More

    ಎಗ್ಗಿಲ್ಲದೆ ಸಾಗಿದೆ ಅಕ್ರಮ ಮರಳು ದಂಧೆ : ರಾತ್ರೋರಾತ್ರಿ ಟಿಪ್ಪರ್‌ಗಳಲ್ಲಿ ಸಾಗಣೆ ಕೆರೆಕಟ್ಟೆ, ನದಿಪಾತ್ರಗಳಲ್ಲೇ ಹೆಚ್ಚು

    ಕನಕಪುರ : ನಿಷೇಧ ಹೇರಿದ್ದರೂ ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಶಿವನಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗಿದೆ.ತಾಲೂಕಿನ ನದಿ, ಕೆರೆ, ಹಳ್ಳಕೊಳ್ಳಗಳಲ್ಲಿ, ಖಾಸಗಿ ಜಮೀನುಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ದಂಧೆಗೆ ಸಂಪೂರ್ಣ ಕಡಿವಾಣ ಹಾಕಿದ್ದರೂ ಇತ್ತೀಚೆಗೆ ಶಿವನಹಳ್ಳಿಯ ಗ್ರಾಮ ಪಂಚಾಯತಿ ಕಟ್ಟಡದ ಪಕ್ಕದಲ್ಲಿಯೇ ಮರಳನ್ನು ಹೊರಗಿನಿಂದ ತಂದು ಗುಡ್ಡೆಹಾಕಿ ರಾತ್ರೋರಾತ್ರಿ ಲಾರಿ ಮತ್ತು ಟಿಪ್ಪರ್‌ಗಳಲ್ಲಿ ಸಾಗಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

    ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸ್ ಇಲಾಖೆ, ಗ್ರಾಮಪಂಚಾಯತಿ, ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಾಣಮೌನ ತಾಳಿದ್ದಾರೆ.ಕನಕಪುರ ತಾಲೂಕಿನಲ್ಲಿ ಸಂಪೂರ್ಣವಾಗಿ ನಿಂತಿದ್ದ ಮರಳು ದಂಧೆಯನ್ನು ಪ್ರಭಾವಿ ರಾಜಕಾರಣಿಗಳ ಕುಮ್ಮಕ್ಕಿನಿಂದ ಮತ್ತೆ ಕೆಲವರು ಪ್ರಾರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 209ರ ಸಮೀಪದಲ್ಲೇ ಇರುವ ಶಿವನಹಳ್ಳಿ ಸಮೀಪದ ಪೆಟ್ರೋಲ್‌ಬಂಕ್ ಪಕ್ಕದ ಆಂಜನೇಯಸ್ವಾಮಿ ದೇಗುಲ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಎದುರು ಮರಳನ್ನು ಅಕ್ರಮವಾಗಿ ಸಂಗ್ರಹಿಸಿದ್ದರೂ ಯಾವೊಬ್ಬ ಅಧಿಕಾರಿಯೂ ಇದನ್ನು ಗಮನಿಸದೇ ಓಡಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.ಈಗಾಗಲೇ ಕೆರೆ, ಕಟ್ಟೆ, ನದಿಪಾತ್ರಗಳಲ್ಲಿ ಅಕ್ರಮವಾಗಿ ಮರಳನ್ನು ಬಗೆದು ಸಾಗಿಸುತ್ತಿರುವುದರಿಂದ ಇಡೀ ಪರಿಸರ ಬರಡಾಗಿದೆ. ಮಳೆಯಿಲ್ಲದೆ ಒಂದು ಹನಿ ನೀರು ಸಿಗದೆ ಜನ ಜಾನುವಾರುಗಳಿಗೆ ಸಮಸ್ಯೆಯಾಗಿದೆ. ಇಂತಹ ಸಮಯದಲ್ಲಿ ಮತ್ತೆ ಭೂಮಿಯನ್ನು ಬಗೆದು ಮರಳು ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಕ್ಕಪಕ್ಕದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಅಕ್ರಮ ಮರಳು ಸಂಗ್ರಹ ಮತ್ತು ಸಾಗಾಣಿಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    ಜಗದೀಶ್ ರೆವಿನ್ಯೂ ಇನ್ಸ್‌ಪೆಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts