More

    ತಮ್ಮ ವಿರುದ್ಧ ಜಾಲತಾಣದಲ್ಲಿ ಹರಿದಾಡುತ್ತಿರೋ ವದಂತಿಗಳಿಗೆ ಖಡಕ್​ ಪ್ರತಿಕ್ರಿಯೆ ನೀಡಿದ ಕರೊನಾ ಸೋಂಕಿತ ಬಾಲಿವುಡ್​ ಗಾಯಕಿ

    ನವದೆಹಲಿ: ಕರೊನಾ ವೈರಸ್​ ಪಾಸಿಟಿವ್​ ತಿಳಿದ ಬೆನ್ನಲ್ಲೇ ತನ್ನ ವಿರುದ್ಧ ಹರಿದಾಡುತ್ತಿರುವ ಎಲ್ಲ ವದಂತಿಗಳಿಗೆ ಬಾಲಿವುಡ್​ ಗಾಯಕಿ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ಸ್ಕ್ರೀನಿಂಗ್​ನಿಂದ ತಪ್ಪಿಸಿಕೊಳ್ಳಲು ಯತ್ನಿಸಲಿಲ್ಲ. ಅಧಿಕಾರಿಗಳ ಪರೀಕ್ಷೆಗೂ ಒಳಗಾಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕನ್ನಿಕಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರೋಪಗಳ ಸುರಿಮಳೆ ಬರುತ್ತಿದೆ. ಈ ತಿಂಗಳ ಆರಂಭದಲ್ಲಿ ಲಂಡನ್​ನಿಂದ ಮರಳಿದ ಕನ್ನಿಕಾಗೆ ಕೋವಿಡ್​-19 ಇದೆ ಎಂದು ಗೊತ್ತಾದ ಬಳಿಕವೂ ಅದನ್ನು ನಿರ್ಲಕ್ಷಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿವೆ.

    ಈ ಸಂಬಂಧ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಸೂಚನೆ ಮೇರೆಗೆ ಲಖನೌದ ಸರೋಜಿನಿ ನಗರ ಪೊಲೀಸ್​ ಠಾಣೆಯಲ್ಲಿ ಕನ್ನಿಕಾ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ.

    ಮಾಧ್ಯಮ ಸಂದರ್ಶನದಲ್ಲಿ ತಮ್ಮ ವಿರುದ್ಧದ ವದಂತಿಗಳಿಗೆ ಕನ್ನಿಕಾ ಕಿಡಿಕಾರಿದ್ದಾರೆ. ಮಾರ್ಚ್​ 9ರಂದು ಲಂಡನ್​ನಿಂಡ ಮರಳಿದ ಕನ್ನಿಕಾ ಸ್ಕ್ರೀನಿಂಗ್ ತಪ್ಪಿಸಿಕೊಳ್ಳಲು ಶೌಚಗೃಹದಲ್ಲಿ ಅಡಗಿ ಕುಳಿತರು ಎಂಬ ವದಂತಿ ಹಬ್ಬಿದೆ. ಇದಕ್ಕೆ ಉತ್ತರಿಸಿದ ಅವರು ಅಂತಾರಾಷ್ಟ್ರೀಯ ವಿಮಾನದಿಂದ ಬಂದ ವ್ಯಕ್ತಿಯೊಬ್ಬರು ವಲಸೆ ಕೇಂದ್ರದಲ್ಲಿ ಸ್ಕ್ರೀನಿಂಗ್​ನಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ? ನೀವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.

    ನಾನು ಮುಂಬೈ ಏರ್​ಪೋರ್ಟ್​ನಲ್ಲಿ ಸೂಕ್ತವಾದ ಸ್ಕ್ರೀನಿಂಗ್​ಗೆ ಒಳಗಾದೆ. ಅಲ್ಲದೆ, ಒಂದು ದಿನದ ಮಟ್ಟಿಗೆ ನಾನು ಮುಂಬೈನಲ್ಲೇ ಉಳಿದುಕೊಂಡೆ. ಆದರೆ, ಬಾಲಿವುಡ್​ ಸ್ತಬ್ಧವಾಗಿದ್ದರಿಂದ ಮನೆಗೆ ಮರಳುವಂತೆ ನನ್ನ ಪಾಲಕರು ನನಗೆ ಸಲಹೆ ನೀಡಿದರು. ಹೀಗಾಗಿ ಮಾರ್ಚ್​ 11ರಂದು ಬೆಳಗಿನ ವಿಮಾನದಲ್ಲಿ ನಾನು ಲಖನೌಗೆ ತೆರಳಿದೆ. ಆ ಸಮಯದಲ್ಲಿ ಸರ್ಕಾರ ಯಾವುದೇ ಸಲಹೆಯನ್ನು ನೀಡಿರಲಿಲ್ಲ. ನಾನು ಸ್ಕ್ರೀನಿಂಗ್​ಗೆ ಒಳಗಾದಾಗ ನನ್ನಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಮುಂಬೈ ಬಿಟ್ಟಾಗಲೂ ನನಗೆ ಯಾವುದೇ ತೊಂದರೆ ಇರಲಿಲ್ಲ. ನಂತರದ ನಾಲ್ಕೈದು ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡವು ಎಂದು ತಿಳಿಸಿದ್ದಾರೆ.

    ಪಾರ್ಟಿಯನ್ನು ಆಯೋಜಿಸಿದ್ದರು ಎಂಬ ವದಂತಿಗೆ ಪ್ರತಿಕ್ರಿಯಿಸಿ, ನಾನು ಈವರೆಗೂ ಯಾವುದೇ ಪಾರ್ಟಿಯನ್ನು ಆಯೋಜಿಸಿಲ್ಲ. ಸಣ್ಣ ಪುಟ್ಟ ಬರ್ತ್​ಡೇ ಸಮಾರಂಭಗಳಲ್ಲಿ ಭಾಗಿಯಾಗಿದ್ದೆ. ಅದರಲ್ಲಿ ಅನೇಕ ರಾಜಕಾರಣಿಗಳು ಸಹ ಭಾಗವಹಿಸಿದ್ದರು. ನಾನು ಅವರ ಹೆಸರುಗಳನ್ನು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ನಾನು ಯಾವುದೇ ಎಚ್ಚರಿಕೆಯನ್ನು ನಿರ್ಲಕ್ಷಿಸಿಲ್ಲ. ರೋಗ ಲಕ್ಷಣಗಳು ಬಂದ ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿರುವ ನನ್ನ ಆಪ್ತರಿಗೆ ಕರೆ ಮಾಡಿದೆ. ರಕ್ತದ ಮಾದರಿಯನ್ನು ಪರೀಕ್ಷಿಸಿದೆ. ಬಳಿಕ ಅವರು ಆರೋಗ್ಯ ಸಚಿವಾಲಯಕ್ಕೆ ತಿಳಿಸುವಂತೆ ಸಲಹೆ ನೀಡಿದರು. ನಾನು ಸಹಾಯವಾಣಿಗೆ ಕರೆ ಮಾಡಿದೆ. ನನ್ನ ರೋಗದ ಲಕ್ಷಣಗಳನ್ನು ಕೇಳಿದ ಬಳಿಕ ಇದು ಕರೊನಾ ವೈರಸ್​ ರೀತಿ ಕಾಣುತ್ತಿಲ್ಲ. ಇದೊಂದು ಸೀಸನ್​ ಜ್ವರ ಇರಬಹುದೆಂದು ಹೇಳಿದರು. ಆದರೂ ನಾನು ಅವರನ್ನು ಪೀಡಿಸುತ್ತಲೇ ಇದ್ದೆ. ಬಳಿಕ ನನ್ನ ರಕ್ತದ ಮಾದರಿಯನ್ನು ತೆಗೆದುಕೊಳ್ಳಲು ಪ್ರಧಾನಮಂತ್ರಿ ಕಾರ್ಯಾಲಯ ಜನರನ್ನು ಕಳುಹಿಸಿತು. ಬಳಿಕ ಬಂದು ಮಾದರಿಯನ್ನು ಸಂಗ್ರಹಿಸಿ ಹೋದರು. ಕಳೆದ ಸೋಮವಾರದಿಂದ ನನ್ನಷ್ಟಕ್ಕೆ ನಾನು ಸ್ವಯಂ ಏಕಾಂತದಲ್ಲಿದ್ದೇನೆ. ಈಗ ಹೇಳಿ ಯಾರು ನಿರ್ಲಕ್ಷ್ಯ ವಹಿಸಿದರು ಎಂದು ಕನ್ನಿಕಾ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

    ಸಿಎಂ ಯೋಗಿ ಆದಿತ್ಯನಾಥ್​ ಸೂಚನೆಯಂತೆ ಬಾಲಿವುಡ್​ ಸಿಂಗರ್​ ಕನ್ನಿಕಾ ಕಪೂರ್​ ವಿರುದ್ಧ ಎಫ್​ಐಆರ್​ ದಾಖಲು

    ಬಾಲಿವುಡ್​ ಪ್ರಖ್ಯಾತ ಗಾಯಕಿಗೆ ಕರೊನಾ ಸೋಂಕು ಧೃಡ: ಕೋವಿಡ್​-19ಗೆ ಗುರಿಯಾದ ಮೊದಲ ಸೆಲೆಬ್ರಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts