More

    ಕಾರಟಗಿಗೆ ಚುಕುಬುಕು ರೈಲು ಬರುವ ಕಾಲ ಸನ್ನಿಹಿತ

    ಶರಣಪ್ಪ ಕೃಷ್ಣಾಪುರ ಸಿದ್ದಾಪುರ

    ಕಾರಟಗಿ ತಾಲೂಕಿನ ಜನರ ಬಹುದಿನದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಮುನಿರಾಬಾದ್-ಮಹೆಬೂಬ್ ನಗರ ಮಾರ್ಗದಲ್ಲಿ ಕಾರಟಗಿವರೆಗೆ ಶೀಘ್ರದಲ್ಲಿ ರೈಲು ಸಂಚಾರ ವಿಸ್ತರಣೆಯಾಗಲಿದೆ.

    ಕೊಪ್ಪಳ ತಾಲೂಕಿನ ಗಿಣಿಗೇರಾದಿಂದ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್‌ವರೆಗೆ ಪ್ಯಾಸೆಂಜರ್ ರೈಲು ಸಂಚರಿಸುತ್ತಿದೆ. ಈ ರೈಲು ಕಾರಟಗಿವರೆಗೆ ಸಂಚರಿಸಲು ರೈಲ್ವೆ ಇಲಾಖೆ ಅಸ್ತು ಎಂದಿದೆ. ಗಂಗಾವತಿಯಿಂದ ಶ್ರೀರಾಮನಗರ, ಸಿದ್ದಾಪುರ ಮೂಲಕ ಕಾರಟಗಿವರೆಗೆ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ರೈಲು ಸಂಚಾರ ಆರಂಭವಾಗಿರಲಿಲ್ಲ. ಕಾರಟಗಿವರೆಗೆ ರೈಲು ಓಡಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮಾರ್ಗ ಸುರಕ್ಷತಾ ಪ್ರಮಾಣಪತ್ರವನ್ನೂ ನೀಡಿದ್ದರು. ಆದರೂ ರೈಲು ಬಾರದಿರುವುದು ಜನರ ಬೇಸರಕ್ಕೆ ಕಾರಣವಾಗಿತ್ತು.

    2020ರಲ್ಲೇ ಕಾರಟಗಿವರೆಗೆ ರೈಲು ಸಂಚಾರ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ ಮತ್ತೆ ರೈಲು ಸಂಚಾರ ಆರಂಭವಾಗಲಿದೆ ಎಂಬ ಆದೇಶ ಹೊರಬಿದ್ದಿದ್ದರೂ ದಿನ ನಿಗದಿಯಾಗಿಲ್ಲ. ಹುಬ್ಬಳ್ಳಿಯಿಂದ ಗಂಗಾವತಿ ಮಾರ್ಗವಾಗಿ ಕಾರಟಗಿವರೆಗೆ ರೈಲು ಸಂಚಾರಕ್ಕೆ ಸಮ್ಮತಿಸಿ 2021ರ ಮಾ. 25 ರಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಆದೇಶ ಹೊರಬಿದ್ದು ಮೂರು ತಿಂಗಳು ಕಳೆದರೂ ಕಾರಟಗಿ ಮಾರ್ಗದಲ್ಲಿ ರೈಲಿನ ಶಬ್ದ ಕೇಳಿಸುತ್ತಿಲ್ಲ.

    1350 ಕೋಟಿ ರೂ. ವೆಚ್ಚದ ಯೋಜನೆ: ಮುನಿರಾಬಾದ್‌ನಿಂದ ರಾಯಚೂರು ಮಾರ್ಗವಾಗಿ ಮಹೆಬೂಬ್ ನಗರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ 1350 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಹಾಗೂ ಮಾನ್ವಿ ತಾಲೂಕುಗಳಲ್ಲಿ ಹಳಿ ನಿರ್ಮಾಣ ಕಾರ್ಯ ಬಾಕಿ ಇದೆ. ರಾಯಚೂರಿನಿಂದ ಮಹೆಬೂಬ್‌ನಗರಕ್ಕೆ ಈಗಾಗಲೇ ರೈಲ್ವೆ ಸಂಪರ್ಕ ಇದೆ. ಯೋಜನೆ ಪೂರ್ಣಗೊಂಡರೆ ಹುಬ್ಬಳ್ಳಿ, ಕೊಪ್ಪಳದಿಂದ ಹೈದರಾಬಾದ್‌ಗೆ ನೇರ ಸಂಪರ್ಕ ಸಾಧ್ಯವಾಗಲಿದೆ.

    ಯಶವಂತಪುರಕ್ಕೂ ಸಂಪರ್ಕ: ಕಾರಟಗಿವರೆಗೆ ರೈಲು ಸಂಚಾರ ವಿಸ್ತರಣೆಗೆ ಸಂಸದ ಸಂಗಣ್ಣ ಕರಡಿ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು. ಶೀಘ್ರದಲ್ಲೇ ಸಂಚಾರ ವಿಸ್ತರಣೆಯ ದಿನ ನಿಗದಿಯಾಗಲಿದೆ ಎಂಬುದು ಸಂಸದರ ಕಚೇರಿಯ ಮಾಹಿತಿಯಾಗಿದೆ. ಯಶವಂತಪುರ-ಹೊಸಪೇಟೆ ರೈಲು ಸಹ ಗಂಗಾವತಿ ಮಾರ್ಗವಾಗಿ ಕಾರಟಗಿಗೆ ಸಂಚರಿಸಲಿದೆ. ಈ ಸಂಬಂಧ ರೈಲ್ವೆ ಮಂಡಳಿ ಅನುಮತಿ ನೀಡಿದೆ.

    ಕಾರಟಗಿಗೆ ರೈಲು ಸಂಚಾರಕ್ಕೆ ಅನುಮತಿ ದೊರೆತಿದೆ. ರೈಲು ಸಂಚಾರ ವಿಸ್ತರಣೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಯಶವಂತಪುರ ರೈಲು ಓಡಾಟ ಸಹ ಶೀಘ್ರ ಆರಂಭವಾಗಲಿದೆ.
    | ಸಂಗಣ್ಣ ಕರಡಿ ಕೊಪ್ಪಳ ಸಂಸದ

    ಕಾರಟಗಿವರೆಗೂ ರೈಲು ಸಂಚಾರ ವಿಸ್ತರಣೆಗೆ ರೈಲ್ವೆ ಇಲಾಖೆ ಸಮ್ಮತಿ ನೀಡಿರುವುದು ಖುಷಿಯ ವಿಚಾರವಾಗಿದೆ. ಶೀಘ್ರ ರೈಲು ಸಂಚಾರ ಆರಂಭಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
    | ಸೋಮಶೇಖರಗೌಡ ಪೊಲೀಸ್ ಪಾಟೀಲ್ ಸಿದ್ದಾಪುರ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts