More

    ನವಲಿ ಸಮಾನಾಂತರ ಜಲಾಶಯ ವಿರೋಧಿಸಿ ರೈತರ ಪಾದಯಾತ್ರೆ: ಗುಡುದೂರು ಗ್ರಾಮದಿಂದ ಕನಕಗಿರಿವರೆಗೆ ಕಾಲ್ನಡಿಗೆ

    ಕನಕಗಿರಿ: ತುಂಗಭದ್ರಾ ಡ್ಯಾಂ ಹೂಳಿಗೆ ಪರ್ಯಾಯವಾಗಿ ತಾಲೂಕಿನ ನವಲಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಸಮಾನಾಂತರ ಜಲಾಶಯ ವಿರೋಧಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಮುಳುಗಡೆ ಭೀತಿಯ ಗ್ರಾಮಗಳ ರೈತರು ಸೋಮವಾರ ಗುಡುದೂರಿನಿಂದ ಕನಕಗಿರಿವರೆಗೆ ಪಾದಯಾತ್ರೆ ನಡೆಸಿದರು.

    ಗುಡುದೂರಿನಿಂದ 10 ಕಿಮೀ ದೂರದ ಪಟ್ಟಣದವರೆಗಿನ ಕಾಲ್ನಡಿಗೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು. ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಸಮಾವೇಶಗೊಂಡು ಬಹಿರಂಗ ಸಭೆ ನಡೆಸಿದರು. ರೈತ ಮುಖಂಡ ಬಾರಿಮರದಪ್ಪ ನಡುಲಮನಿ ಮಾತನಾಡಿ, ನವಲಿಯಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಿ ನಮ್ಮನ್ನು ಬೀದಿಗೆ ತಳ್ಳುವ ಕೆಲಸಕ್ಕೆ ಸರ್ಕಾರ ಹಾಗೂ ಶಾಸಕರು ಮುಂದಾಗಿದ್ದಾರೆ. ಅಭಿವೃದ್ಧಿ ಮಾಡಲು ಸಾಕಷ್ಟು ಯೋಜನೆಗಳಿವೆ. ಆದರೆ, ನಮಗೆ ಮರಣ ಶಾಸನವಾಗುವ ಜಲಾಶಯ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನಿಯ. ನಮಗೆ ಅನ್ನ, ಜೀವನ ನೀಡಿದ ಭೂಮಿ, ಮನೆ ಹಾಗೂ ಊರುಗಳನ್ನು ಉಳಿಸಿಕೊಡುವಂತೆ ಪಾದಯಾತ್ರೆ ಕೈಗೊಂಡಿದ್ದೇವೆ. ಯಾರದ್ದೋ ಲಾಭಕ್ಕೆ ನಮ್ಮ ಭೂಮಿ, ಗ್ರಾಮಗಳನ್ನು ಬಿಟ್ಟು ಕೊಡಲು ನಾವು ಸಿದ್ಧರಿಲ್ಲ. ಸರ್ಕಾರ ಈ ಯೋಜನೆ ಬಿಟ್ಟು ರೈತರು ನೆಮ್ಮದಿಯಿಂದ ಬದುಕಲು ಬಿಡಬೇಕು ಎಂದು ಆಗ್ರಹಿಸಿದರು.

    ರೈತ ಸಂಘದ ರಾಜ್ಯ ಕಾರ್ಯದರ್ಶಿ ಹನುಮಂತಪ್ಪ ಹೊಳೆಯಾಚೆ ಮಾತನಾಡಿ, ನವಲಿ ಬಳಿ 34 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಾಣ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಈಗಾಗಲೇ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಿರುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ. ಈ ಯೋಜನೆಯಿಂದ ಐತಿಹಾಸಿಕ ಗ್ರಾಮಗಳು ಮುಳುಗಡೆಯಾಗುತ್ತವೆ. ತಲೆ ತಲೆಮಾರುಗಳಿಂದ ಪೂರ್ವಜರು ಉಳಿಸಿಕೊಂಡು ಬಂದ ಕನಸುಗಳು ಸಹ ಮುಳುಗಲಿವೆ. ರೈತರ ಇಚ್ಛೆಗೆ ವಿರುದ್ಧವಾಗಿ ನಿರ್ಮಿಸಲು ಹೊರಟಿರುವ ಸರ್ಕಾರದ ನಡೆ ಖಂಡನೀಯ ಎಂದರು.

    ನಂತರ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಧನಂಜಯ ಮಾಲಗಿತ್ತಿಗೆ ಸಲ್ಲಿಸಲಾಯಿತು. ರೈತ ಮುಖಂಡರಾದ ಶರಣಪ್ಪ ಗದ್ದಿ, ಶ್ರೀನಿವಾಸ, ಹನುಮೇಶ ಹುಳ್ಕಿಹಾಳ, ಹನುಮಮ್ಮ ಗೌಡ್ರ, ಲಕ್ಷ್ಮೀದೇವಿ ಹತ್ತಿಗುಡ್ಡ, ರಮೇಶ ಕೋಟೆ, ಹನುಮಂತ ಹಿರೇಖೇಡ, ಇಸ್ಮಾಯಿಲ್ ನಾಲಾಬಂದ್, ಶಿವಕುಮಾರ, ಯಂಕನಗೌಡ, ಕೆಂಚಪ್ಪ ನಿರ್ಲೂಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts