಾಫ್ಟ್​ವೇರ್ ಅಭಿವೃದ್ಧಿಪಡಿಸಿ, ಅನುಷ್ಠಾನ ಮಾಡಲು ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ಇಎಟಿ ಸರ್ವೀಸಸ್ ಎಂಬ ಕಂಪನಿ ನೇಮಿಸಲು ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ 7 ವರ್ಷಗಳ ಅವಧಿಗೆ 184.37 ಕೋಟಿ ರೂ. ವೆಚ್ಚವಾಗಲಿದೆ. ಹಣಕಾಸು ಇಲಾಖೆಯ ಸಲಹೆಯ ಮೇರೆಗೆ ಈ ಒಪ್ಪಿಗೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

    ವಿದ್ಯುತ್ ಕಂಪನಿಗಳಿಗೆ ಸಾಲ: ರಾಜ್ಯದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳು ಇತರ ಮೂಲಗಳಿಂದ ಸಾಲ ಪಡೆದಿದ್ದು, ಸಕಾಲದಲ್ಲಿ ಪಾವತಿ ಮಾಡದೇ ಇದ್ದರೆ, ಅನುತ್ಪಾದಕ ಸಾಲ ಎಂದು ತೀಮಾನಿಸುವ ಸಾಧ್ಯತೆ ಇತ್ತು. ಹೀಗಾಗಿ ಐದು ವಿದ್ಯುತ್ ಕಂಪನಿಗಳಿಗೆ 2500 ಕೋಟಿ ರೂ. ಬಡ್ಡಿ ರಹಿತ ಸಾಲ ನೀಡಲು ತೀಮಾನಿಸಲಾಗಿದೆ ಎಂದು ತಿಳಿಸಿದರು.

    ಬೆಸ್ಕಾಂಗೆ 500 ಕೋಟಿ ರೂ., ಹುಬ್ಬಳ್ಳಿ -ಧಾರವಾಡ ವಿದ್ಯುತ್ ಕಂಪನಿಗೆ 400 ಕೋಟಿ ರೂ., ಗುಲ್ಬರ್ಗಾ ವಿದ್ಯುತ್ ಕಂಪನಿಗೆ 1000 ಕೋಟಿ ರೂ. ಮತ್ತು ಚಾಮುಂಡೇಶ್ವರಿ ವಿದ್ಯುತ್ ಕಂಪನಿಗೆ 600 ಕೋಟಿ ರೂ. ಸಾಲ ನೀಡಲು ತೀಮಾನಿಸಲಾಗಿದೆ ಎಂದು ತಿಳಿಸಿದರು.

    ಸರ್ಕಾರದ ಸಾದಿಲ್ವಾರು ನಿಧಿಯಲ್ಲಿ ಗರಿಷ್ಠ 80 ಕೋಟಿ ರೂ. ಖರ್ಚು ಮಾಡಲು ಮಾತ್ರ ಕಾನೂನಿನಲ್ಲಿ ಅವಕಾಶವಿತ್ತು. ಕರೊನಾದಿಂದಾಗಿ ಕ್ಷೌರಿಕರು, ಮಡಿವಾಳರು, ಟ್ಯಾಕ್ಸಿ ಚಾಲಕರು, ಹೂವು ಬೆಳೆಗಾರರು ಮುಂತಾದವರಿಗೆ ಲಾಕ್​ಡೌನ್ ಕಾರಣಕ್ಕೆ ಪರಿಹಾರ ಹಣ ಕೊಡಬೇಕಾಗಿದ್ದರಿಂದ ಒಂದು ಬಾರಿಗೆ ಈ ಬಳಕೆಯನ್ನು 500 ಕೋಟಿ ರೂ.ಗೆ ಹೆಚ್ಚಿಸಲು ಉದ್ದೇಶಿಸಿದ್ದೇವೆ. ಈ ರೀತಿ ಬದಲಾವಣೆಗೆ ಕಾನೂನು ತರಬೇಕಾಗುತ್ತದೆ. ಸದ್ಯ ಅಧಿವೇಶನ ನಡೆಯದ ಕಾರಣ ಸುಗ್ರೀವಾಜ್ಞೆ ಹೊರಡಿಸಲು ತೀಮಾನಿಸಿದ್ದೇವೆ ಎಂದರು.

    ಗುರುವಾರದ ಸಂಪುಟ ಸಭೆಯಲ್ಲಿ ಹೊಸ ಕೈಗಾರಿಕೆ ನೀತಿ ಮಂಡನೆಯಾದರೂ, ಅದನ್ನು ಅಧ್ಯಯನ ಮಾಡುವುದೊಳಿತು ಎಂಬ ಅಭಿಪ್ರಾಯದ ಮೇಲೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

    ಪ್ರಮುಖ ತೀರ್ಮಾನಗಳು

    1. ಎಪಿಎಂಸಿಗಳಲ್ಲಿ ಮಾರುಕಟ್ಟೆ ಶುಲ್ಕವೆಂದು ಶೇ.1.5 ಸೆಸ್ ಸಂಗ್ರಹ ಮಾಡಲಾಗುತ್ತಿತ್ತು. ಅದು ಶೇ.1ಕ್ಕೆ ಇಳಿಕೆ.

    2. ಕೆಪಿಎಸ್​ಸ್ಸಿಯಲ್ಲಿ ತೆರವಾದ ಒಂದು ಸದಸ್ಯ ಹುದ್ದೆ ಭರ್ತಿ ಅಧಿಕಾರ ಮುಖ್ಯಮಂತ್ರಿಗೆ.

    3. ಕರ್ನಾಟಕ ವಿದ್ಯುತ್ ಕಾರ್ಖಾನೆ ಮತ್ತು ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿಯನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸುಪರ್ದಿಯಿಂದ ಇಂಧನ ಇಲಾಖೆ ವ್ಯಾಪ್ತಿಗೆ ಹಸ್ತಾಂತರ.

    4. ರಾಯಚೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಇನ್ಪಮೇಷನ್ ಟೆಕ್ನಾಲಜಿ ಸಂಸ್ಥೆ ಸ್ಥಾಪಿಸಲು ಕೇಂದ್ರದ ಜತೆ ಒಡಂಬಡಿಕೆ ಆಗಿತ್ತು. ಅದನ್ನು ಆರಂಭಿಸಲು ಆಡಳಿತಾತ್ಮಕ ಅನುಮೋದನೆ. ನಾಲ್ಕು ವರ್ಷಗಳಿಗೆ ಮೂಲಸೌಕರ್ಯಗಳಿಗಾಗಿ 44.08 ಕೋಟಿ ರೂ.

    5. ಶಿವಮೊಗ್ಗ ಸರ್ಕಾರಿ ಮೆಡಿಕಲ್ ಕಾಲೇಜು ಪೀಠೋಪಕರಣಕ್ಕೆ 12 ಕೋಟಿ ರೂ.

    6. ಬೆಂಗಳೂರು ಬಯೋಟೆಕ್ ಪಾರ್ಕ್ ಅನ್ನು ಕ್ಲಸ್ಟರ್ ರೀತಿ ಅಭಿವೃದ್ಧಿ ಪಡಿಸಲು ಲೆಬ್​ರೆೋನ್ ಎಲೆಕ್ಟ್ರಾನಿಕ್ ಸಿಟಿ ಕಂಪೆನಿಗೆ ಅವಕಾಶ.

    7. ತಿಪಟೂರಿನ ಗುರು ಪರದೇಶಿಕೇಂದ್ರ ಸ್ವಾಮಿಗಳ ರಂಗಾಪುರ ಕ್ಷೇತ್ರಕ್ಕೆ 50 ವರ್ಷಗಳ ಹಿಂದೆ 4 .34 ಎಕರೆ ಜಮೀನನ್ನು ಗುತ್ತಿಗೆ ನೀಡಿದ್ದು, ಅದನ್ನು ಶೇ.50ರ ಮಾರ್ಗದರ್ಶಿ ದರದಂತೆ ಕಾಯಂ ಮಾಡಿಕೊಡಲು ಅವಕಾಶ.

    8. ವಿಜಯಪುರದಲ್ಲಿ ವಿಮಾನನಿಲ್ದಾಣ ಸ್ಥಾಪನೆಗೆ 220 ಕೋಟಿ ರೂ. ನೀಡಲು ಆಡಳಿತಾತ್ಮಕ ಅನುಮೋದನೆ. ಮೊದಲ ವರ್ಷಕ್ಕೆ ಲೆವೆಲಿಂಗ್, ರನ್​ವೇ, ಪ್ಯಾಸೆಂಜರ್ ಟರ್ವಿುನಲ್ ಸೇರಿ ಸಿವಿಲ್ ಕಾಮಗಾರಿಗೆ 95 ಕೋಟಿ ರೂ. ಬಿಡುಗಡೆ.

    ಬೆಂಗಳೂರಿಗೆ ಎಂಟು ಸಚಿವರ ಉಸ್ತುವಾರಿ: ಕರೊನಾ ನಿರ್ವಹಣೆಗಾಗಿ ಬೆಂಗಳೂರು ನಗರವನ್ನು 8 ವಲಯಗಳನ್ನಾಗಿ ಮಾಡಿ, ಎಂಟು ಸಚಿವರಿಗೆ ಉಸ್ತುವಾರಿ ವಹಿಸಿಕೊಳ್ಳಬೇಕೆಂದು ಸಂಪುಟ ಸಭೆಯಲ್ಲಿ ಸೂಚಿಸಲಾಯಿತು. ಕಂಟೇನ್ಮೆಂಟ್ ಪ್ರದೇಶ ಬಿಗಿಗೊಳಿಸುವುದು, ಯಾವ ಸ್ಥಳದಿಂದ ಹೆಚ್ಚು ಸೋಂಕು ಹರಡುತ್ತಿದೆ ಎಂದು ಪತ್ತೆ ಮಾಡಿ ಅಲ್ಲಿ ಎಚ್ಚರಿಕೆ ವಹಿಸುವುದು. ಸಮಸ್ಯೆ ಪರಿಹಾರಕ್ಕೆ ತಾವೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಉಸ್ತುವಾರಿಗಳಿಗೆ ಅವಕಾಶ ನೀಡಲಾಗುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಇವರು ನಗರದ ಪರಿಸ್ಥಿತಿ ಅಧ್ಯಯನ ಮಾಡಿ, ಮುಂದಿನ ಹೆಜ್ಜೆ ಇಡಲಿದ್ದಾರೆ.

    ತಾಲೂಕು ಹಂತದಲ್ಲೂ ಕೋವಿಡ್ ಕೇರ್: ಜಿಲ್ಲಾ ಕೇಂದ್ರ ಹೊರತುಪಡಿಸಿ ತಾಲೂಕು ಹಂತದಲ್ಲೂ ಕರೊನಾ ಸೋಂಕಿಗೆ ಚಿಕಿತ್ಸೆ ದೊರಕಿಸಲು ಅಥವಾ ಕೋವಿಡ್ ಕೇರ್ ಸೆಂಟರ್ ತೆರೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಸಾಕಷ್ಟು ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಮೆಡಿಕಲ್ ಗ್ಯಾಸ್ ಪೈಪ್​ಲೈನ್ ಸಹಿತ ಹೈಫ್ಲೋ ಆಕ್ಸಿಜನ್ ವ್ಯವಸ್ಥೆಗೆ ಮೂಲ ಸೌಕರ್ಯ ಅಳವಡಿಕೆಗೆ, ತುರ್ತು ಹಾಸಿಗೆ ಹೆಚ್ಚಿಸಲು ಸಿವಿಲ್ ಕಾಮಗಾರಿಗಳಿಗಾಗಿ 207 ಕೋಟಿ ರೂ. ಮಂಜೂರು ಮಾಡಲು ಸಹ ಒಪ್ಪಿಗೆ ನೀಡಲಾಗಿದೆ.

    ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಉಪಕರಣ ಮತ್ತು ಪೀಠೋಪಕರಣ ಖರೀದಿಸಲು ಆಯವ್ಯಯದಲ್ಲಿ ಉಳಿತಾಯ ಬಾಬ್ತಿನಲ್ಲಿದ್ದ 81.99 ಕೋಟಿ ರೂ. ಬಳಕೆ ಮಾಡಲು ಒಪ್ಪಿಗೆ ಸಂಪುಟದಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.

    ರಾಜ್ಯದ ಎಲ್ಲ ಕಡೆಗಳಲ್ಲಿ ಶೀಘ್ರ ಪರೀಕ್ಷೆ ಮಾಡಿ, ಶೀಘ್ರ ಫಲಿತಾಂಶ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೈಫ್ಲೋ ಆಕ್ಸಿಜನ್ ಅಳವಡಿಸುವುದು ಮತ್ತು ಹೆಚ್ಚಿನ ಹಾಸಿಗೆಗಳ ವ್ಯವಸ್ಥೆ ಮಾಡಲು ತೀಮಾನಿಸಲಾಯಿತು ಎಂದು ಮಾಧುಸ್ವಾಮಿ ವಿವರಿಸಿದರು.

    ಗುತ್ತಿಗೆ ವೈದ್ಯರ ಕಾಯಂಗೆ ಕೃಪಾಂಕ: ಗುತ್ತಿಗೆ ವೈದ್ಯರನ್ನು ಕಾಯಂಗೊಳಿಸುವ ಉದ್ದೇಶದಿಂದ ಕೃಪಾಂಕವನ್ನು 2.5ರಿಂದ 30ರವರೆಗೆ ನೀಡಲು ತೀಮಾನಿಸಲಾಗಿದೆ. 6 ತಿಂಗಳು ಕೆಲಸ ಮಾಡಿದವರಿಗೆ 2.5 ಅಂಕ ಸಿಗುತ್ತದೆ. ಅದರ ಪ್ರಕಾರ ಪ್ರತಿ ಆರು ತಿಂಗಳಿಗೆ 2.5 ಅಂಕದಂತೆ ಗರಿಷ್ಠ 30 ಅಂಕ ನೀಡಿ, ನೇರ ನೇಮಕ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ವಯೋಮಿತಿ ನಿರ್ಭಂಧವನ್ನು 21 ರಿಂದ 26 ವರ್ಷಕ್ಕೆ ಏರಿಸಲಾಗುತ್ತದೆ. ಆಯುಷ್ ವೈದ್ಯರಿಗೂ ಇದು ಅನ್ವಯವಾಗುತ್ತದೆ.

    ಲಾಕ್​ಡೌನ್ ಪರಿಹಾರವಲ್ಲ: ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಲಾಕ್​ಡೌನ್ ಬಗ್ಗೆ ಪ್ರಸ್ತಾಪ ಮಾಡಿದರು. ಆದರೆ ಮುಖ್ಯಮಂತ್ರಿ ಈ ಹಂತದಲ್ಲಿ ಕರೊನಾ ನಿಯಂತ್ರಣಕ್ಕೆ ಲಾಕ್​ಡೌನ್ ಪರಿಹಾರವಲ್ಲ ಎಂದು ಸ್ಪಷ್ಟನೆ ನೀಡಿದರೆನ್ನಲಾಗಿದೆ. ಇನ್ನೇನಿದ್ದರೂ ನಿಯಂತ್ರಣದ ಕಡೆ ಗಮನ ಹರಿಸಬೇಕೆ ಹೊರತು, ಲಾಕ್​ಡೌನ್​ನಿಂದ ಉಪಯೋಗವಾಗುವುದಿಲ್ಲ ಎಂದರೆನ್ನಲಾಗಿದೆ.

    ರಾಹುಲ್ ಗಾಂಧಿಯವರ ಮಾಜಿ ಕ್ಷೇತ್ರ ಅಮೇಠಿಯ ಗೌರಿಗಂಜ್​​ ರೈಲ್ವೆ ನಿಲ್ದಾಣದ ಚಿತ್ರ ಅಂದು-ಇಂದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts