More

    ಕರ್ನಾಟಕ ಬಂದ್​ಗೆ ಬೆನ್ನು ಹಾಕಿದ ಜನ ; ಕಾಲ್ನಡಿಗೆ ಜಾಥಾ, ಬೈಕ್ ರ್ಯಾಲಿಗೆ ಸೀಮಿತ

    ಬೆಂಗಳೂರು ಗ್ರಾಮಾಂತರ: ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಜಿಲ್ಲೆಯಲ್ಲಿ ಪರಿಣಾಮ ಬೀರಲಿಲ್ಲ. ವ್ಯಾಪಾರ ವಹಿವಾಟು, ವಾಹನ ಸಂಚಾರ, ಜನಜೀವನ ಎಂದಿನಂತಿತ್ತು.

    ಇದರ ನಡುವೆ ಅಲ್ಲಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು, ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೊಸಕೋಟೆಯಲ್ಲಿ ಬಂದ್ ಬಿಸಿ ಕಾಣಲಿಲ್ಲ, ದೇವನಹಳ್ಳಿಯಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿತು.

    ದೊಡ್ಡಬಳ್ಳಾಪುರದಲ್ಲಿ ನೆಲದಾಂಜನೇಯಸ್ವಾಮಿ ದೇಗುಲದಿಂದ ತಾಲೂಕು ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿದ ಕನ್ನಡಪರ ಸಂಘಟನೆಗಳು ತಾಲೂಕು ಕಚೇರಿ ವೃತ್ತದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲವೊಂದು ಭಾಗದಲ್ಲಿ ಮುಂಜಾನೆ ಹಲವು ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿರಲಿಲ್ಲ. ಮಧ್ಯಾಹ್ನದ ವೇಳೆಗಾಗಲೇ ಎಂದಿನಂತೆ ವಹಿವಾಟು ಆರಂಭವಾಯಿತು. ನೆಲಮಂಗಲದಲ್ಲಿ ಕರವೇ ಕಾರ್ಯಕರ್ತರು ತಹಸೀಲ್ದಾರ್​ಗೆ ಮನವಿ ಪತ್ರ ಸಲ್ಲಿಸಿದರು.

    ವಿಮಾನ ನಿಲ್ದಾಣದಲ್ಲೂ ಪರಿಣಾಮವಿಲ್ಲ: ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬಂದ್ ಪರಿಣಾಮ ಬೀರಿಲ್ಲ. ಟ್ಯಾಕ್ಸಿ, ಬಸ್​ಗಳ ಸಂಚಾರ ಮಾಮೂಲಿಯಾಗಿತ್ತು. ನಿಲ್ದಾಣದ ಸುತ್ತಮುತ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲೆಯ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೂ ವಾಹನ ಸಂಚಾರ ಎಂದಿನಂತೆ ಇತ್ತು. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಕಂಡುಬಂತು, ಮುಖ್ಯರಸ್ತೆ, ವೃತ್ತಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.

    ಮುಂಜಾನೆ ಆತಂಕ, ಮಧ್ಯಾಹ್ನದ ಹೊತ್ತಿಗೆ ತಿಳಿ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಪೆಟ್ಟು ತಿಂದಿರುವ ವರ್ತಕರು, ಬೀದಿಬದಿ ವ್ಯಾಪಾರಿಗಳು ಮುಂಜಾನೆ ಆತಂಕದಿಂದಲೇ ವ್ಯಾಪಾರ ವಹಿವಾಟಿಗೆ ಮರಳಲು ಹಿಂದೇಟು ಹಾಕಿದರಾದರೂ ಮಧ್ಯಾಹ್ನದ ಹೊತ್ತಿಗೆ ಸಹಜ ಸ್ಥಿತಿಗೆ ಮರಳಿದ್ದು ಕಂಡುಬಂತು. ಬಸ್ ಸಂಚಾರವೂ ಮಧ್ಯಾಹ್ನದ ವೇಳೆಗೆ ಸಹಜ ಸ್ಥಿತಿಗೆ ಮರಳಿತು. ಜಿಲ್ಲಾಡಳಿತ ಭವನದ ಮೇಲೆ ಬಂದ್ ಸ್ಪಲ್ಪ ಪ್ರಮಾಣದಲ್ಲಿ ಬಿಸಿ ಮುಟ್ಟಿಸಿತು, ಹಲವು ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts