More

    ಕನ್ನಡ ಶಾಲೆಗಳ ಉಳಿವಿಗೆ ನ್ಯಾಯಾಂಗ ಹೋರಾಟ

    ಕನ್ನಡ ಸಾಹಿತ್ಯ ಪರಿಷತ್‌ನಿಂದ ಚಿಂತನ ಸಭೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಗೆ ಒಮ್ಮತದ ನಿರ್ಧಾರ

    ಬೆಂಗಳೂರು: ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯು ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಮಾರಕವಾಗಿದ್ದು, ಇದಕ್ಕೆ ಪರಿಹಾರ ಪಡೆಯಲು ನ್ಯಾಯಾಂಗದ ಮೊರೆ ಹೋಗಬೇಕಿದೆ. ಜತೆಗೆ ಕನ್ನಡ ಭಾಷೆಯ ಬೆಳವಣಿಗೆಗಾಗಿ ಜನಾಂದೋಲನ ರೂಪಿಸುವ ಅಗತ್ಯವಿದೆ ಎಂದು ವಿವಿಧ ಕ್ಷೇತ್ರಗಳ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದರು.

    ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಬುಧವಾರ ಹಮ್ಮಿಕೊಂಡಿದ್ದ ‘ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ’ ಚಿಂತನ ಸಭೆಯಲ್ಲಿ ಸಾಹಿತ್ಯ, ಶಿಕ್ಷಣ, ನ್ಯಾಯಾಂಗ, ಆಡಳಿತ ಸೇರಿ ವಿವಿಧ ಕ್ಷೇತ್ರಗಳ ಹಾಗೂ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಈ ವೇಳೆ ಜಿಲ್ಲೆಗೊಂದು ಮಾದರಿ ಕನ್ನಡ ಶಾಲೆ ಸ್ಥಾಪನೆ, ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು, ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ, ಶಿಕ್ಷಕರಿಗೆ ಉತ್ತಮ ತರಬೇತಿ, ಕನ್ನಡದೊಂದಿಗೆ ಇಂಗ್ಲಿಷ್ ಬೋಧನೆ, ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಪ್ರತ್ಯೇಕ ಅನುದಾನ ಸೇರಿ ಹಲವು ಸಲಹೆಗಳನ್ನು ನೀಡಿದರು.

    ನ್ಯಾಯಾಂಗದ ಹೋರಾಟ: ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳ ಪುನಶ್ಚೇತನಕ್ಕೆ ಕಾನೂನಿನ ತಡೆಯಿಲ್ಲ. ಸರ್ಕಾರಗಳು ನ್ಯಾಯಾಂಗಕ್ಕೆ ಅಂಜುತ್ತವೆ. ಹಾಗಾಗಿ ನ್ಯಾಯಾಂಗದ ಹೋರಾಟದ ಬಗ್ಗೆಯೂ ಯೋಚಿಸಬೇಕಿದೆ. ಸರ್ಕಾರವು ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಿ, ಆಕರ್ಷಕ ರೀತಿಯಲ್ಲಿ ರೂಪಿಸಬೇಕು. ಜನಪ್ರತಿನಿಧಿಗಳೂ ಈ ಬಗ್ಗೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

    ಹಿರಿಯ ಸಾಹಿತಿ ಜಿ.ಎಸ್. ಸಿದ್ದಲಿಂಗಯ್ಯ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಿಂದೆ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದವರು. ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ. ಶಿಕ್ಷಣ ಪೋಷಕರ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಶಾಲೆಗಳ ಉಳಿವಿಗೆ ಸರ್ಕಾರ ಆಡಳಿತಾತ್ಮಕ ಕೆಲಸ ಮಾಡಬೇಕು. ಪರಿಷತ್‌ನ ನಿಯೋಗ ಸರ್ಕಾರಕ್ಕೆ ಹಾಗೂ ವಿರೋಧ ಪಕ್ಷಕ್ಕೆ ಮನವರಿಕೆ ಮಾಡಿಸಬೇಕು ಎಂದರು.


    ನ್ಯಾಯಾಂಗದ ಬರೆ ಹಾಕಬೇಕು: ಲೇಖಕ ಪ್ರಧಾನ್ ಗುರುದತ್ತ ಮಾತನಾಡಿ, ಜನಪ್ರತಿನಿಧಿಗಳೇ ಶಾಲೆಗಳನ್ನೂ ನಡೆಸುತ್ತಿದ್ದಾರೆ. ಹಾಗಾಗಿ ಕನ್ನಡ ಶಾಲೆಗಳಿಗೆ ಈ ದುಸ್ಥಿತಿ ಬಂದಿದೆ. ಬಹಳಷ್ಟು ಕಡೆ ಕನ್ನಡ ಮಾಧ್ಯಮಕ್ಕೆ ಮಾನ್ಯತೆ ಪಡೆದು, ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಹಳ್ಳಿಗಳಲ್ಲಿ ಸಿಬಿಎಸ್‌ಸಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಸರ್ಕಾರಕ್ಕೆ ನ್ಯಾಯಾಂಗದ ಮೂಲಕ ಬರೆ ಹಾಕುವ ಕೆಲಸ ಆಗಬೇಕಿದೆ ಎಂದು ಹೇಳಿದರು.


    ತಜ್ಞರ ಸಮಿತಿ ರಚನೆಗೆ ತೀರ್ಮಾನ: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಿ ಅವುಗಳಿಗೆ ಮೂಲಸೌಕರ್ಯ ಒದಗಿಸಬೇಕು. ಅಗತ್ಯಕ್ಕೆ ತಕ್ಕ ಶಿಕ್ಷಕರ ನೇಮಕ ಮಾಡಬೇಕು. ಇದಕ್ಕಾಗಿ ನ್ಯಾಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ಹಾಗೂ ಈ ವಿಚಾರವಾಗಿ ಸೂಕ್ತ ನಿರ್ಣಯ ಕೈಗೊಳ್ಳಲು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಯಿತು.


    ಬೇಲಿಮಠದ ಪೀಠಾಧ್ಯಕ್ಷ ಶಿವರುದ್ರ ಸ್ವಾಮೀಜಿ, ಮಾಜಿ ಸಚಿವೆ ರಾಣಿ ಸತೀಶ್, ಸಾಹಿತಿ ಡಾ. ದೊಡ್ಡರಂಗೇಗೌಡ, ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ.ಎ.ಮುರೆಗೆಪ್ಪ, ಕನ್ನಡ ಹೋರಾಟಗಾರರಾದ ರಾ.ನಂ.ಚಂದ್ರಶೇಖರ್, ಬೀದರ್‌ನ ಶ್ರೀ ರೇವಣ್ಣ ಸಿದ್ದಪ್ಪ ಜಲಾಧಿ ಇತರರು ಇದ್ದರು.

    ಕೋಟ್ . . .
    ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾದರೂ ಶಾಲೆಗಳು ಮೂಲಸೌಕರ್ಯ ಸಮಸ್ಯೆ ಎದುರಿಸುತ್ತಿವೆ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಹೆಚ್ಚಾಗುತ್ತಿದೆ. ಸರ್ಕಾರ ಪರಿವರ್ತಿಸಿದ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳಿಂದಲೂ ಮಕ್ಕಳಿಗೆ ಪ್ರಯೋಜನ ಆಗುತ್ತಿಲ್ಲ.
    ನಾಡೋಜ ಡಾ. ಮಹೇಶಜೋಶಿ, ಕಸಾಪ ಅಧ್ಯಕ್ಷ

    ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಈ ಶಾಲೆಗಳಲ್ಲಿಯೂ ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸಬೇಕು. ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ, ಸರ್ಕಾರದ ವಿರುದ್ಧ ಮುಷ್ಕರ ನಡೆಸಬೇಕು. ಈ ವಿಚಾರವಾಗಿ ಆಮರಣಾನಂತರ ಉಪವಾಸಕ್ಕೂ ನಾನು ಸಿದ್ಧ.
    ಹಂ.ಪ.ನಾಗರಾಜಯ್ಯ, ಸಾಹಿತಿ

    ಸರ್ವಶಿಕ್ಷಣ ಅಭಿಯಾನದಡಿ ಕೋಟಿ ಕೋಟಿ ಹಣ ಬಂದರೂ ಶೌಚಗೃಹ, ಬೆಂಚುಗಳಿಲ್ಲದ ಪರಿಸ್ಥಿತಿ ನಮ್ಮ ಶಾಲೆಗಳದ್ದು. ಶಿಕ್ಷಕರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡಿ, ಜಿಲ್ಲೆಗೊಂದು ಮಾದರಿ ಕನ್ನಡ ಮಾಧ್ಯಮ ಶಾಲೆ ರೂಪಿಸಬೇಕು. ಅಲ್ಲಿ ಒಂದು ಭಾಷೆಯಾಗಿ ಇಂಗ್ಲಿಷ್ ಬೋಧಿಸಬೇಕು.
    ಪ್ರೊ. ಗುರುರಾಜ ಕರ್ಜಗಿ, ಶಿಕ್ಷಣ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts