More

    ಮೂಡುಬಿದಿರೆಯಲ್ಲಿ ಸುಸಜ್ಜಿತ ಕನ್ನಡ ಭವನ, ರೂ.12 ಕೋಟಿ ವೆಚ್ಚದಲ್ಲಿ ನಿರ್ಮಾಣ

    ಯಶೋಧರ ಬಂಗೇರ ಮೂಡುಬಿದಿರೆ

    ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ 2003ರಲ್ಲಿ ನಡೆದ 71ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಸ್ಕೌಟ್ ಗೈಡ್ಸ್ ಕನ್ನಡ ಭವನ ನಿರ್ಮಾಣಗೊಳ್ಳುತ್ತಿದ್ದು, ಶೇ.85ರಷ್ಟು ಕೆಲಸ ಪೂರ್ಣಗೊಂಡಿದೆ.

    ಯುವಜನ ಸೇವಾ ಇಲಾಖೆ ಅಧೀನದಲ್ಲಿರುವ ಸ್ವರಾಜ್ಯ ಮೈದಾನ ಪರಿಸರ 30 ಎಕರೆ ವ್ಯಾಪ್ತಿಯಲ್ಲಿದ್ದು, ಈ ಪೈಕಿ 1 ಎಕರೆ ಜಾಗದಲ್ಲಿ ಕನ್ನಡ ಭವನ ನಿರ್ಮಾಣಗೊಳ್ಳುತ್ತಿದೆ. ಸಿಂಥೆಟಿಕ್ ಟ್ರಾೃಕ್, ಈಜುಕೊಳದ ಸಮೀಪ ರಿಂಗ್ ರೋಡ್ ಪಕ್ಕ ಕನ್ನಡ ಭವನದ ಕಟ್ಟ ತಲೆ ಎತ್ತಲಿದೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಳ್ವಾಸ್ ಸಂಸ್ಥೆ ಹಾಗೂ ದಾನಿಗಳ ನೆರವಿನೊಂದಿಗೆ 12 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಾಣವಾಗುತ್ತಿದೆ. 70 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿರುವ ಕಟ್ಟಡದಲ್ಲಿ ಐದು ಸಭಾಂಗಣಗಳಿದ್ದು, ಏಕಕಾಲದಲ್ಲಿ ಎಲ್ಲ ಕಡೆ ಕಾರ್ಯಕ್ರಮ ಮಾಡಬಹುದು. 1200 ಮಂದಿ ಗ್ಯಾಲರಿ ಮಾದರಿಯಲ್ಲಿ ಕುಳಿತು ಕಲಾ ಪ್ರದರ್ಶನ, ಸಭೆ ಸಮಾರಂಭ ವೀಕ್ಷಿಸಲು ಸಾಧ್ಯವಾಗುವಂತೆ 60 ಅಡಿ ಅಗಲ, 22 ಅಡಿ ಎತ್ತರದ ವೇದಿಕೆಯಿದೆ. ಧ್ವನಿ, ಬೆಳಕು, ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಎಕೋ ಪ್ರೂಫ್, ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಹಿಂಭಾಗ ಕಲಾವಿದರಿಗೆ ವಿಶೇಷ ಪ್ಯಾಸೇಜ್ ಮಾಡಲಾಗಿದೆ. ಭವನದ ಕೆಳ ಅಂತಸ್ತಿನಲ್ಲಿ ಏಕಕಾಲಕ್ಕೆ 800 ಜನ ಕುಳಿತು ಭೋಜನ ಸವಿಯಬಲ್ಲ ಭೋಜನಾಲಯವಿದೆ. ಮೇಲಂತಸ್ತಿನಲ್ಲಿ 400 ಆಸನ ಉಳ್ಳ ಎರಡು ಸಭಾಂಗಣ, 250 ಆಸನಗಳ ಮಿನಿ ಸಭಾಂಗಣವಿದೆ. ಪ್ರತ್ಯೇಕ ಐದು ಕೊಠಡಿ, ವಿಐಪಿ ರೂಂ, ಮೀಟಿಂಗ್ ಕೊಠಡಿಗಳು ಕನ್ನಡ ಭವನದಲ್ಲಿದೆ.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮುತುವರ್ಜಿಯಲ್ಲಿ ಭವನ ನಿರ್ಮಾಣವಾಗುತ್ತಿದ್ದು ಕನ್ನಡ ಸಂಸ್ಕೃತಿ ಇಲಾಖೆಯಿಂದ 1.5 ಕೋಟಿ ರೂ. ಬಿಡುಗಡೆಯಾಗಿದೆ. ಭವನ ನಿರ್ಮಾಣಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹೆಚ್ಚಿನ ವೆಚ್ಚ ಭರಿಸುತ್ತಿದ್ದು, ಎಂಸಿಎಸ್ ಬ್ಯಾಂಕ್ 25 ಲಕ್ಷ ರೂ. ಸಹಿತ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು, ಕಲಾಪ್ರೇಮಿಗಳು ಆರ್ಥಿಕ ನೆರವು ನೀಡುತ್ತಿದ್ದಾರೆ.

    ಪ್ರವಾಸಿ, ಶಿಕ್ಷಣ ಕೇಂದ್ರವಾಗಿರುವ ಮೂಡುಬಿದಿರೆ ಕಲಾವಿದರು, ಕಲಾಸಕ್ತರನ್ನು ಆಕರ್ಷಿಸುವ ತಾಣ. ಇಲ್ಲಿನ ಕಾರ್ಯಕ್ರಮಗಳಿಗೆ ಪೂರಕವಾಗುವಂತೆ ಸುಸಜ್ಜಿತ ಭವನದ ಅವಶ್ಯಕತೆ ಇದ್ದು, ಕನ್ನಡ ಸಂಸ್ಕೃತಿ ಇಲಾಖೆ, ಆಳ್ವಾಸ್ ಹಾಗೂ ವಿವಿಧ ಸಂಘ ಸಂಸ್ಥೆಗಳು, ದಾನಿಗಳ ನೆರವಿನೊಂದಿಗೆ ಕನ್ನಡ ಭವನ ನಿರ್ಮಾಣಗೊಳ್ಳುತ್ತಿದೆ. ಐದು ಸಭಾಂಗಣವಿದ್ದು, ಏಕಕಾಲಕ್ಕೆ ಎಲ್ಲ ಕಡೆಯೂ ತಡೆ ಇಲ್ಲದೆ ಕಾರ್ಯಕ್ರಮ ಆಯೋಜನೆ ಮಾಡುವಂತೆ ಕಟ್ಟಡದ ವಿನ್ಯಾಸವಿದೆ.

    ಡಾ.ಎಂ ಮೋಹನ ಆಳ್ವ
    ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts