ವಿಜಯವಾಣಿ ಸುದ್ದಿಜಾಲ ಬೆಂಗಳೂರು
“ಕನ್ನಡತಿ’ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್, “ಬಡ್ಡೀಸ್’ ಸೇರಿ ಕೆಲ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಇದೀಗ ಅವರು ನಾಯಕನಾಗಿ ನಟಿಸಿರುವ ಪ್ರಸಿದ್ಧ್ “ಭರ್ಜರಿ ಗಂಡು’ ನಾಳೆ ರಿಲೀಸ್ ಆಗಲಿದೆ. ಆದರೆ, ಸಿನಿಮಾಗಳಿಗಿಂತ ಹೆಚ್ಚಾಗಿ ಅವರು ಹೊಸ ಹೊಸ ಸಾಹಸಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ. ವಾಟರ್ ಸರ್ಫಿಂಗ್, ಪ್ಯಾರಾಗ್ಲೈಡಿಂಗ್, ಸ್ನೋ ಬೋರ್ಡಿಂಗ್, ರೈಫಲ್ ಶೂಟಿಂಗ್, ಮಿಕ್ಸೆಡ್ ಮಾರ್ಷಲ್ ಆರ್ಟ್ಸ್, ಮ್ಯೂ ಥಾಯ್ ಕಲಿತು, ಸದ್ಯ ಸ್ಕೈಡೈವಿಂಗ್ ತರಬೇತಿ ಪಡೆಯಲು ರಷಿಯಾಗೆ ಹಾರಲು ರೆಡಿಯಾಗಿದ್ದಾರೆ.
ಗೊತ್ತಿಲ್ಲ ಅಂತ ಯಾವುದೂ ಇರಬಾರದು
ಹೀಗೆ ಹೊಸ ಹೊಸ ಕಲೆಗಳನ್ನು ಕಲಿಯುತ್ತಿರುವ ಬಗ್ಗೆ ಕಿರಣ್ ರಾಜ್, “ಈಗಿನ ಸ್ಪರ್ಧಾತ್ಮಕ ಲೋಕದಲ್ಲಿ ಹೆಚ್ಚು ವಿಷಯಗಳನ್ನು ಕಲಿತರೆ ಉತ್ತಮ. ನಾನು ಏನೇ ಮಾಡಿದರೂ ಅದನ್ನು ಕೇವಲ ಅನುಭವಕ್ಕಾಗಿ ಮಾಡುವುದಿಲ್ಲ. ಮೊದಲು ಕಲಿತು, ನಂತರ ಮತ್ತೊಬ್ಬರಿಗೆ ಕಲಿಸುವಷ್ಟು ನೈಪುಣ್ಯತೆ ಪಡೆಯುತ್ತೇನೆ. ಈಗಾಗಲೇ ವಾಟರ್ ಸರ್ಫಿಂಗ್, ಪ್ಯಾರಾಗ್ಲೈಡಿಂಗ್, ಸ್ನೋ ಬೋರ್ಡಿಂಗ್, ರೈಫಲ್ ಶೂಟಿಂಗ್ಗಳಲ್ಲಿ ಸರ್ಟಿಫಿಕೇಟ್ ಪಡೆದಿದ್ದೇನೆ. ಚಿತ್ರರಂಗಕ್ಕೆ ಹೊಸಬನಾಗಿ, ಹೊರಗಿನವನಾಗಿ ಬಂದವನಾದ ಕಾರಣ, ನಾನು ನನ್ನ ಸ್ಕಿಲ್ಸ್ ಮೂಲಕ ಸ್ಪರ್ಧೆ ನೀಡಬಯಸುತ್ತೇನೆ. ನನಗೆ ಗೊತ್ತಿಲ್ಲ ಅಂತ ಯಾವುದೂ ಇರಬಾರದು. ಯಾವುದಾದರೂ ಒಂದು ಪಾತ್ರ ಮನಸ್ಸಿನಲ್ಲಿದ್ದರೆ, ಕಿರಣ್ಗೆ ಅದು ಗೊತ್ತಲ್ಲವೇ ಅಂತನ್ನಿಸಬೇಕು. ಹಾಗೇ ಜೀವನ ತುಂಬ ಚಿಕ್ಕದು, ಬದುಕು ಒಂದು ಅನುಭವ. ಎಲ್ಲವನ್ನೂ ಅನುಭವಿಸಬೇಕು’ ಎಂದು ಹೇಳಿಕೊಳ್ಳುತ್ತಾರೆ.
ಹಣವಲ್ಲ, ಸಾಧನೆ ಮುಖ್ಯ
ಗುರುತೇಜ್ ಶೆಟ್ಟಿ ನಿರ್ದೇಶನದ “ರಾನಿ’ ಚಿತ್ರದಲ್ಲೂ ಕಿರಣ್ ನಾಯಕನಾಗಿ ನಟಿಸಿದ್ದು, ಅದರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. “”ರಾನಿ’ ಮೇಲೆ ತುಂಬ ನಿರೀೆಯಿದೆ. ಏಕೆಂದರೆ ಇಲ್ಲಿಯವರೆಗೂ ನಾನು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಸಾಕು ಎಂಬಂತಿದ್ದೆ. ಆದರೆ, “ರಾನಿ’ ಬಳಿಕ ಕಥೆ, ಪಾತ್ರ ನೋಡಿ ಆಯ್ಕೆ ಮಾಡಿಕೊಳ್ಳಲಿದ್ದೇನೆ. ನಾನು ಚಿತ್ರರಂಗಕ್ಕೆ ಹಣ ಮಾಡಲು ಬಂದಿಲ್ಲ. ಇಲ್ಲೇ ಇದ್ದು ಏನಾದರೂ ಸಾಧಿಸಬೇಕು ಅಂತಾಸೆ. ನಮ್ಮ ನಟರನ್ನು ಬೇರೆ ಚಿತ್ರರಂಗದ ನಟರಿಗೆ ಹೋಲಿಸುತ್ತಾರೆ. ಅಂತಹ ಹೋಲಿಕೆಯಲ್ಲಿ ನನ್ನ ಹೆಸರು ಬಂದಾಗ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಎನಿಸಬೇಕು’ ಎಂದು ಭರವಸೆಯಿಂದ ನುಡಿಯುತ್ತಾರೆ ಕಿರಣ್ ರಾಜ್.
ಸಿಟಿ ಹುಡುಗನ ಹಳ್ಳಿ ಕಥೆ
“ಭರ್ಜರಿ ಗಂಡು’ ಚಿತ್ರದ ಬಗ್ಗೆ ಕಿರಣ್ ರಾಜ್, “ಸಿಟಿ ಹುಡುಗ ಹಳ್ಳಿಗೆ ಹೋಗುತ್ತಾನೆ. ಅಲ್ಲಿನ ಜನ, ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತಾನೆ? ಅಲ್ಲಿನ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾನೆ? ಎಂಬುದೇ ಸ್ಟೋರಿ. ಚಿತ್ರದ ಶೀರ್ಷಿಕೆಯೇ ದೊಡ್ಡ ಜವಾಬ್ದಾರಿ ನೀಡುತ್ತದೆ. ಪಾತ್ರದ ಲುಕ್ಗಾಗಿ ವರ್ಕೌಟ್ ಮಾಡಿ ದೈಹಿಕವಾಗಿ ರೆಡಿಯಾದೆ. ಹಾಗೇ ಸಾಹಸ ಸನ್ನಿವೇಶಕ್ಕಾಗಿ ಕೋಲು ಹಿಡಿದು ಹೊಡೆದಾಡುವುದನ್ನು ಕಲಿತೆ, ಹಾಗೇ ಸ್ಟಂಟ್ಸ್ ತರಬೇತಿ ಪಡೆದೆ’ ಎನ್ನುತ್ತಾರೆ.