More

    ಆಟೋಟಕ್ಕೆ ಕೆಪಿಎಸ್ ಮೈದಾನವೇ ಆಸರೆ

    ಮಧುಸೂದನ ಎಚ್.ಮಾದಿನಾಳ ಕನಕಗಿರಿ
    ಪಟ್ಟಣ ತಾಲೂಕು ಕೇಂದ್ರವಾಗಿ 5 ವರ್ಷ ಗತಿಸಿದರೂ ಕ್ರೀಡಾಂಗಣ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿ ತೋರದ ಕಾರಣ ಶಾಲಾ-ಕಾಲೇಜು ಕ್ರೀಡಾಕೂಟ, ಸ್ವಾತಂತ್ರೃ, ಗಣರಾಜ್ಯೋತ್ಸವ, ಕ್ರಿಕೆಟ್‌ಗೆ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಯ ಮೈದಾನವೇ ಆಸರೆಯಾಗಿದೆ.

    ವಿಧಾನಸಭಾ ಕ್ಷೇತ್ರವಾಗಿ (1978) ಮಾರ್ಪಟ್ಟ ಕನಕಗಿರಿ, ಮೂರು ದಶಕಗಳ ಹೋರಾಟದ ಬಳಿಕ 2018ರಿಂದ ತಾಲೂಕು ಕೇಂದ್ರವಾಗಿದೆ. ಆದರೆ, ಪರಿಪೂರ್ಣ ತಾಲೂಕಿಗೆ ಬೇಕಾದ ಹಲವು ಕಚೇರಿಗಳು ಆರಂಭವಾಗಿಲ್ಲ. ಅದರಲ್ಲೂ ತಾಲೂಕು ಕ್ರೀಡಾಂಗಣದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

    ಶಾಲಾ-ಕಾಲೇಜುಗಳ ವಾರ್ಷಿಕ ಕ್ರೀಡಾಕೂಟಗಳು ಸ್ಥಳೀಯ ಶಾಲೆಗಳ ಸರದಿ ಬಂದಾಗ ಅನಿವಾರ್ಯವಾಗಿ ಇಲ್ಲಿನ ಕೆಪಿಎಸ್ ಶಾಲೆಯ ಆವರಣವೇ ಕಣ್ಣಿಗೆ ಬೀಳುತ್ತದೆ. ವರ್ಷಕ್ಕೆ ನಾಲ್ಕು ಬಾರಿ ನಡೆಯುವ ಸಾರ್ವಜನಿಕ ಧ್ವಜಾರೋಹಣ, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾಲೂಕಾಡಳಿತ ಇದೇ ಮೈದಾನವನ್ನೇ ಅವಲಂಬಿಸಿದೆ. 45 ವರ್ಷದ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣಾ ಪ್ರಕ್ರಿಯೆಯನ್ನು ಪಟ್ಟಣದಲ್ಲಿ ನಡೆಸುತ್ತಿದ್ದು, ಇದಕ್ಕೂ ಶಾಲೆಯ ಮೈದಾನ ಬಳಸಿಕೊಳ್ಳಲು ಆಯೋಗ ಮುಂದಾಗಿದೆ.

    ಇದನ್ನೂ ಓದಿ: ಶುರುವಾಗಿದೆ ಸ್ಟೇಡಿಯಂ ನಿರ್ಮಾಣ

    ಐತಿಹಾಸಿಕ ಕನಕಗಿರಿ ಉತ್ಸವ ವೇಳೆ ಈ ಶಾಲೆ ಜತೆಗೆ ಹೊಂದಿಕೊಂಡಿರುವ ರುದ್ರಸ್ವಾಮಿ ಪ್ರೌಢ ಶಾಲೆ ಆವರಣವನ್ನು ಬಳಸಿಕೊಳ್ಳಲಾಗಿತ್ತು. ಅಲ್ಲದೆ ಯುವಜನರ ನೆಚ್ಚಿನ ಆಟವಾಗಿರುವ ಕ್ರಿಕೆಟ್ ಪಂದ್ಯಾವಳಿ ನಡೆಸಲು ಇದೇ ಗ್ರೌಂಡ್ ಆಸರೆಯಾಗಿದೆ. ಪ್ರಸ್ತುತ ಕೆಪಿಎಲ್ ಸೀಸನ್ 5 ಆರಂಭಗೊಂಡಿದೆ. ಆದರೆ, ಅವಕಾಶ ಸಿಕ್ಕಾಗ ಮಾತ್ರ ಪಂದ್ಯ ನಡೆಸಬೇಕಾಗಿದೆ.

    ಅಲ್ಲದೆ, ಆಗಾಗ ಪಟ್ಟಣಕ್ಕೆ ಬರುವ ಗಣ್ಯರ ಹೆಲಿಕಾಪ್ಟರ್‌ಗಳಿಗೆ ಹೆಲಿಪ್ಯಾಡ್ ನಿರ್ಮಾಣ, ಬೃಹತ್ ಸರ್ಕಾರಿ ಕಾರ್ಯಕ್ರಮಗಳನ್ನು ಇಲ್ಲೇ ನಡೆಸಲಾಗುತ್ತದೆ. ಕ್ರೀಡಾಂಗಣ ಇಲ್ಲದ ಕಾರಣ ವಾಯುವಿಹಾರಿಗಳಿಗೆ ರಾಜ್ಯ ಹೆದ್ದಾರಿಗಳೇ ಆಧಾರವಾಗಿವೆ. ಒಳಾಂಗಣ ಕ್ರೀಡಾಂಗಣ ಇಲ್ಲದ್ದರಿಂದ ಕ್ರೀಡಾಸಕ್ತರು ಗೋದಾಮುಗಳನ್ನು ಬಳಸಿಕೊಳ್ಳುತ್ತಿದ್ದರು. ಇದೀಗ ಅವುಗಳಿಗೆ ಕೊಕ್ಕೆ ಬಿದ್ದಿದ್ದರಿಂದ ಹೊರಗೆ ಆಡಬೇಕಾಗಿದೆ. ಬೇಸಿಗೆಯಲ್ಲಿ ಜನರು ಖಾಸಗಿ ಈಜುಕೊಳಕ್ಕೆ ಮೊರೆ ಹೋಗುವಂತಾಗಿದೆ.

    ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ಕಿರಿಕಿರಿ

    ಒಂದೇ ಜಾಗದಲ್ಲಿ ಪಿಯುಸಿ, ಪ್ರೌಢಶಾಲೆ, ಕೆಪಿಎಸ್ ಪ್ರಾಥಮಿಕ, ಮೌಲಾನಾ ಆಜಾದ್ ಶಾಲೆಗಳು ನಡೆಯುತ್ತಿವೆ. ಅಲ್ಲದೆ ತಾಪಂ ಕಚೇರಿಯೂ ಇದೇ ಕಟ್ಟಡದಲ್ಲಿದೆ. ಯಾವುದಾದರೂ ಒಂದು ಸಾರ್ವಜನಿಕ ಕಾರ್ಯಕ್ರಮ ನಡೆದರೆ, ಧ್ವನಿವರ್ಧಕ ಸೇರಿ ಇತರ ಕಾರಣಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಮೈದಾನ ನೆಚ್ಚಿಕೊಂಡ ಕ್ರೀಡಾಸಕ್ತರಿಗೆ ಶಾಲೆಯ ತರಗತಿಗಳು, ಪರೀಕ್ಷೆಗೆ ತೊಂದರೆಯಾಗದಂತೆ ಬಿಡುವಿನ ದಿನಗಳಲ್ಲಿ ಆಟವಾಡಬೇಕು. ಸದ್ಯ ಚುನಾವಣಾ ಪ್ರಕ್ರಿಯೆಗಳು ನಡೆದಿರುವುದರಿಂದ ಆಟ ಆಡಲು ಅವಕಾಶ ಇಲ್ಲದಂತಾಗಿದೆ.

    ಸ್ಥಳ ಅಭಾವವೆಂದು ಇಲಾಖೆಗೆ ಪತ್ರ ?

    ಕನಕಗಿರಿ ಪಟ್ಟಣದಲ್ಲಿ ಮೈದಾನ ನಿರ್ಮಾಣ ಮಾಡಲು 2010ರಲ್ಲಿ 50 ಲಕ್ಷ ರೂ. ಮೀಸಲಿಟ್ಟಿದ್ದು, ಕ್ರೀಡಾಂಗಣಕ್ಕಾಗಿ ಮೌನೇಶ್ವರ ಮಠದ ಎದುರಿಗಿನ ಜಾಗವನ್ನು ಅಧಿಕಾರಿಗಳು ನೋಡಿದ್ದರು. ಆದರೆ, ಅದು ಅಂತಿಮಗೊಳ್ಳದ್ದರಿಂದ ಸರ್ಕಾರ ಅನುದಾನ ಹಿಂಪಡೆಯಿತು ಎನ್ನುವ ಮಾತುಗಳು ಕೇಳಿಬಂದವು. ಕಳೆದ ವರ್ಷ ಕ್ರೀಡಾ ಇಲಾಖೆಯಿಂದ ಪತ್ರ ವ್ಯವಹಾರ ನಡೆದಿದ್ದು, ಸ್ಥಳ ಅಭಾವವಿದೆಯೆಂದು ಮರು ಪತ್ರ ಬರೆಯಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

    ಈ ಬಗ್ಗೆ ಶಾಸಕರು, ಅಧಿಕಾರಿಗಳು ಮೌನವಾಗಿದ್ದಾರೆ. ಚುನಾವಣೆಯಲ್ಲಿ ಯುವಕರನ್ನು ಬಳಸಿಕೊಳ್ಳುವ ಹಾಗೂ ಕ್ರೀಡಾಕೂಟಗಳನ್ನು ಉದ್ಘಾಟಿಸಲು ಬಂದಾಗ ಗ್ರಾಮೀಣ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಬೇಕು ಎಂದು ಭಾಷಣ ಮಾಡುವ ಜನಪ್ರತಿನಿಧಿಗಳು ಕ್ರೀಡಾಂಗಣದ ಬಗ್ಗೆ ಚಕಾರ ಎತ್ತದಿರುವುದು ವಿಪರ್ಯಾಸ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

    ಕನಕಗಿರಿ ಪಟ್ಟಣದಲ್ಲಿ ಕ್ರೀಡಾಂಗಣವಿಲ್ಲ. ಕೆಪಿಎಸ್ ಶಾಲೆಯ ಮೈದಾನವನ್ನೇ ಚುನಾವಣೆ ಪ್ರಕ್ರಿಯೆ, ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅವಲಂಬಿಸಬೇಕಾಗಿದೆ. ಯಾವುದೇ ಕಾರ್ಯಕ್ರಮ ಇಲ್ಲದಿದ್ದಾಗ ಮಾತ್ರ ಕ್ರಿಕೆಟ್ ಆಡುತ್ತೇವೆ. ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿದವರು ಪ್ರಯತ್ನಿಸಬೇಕು.
    ಮಂಜುನಾಥ ಚೂಡಾಮಣಿ, ಕ್ರಿಕೆಟ್ ಆಟಗಾರ

    ಮನುಷ್ಯ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಲು ಕ್ರೀಡೆ, ಯೋಗ ಅವಶ್ಯ. ಅದಕ್ಕೆ ವಿಶಾಲವಾದ ಆವರಣ, ಒಳಾಂಗಣ ಕ್ರೀಡಾಂಗಣ ಬೇಕು. ಆದರೆ, ಪಟ್ಟಣದಲ್ಲಿ ಬ್ಯಾಡ್ಮಿಂಟನ್, ಶೆಟಲ್ ಕಾಕ್ ಆಡಲು ಸ್ಥಳಕ್ಕಾಗಿ ಹುಡುಕಾಟ ನಡೆಸಿ ಬೇಸತ್ತಿದ್ದೇವೆ.
    ಮಂಜುನಾಥ ಪ್ರಭುಶೆಟ್ಟರ್, ಬ್ಯಾಡ್ಮಿಂಟನ್ ಆಟಗಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts