More

    ದಾರದಲ್ಲಿ ಡಾ.ಪುನೀತ್ ಕಲಾಕೃತಿ ಅನಾವರಣ

    ಕಾರಟಗಿ: ವರನಟ ಡಾ.ರಾಜಕುಮಾರ್, ಅಭಿಮಾನಿಗಳನ್ನೇ ದೇವರೆಂದರು. ಆದರೆ ಅವರ ಸುಪುತ್ರ ಡಾ.ಪುನೀತ್ ರಾಜಕುಮಾರ್ ಅವರನ್ನೇ ದೇವರೆಂದು ಭಾವಿಸಿ ಕೋಟ್ಯಂತರ ಅಭಿಮಾನಿಗಳು ಹೃದಯದಲ್ಲಿ ಸ್ಥಾಪಿಸಿಕೊಂಡು ಕೊಂಡಾಡಿದರು.

    ಇದಕ್ಕೆ ಕಾರಣ ಪುನೀತ ಅವರ ಲವಲವಿಕೆಯ ನಟನೆ ಮತ್ತು ಸಮಾಜಕ್ಕೆ ಪೂರಕವಾದ ಕಥಾ ಹಂದರವುಳ್ಳ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆಗೆ ಪಾತ್ರರಾಗಿದ್ದು. ಪುನೀತ್ ಅಕಾಲಿಕ ಸಾವು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ ಇಡೀ ಕನ್ನಡ ಚಿತ್ರರಂಗವನ್ನೇ ನಲುಗಿಸಿತ್ತು. ದೈಹಿಕವಾಗಿ ನಟ ತಮ್ಮೊಂದಿಗೆ ಇರದಿದ್ದರೂ ಅಭಿಮಾನಿಗಳ ಅಭಿಮಾನಕ್ಕೆ ಕೊರತೆ ಇಲ್ಲ.

    ತಮ್ಮಲ್ಲಿ ಹುದುಗಿದ ಅಭಿಮಾನವನ್ನು ಒಂದಲ್ಲ ಒಂದು ರೀತಿಯಲ್ಲಿ ಅಭಿವ್ಯಕ್ತಿಸುವುದು ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಪುನೀತ್ ಅಭಿಮಾನಿಗಳು ದಾರದಲ್ಲಿ ತಮ್ಮ ನೆಚ್ಚಿನ ನಟನ ಭಾವಚಿತ್ರವನ್ನು ಮೂಡಿಸಿ ಅಭಿಮಾನ ಮೆರೆದಿದ್ದಾರೆ.

    ತಾಲೂಕಿನ ದೇವಿ ಕ್ಯಾಂಪಿನ ಗಿರಿ ಮತ್ತು ಆತನ ಸ್ನೇಹಿತರಾದ ಗಿರಿಬಾಬು ಒಲ್ಲೆಪಲ್ಲಿ (ದೇವಿ ಕ್ಯಾಂಪ್) ರಾಜಶೇಖರ್, ವೇಣುಗೋಪಾಲ್, ದರ್ಶಶ್ ಪಾಟೀಲ್, ಮನೋಜ್ ಸಾಯಿ ಪವನ್, ಕಲ್ಲೇಶ ಸೇರಿ 15 ಅಡಿ ಅಗಲ 15 ಅಡಿ ಉದ್ದದ ಪುನೀನ್ ಭಾವಚಿತ್ರವನ್ನು ದಾರದಿಂದ 5 ದಿನಗಳಲ್ಲಿ ತಯಾರಿಸಿದ್ದಾರೆ. ಡಾ.ಪುನೀತ್ ರಾಜಕುಮಾರ್ ಭಾವಚಿತ್ರದ ಕಲಾಕೃತಿಯನ್ನು ಪಟ್ಟಣದ ಲಕ್ಷ್ಮೀ ಚಿತ್ರಮಂದಿರ ಮುಂಭಾಗ ಮಂಗಳವಾರ ಪ್ರದರ್ಶನಕ್ಕೆ ಇರಿಸಿದ್ದು, ಅಭಿಮಾನಿಗಳು ಪುನೀತ್ ಭಾವಚಿತ್ರವನ್ನು ಕಂಡು ಜೈಘೋಷ ಕೂಗಿ ಅಭಿಮಾನ ವ್ಯಕ್ತಪಡಿಸಿದರು.

    ಬಳಿಕ ಮಾತನಾಡಿ ಡಾ.ಪುನೀತ್ ಅಭಿಮಾನಿ ಗಿರಿ, ಯುವಕರಿಗೆ ಪ್ರೇರಣೆಯಾಗಿದ್ದ ಯುವರತ್ನ ಡಾ.ಪುನೀತ್ ಅಗಲಿಕೆ ಅನಾಥಪ್ರಜ್ಞೆ ಮೂಡಿಸಿದೆ. ಚಿತ್ರರಂಗಕ್ಕೆ ಬಾಲನಟನಾಗಿ ಬಂದು ಕೊನೆಯವರೆಗೂ ಸದುಭಿರುಚಿತ ಚಿತ್ರಗಳನ್ನೇ ನೀಡಿ ನಾಡಿಗೆ ಕೊಡುಗೆ ಆದವರು. ಅವರು ಯಾವತ್ತೂ ನಮ್ಮೊಂದಿಗಿದ್ದಾರೆ ಎಂದರು. ಈ ವೇಳೆ ನೂರಾರು ಪುನೀತ್ ಅಭಿಮಾನಿಗಳು ಇದ್ದರು.
    ಫೋಟೋಕೆ ಪೈಪೋಟಿ: ಪುನೀತ್ ಭಾವಚಿತ್ರವನ್ನು ಮೊದಲ ಬಾರಿಗೆ ದಾರದಲ್ಲಿ ಕಣ್ತುಂಬಿಕೊಂಡ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದು, ಎಲ್ಲೆಡೆ ಹರಿದಾಡುತ್ತಿವೆ. ಕೆಲ ತಿಂಗಳ ಹಿಂದಷ್ಟೇ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರು ಭತ್ತದ ಗದ್ದೆಯಲ್ಲಿ ಪುನೀತ್ ಭಾವಚಿತ್ರ ಇರುವಂತೆ ಭತ್ತ ಬೆಳೆದು ಸುದ್ದಿಯಾಗಿದ್ದರು.

    ಕಡಿಮೆ ಜೀವಿತಾವಧಿಯಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ನಾಡಿನ ಮಗನಾಗಿದ್ದ ಡಾ.ಪುನೀತ್ ರಾಜಕುಮಾರ್, ತಂದೆಯಷ್ಟೇ ಹೆಸರು ಗಳಿಸಿದ್ದರು ಎಂಬುದಕ್ಕೆ ಅವರು ಅಗಲಿದ ನಂತರ ನೋಡಲು ಬಂದ ಅಭಿಮಾನಿಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿಯಾಗಿದೆ. ಪುನೀತ್ ಚಿರಕಾಲ ನಟ.
    ಗಿರಿಬಾಬು ಒಲ್ಲೆಪಲ್ಲಿ (ದೇವಿಕ್ಯಾಂಪ್) ಕಾರಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts