ಪಡುಬಿದ್ರಿ: ಕಾಪು ಪುರಸಭೆ ಎರಡನೇ ಅವಧಿ ಅಧ್ಯಕ್ಷರಾಗಿ ಬಿಜೆಪಿಯ ಅನಿಲ್ ಕುಮಾರ್ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಮಾಲಿನಿ ಆಯ್ಕೆಯಾದರು.
ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಅನಿಲ್, ಶಾಸಕ ಹಾಗೂ ಸಂಸದರ ಮತದಿಂದ 13 ಮತ್ತು ಕಾಂಗ್ರೆಸ್‌ನ ಶಾಬು ಸಾಹೇಬ್ ಓರ್ವ ಸದಸ್ಯನ ಗೈರಿನಿಂದ 11ಮತಗಳನ್ನು ಪಡೆದರು. 23 ಸದಸ್ಯ ಬಲದ ಕಾಪು ಪುರಸಭೆಯಲ್ಲಿ ಕಾಂಗ್ರೆಸ್ 12 ಮತ್ತು ಬಿಜೆಪಿ 11ಸದಸ್ಯರನ್ನು ಹೊಂದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್‌ನ ಮಾಲಿನಿ ಅವಿರೋಧವಾಗಿ ಆಯ್ಕೆಯಾದರು.
ತಹಸೀಲ್ದಾರ್ ಮಹಮ್ಮದ್ ಇಸಾಕ್ ಚುನಾವಣೆ ಪ್ರಕ್ರಿಯೆ ನಡೆಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಅನಿಲ್, ಕಾಂಗ್ರೆಸ್‌ನಿಂದ ಶಾಬು ಸಾಹೇಬ್ ಹಾಗೂ ಅಶ್ವಿನಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ಅಶ್ವಿನಿ ನಾಮಪತ್ರ ಹಿಂಪಡೆದರು.
ಮೂಲ ಸೌಕರ್ಯಕ್ಕೆ ಒತ್ತು: ಇನ್ನು ಉಳಿದ ಏಳು ತಿಂಗಳಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಮೂಲ ಸೌಕರ್ಯಕ್ಕೆ ಒತ್ತು ನೀಡಲಾಗುವುದು. ಕಾಪು ಪೇಟೆಯ ಪಾರ್ಕಿಂಗ್ ವ್ಯವಸ್ಥೆ, ತ್ಯಾಜ್ಯ ಘಟಕ ಸಮಸ್ಯೆ, ಚರಂಡಿ ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಎಲ್ಲರ ಸಹಕಾರ ಪಡೆದು ಪುರಸಭೆಯಲ್ಲಿ ಮಾದರಿ ಆಡಳಿತ ನೀಡುವುದಾಗಿ ಪುರಸಭೆ ನೂತನ ಅಧ್ಯಕ್ಷ ಅನಿಲ್ ಕುಮಾರ್ ತಿಳಿಸಿದರು. ಈ ಆಡಳಿತ ಸಮಿತಿಗೆ ಇನ್ನು ಏಳು ತಿಂಗಳ ಅಧಿಕಾರ ಮಾತ್ರ ಉಳಿದಿದೆ.
ಶಾಸಕ ಲಾಲಾಜಿ ಆರ್. ಮೆಂಡನ್, ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಾಧಿಕಾರಿ ವೆಂಕಟೇಶ್ ನಾವಡ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಸದಸ್ಯ ಗೈರು
ಕಾಂಗ್ರೆಸ್‌ನ 12 ಸದಸ್ಯರಲ್ಲಿ ಸುರೇಶ್ ದೇವಾಡಿಗ ಚುನಾವಣೆಗೆ ಗೈರಾಗಿದ್ದರು. ಮಂಗಳವಾರ ಸಾಯಂಕಾಲದವರೆಗೆ ಪಕ್ಷದವರೊಂದಿಗೆ ಸಂಪರ್ಕದಲ್ಲಿದ್ದ ಅವರು ಬುಧವಾರ ಏಕಾಏಕಿ ಯಾರಿಗೂ ಸಂಪರ್ಕಕ್ಕೆ ಸಿಗದೆ ಗೈರಾಗಿರುವುದು ಕಾಂಗ್ರೆಸ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.