More

    ಸರಳವಾಗಿ ನಾಡಹಬ್ಬ ಕನ್ನಡ ರಾಜ್ಯೋತ್ಸವ ಆಚರಣೆ

    ಚಿಕ್ಕಬಳ್ಳಾಪುರ: ಮೋಡ ಮುಸುಕಿದ ವಾತಾವರಣ, ತುಂತುರು ಮಳೆಯ ಸಿಂಚನದ ನಡುವೆ ಸೋಮವಾರ ಜಿಲ್ಲಾದ್ಯಂತ ನಾಡಹಬ್ಬ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಪಥಸಂಚಲನದಲ್ಲಿ ಕನ್ನಡದಲ್ಲಿನ ಆಜ್ಞೆಗಳು ಮಾರ್ದನಿಸಿದವು.

    ಕರೊನಾ ಮುಂಜಾಗ್ರತಾ ಕ್ರಮಗಳ ಪಾಲನೆಯ ಹಿನ್ನೆಲೆಯಲ್ಲಿ ಸಾಮೂಹಿಕ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಭಾಗಿತ್ವಕ್ಕೆ ವಿನಾಯಿತಿ ನೀಡಿದ್ದು ಸೀಮಿತ ಸಂಖ್ಯೆಯಲ್ಲಿ ಜನರು ಭಾಗವಹಿಸಲು ಅವಕಾಶ ನೀಡಲಾಗಿತ್ತು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ಸರ್ ಎಂ.ವಿ.ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ವಾಹನದಲ್ಲಿ ತೆರಳಿ, ವಿವಿಧ ಪಥ ಸಂಚಲನ ತಂಡಗಳ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಪೊಲೀಸ್, ಜಿಲ್ಲಾ ಸಶಸ ಮೀಸಲು ಪಡೆ, ಗೃಹರಕ್ಷಕ ದಳ ಸಿಬ್ಬಂದಿಯ ಪಥಸಂಚಲನ ಗಮನ ಸೆಳೆಯಿತು.

    ಪ್ರಶಸ್ತಿ ವಿತರಣೆ, ಸನ್ಮಾನ: ಪ್ರೊ.ಬಿ.ವಿ.ಕೃಷ್ಣ (ಶಿಕ್ಷಣ), ವೆಂಕಟರಮಣ (ಜಾನಪದ ಕಲೆ), ಕೆ.ನರಸಿಂಹಪ್ಪ (ಸಾಹಿತ್ಯ), ಮೊಹಮ್ಮದ್ ಜಿಲಾನಿ (ಪತ್ರಕರ್ತ), ಎಸ್.ಪಿ.ಗೋಪಾಲಕೃಷ್ಣ (ಸಾಹಿತ್ಯ), ಹೋಟೆಲ್ ರಾಮಣ್ಣ(ಸಮಾಜಸೇವೆ), ವೀರಭದ್ರಯ್ಯ (ಜಾನಪದ ಕಲೆ), ಎ.ಎಂ.ತ್ಯಾಗರಾಜು (ಸಾಹಿತ್ಯ), ರಾಜಮ್ಮ (ರಂಗಭೂಮಿ) ಮತ್ತು ವಿ.ರವಿಕುಮಾರ್‌ಗೆ (ಪತ್ರಕರ್ತ) ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು.

    ಮೊದಲ ಬಾರಿಗೆ ಕನ್ನಡದಲ್ಲಿ ಆಜ್ಞೆ: ರಾಜ್ಯೋತ್ಸವದ ಪಥ ಸಂಚಲನದಲ್ಲಿ ಇಂಗ್ಲೀಷ್, ಹಿಂದಿ ಬದಲಿಗೆ ಕನ್ನಡದಲ್ಲಿ ಕೇಳಿಬಂದ ಆಜ್ಞೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ‘ಎಡಕ್ಕೆ ತಿರುಗಿ ಮುಂದೆ ನಡೆಯಿರಿ, ಬಲಕ್ಕೆ ತಿರುಗಿ ಧ್ವಜವಂದನೆ ಸಲ್ಲಿಸಿ, ಪಥಸಂಚಲನಕ್ಕೆ ಅನುಮತಿ ಸೇರಿ’ ತಂಡದ ಉಸ್ತುವಾರಿಗಳ ಘೋಷಣೆಯು ಗಮನ ಸೆಳೆಯಿತು. ಇನ್ನು ಕರೊನಾ ಕಾರಣದಿಂದಾಗಿ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು, ಮೆರವಣಿಗೆಯನ್ನು ರದ್ದುಪಡಿಸಲಾಗಿತ್ತು. ಕಡ್ಡಾಯವಾಗಿ ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸ್, ಪರಸ್ಪರ ಅಂತರ ಕಾಪಾಡಿಕೊಳ್ಳುವಿಕೆ ಸೇರಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಯಿತು.

    ತುಂತುರು ಹನಿಗಳ ಸಿಂಚನ: ಬೆಳಗ್ಗೆಯಿಂದ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು. ಧ್ವಜವಂದನೆ, ಜಿಲ್ಲಾ ಉಸ್ತುವಾರಿ ಸಚಿವರ ಭಾಷಣದ ಸಂದರ್ಭದಲ್ಲಿ ತುಂತುರು ಹನಿಗಳ ಸಿಂಚನವಾಯಿತು. ಆದರೂ ಮೈದಾನದಲ್ಲಿ ನಿಂತುಕೊಂಡಿದ್ದ ಪಥ ಸಂಚಲನ ತಂಡಗಳು ಕದಲಿಲ್ಲ. ಜೋರು ಮಳೆ ಬೀಳುವ ಆತಂಕ ಮೂಡಿತ್ತಾದರೂ ಕಾರ್ಯಕ್ರಮ ಅರ್ಥಪೂರ್ಣವಾಗಿಯೇ ಪೂರ್ಣಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts