More

    ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧ

    ಕನಕಗಿರಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ತಾಲೂಕು ಘಟಕದಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

    ವಾಲ್ಮೀಕಿ ವೃತ್ತದಲ್ಲಿ ಆಯೋಜಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಲಂಬಾಣಿ ಸಮಾಜದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ ಮಾತನಾಡಿ, ಸದಾಶಿವ ಆಯೋಗ ವರದಿ ಕುರಿತು ಅಧಿವೇಶನದಲ್ಲಿ ಚರ್ಚಿಸದೇ, ರಾಜಕೀಯ ಹಿತಾಸಕ್ತಿಗಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ಅನುಷ್ಠಾನಕ್ಕೆ ಶಿಫಾರಸು ಮಾಡಿರುವುದು ಖಂಡನೀಯ. ಅಲೆಮಾರಿಗಳಾದ ಕೊರಮ, ಕೊರಚ, ಲಂಬಾಣಿ, ಭೋವಿ, ದೊಂಬರು, ಸಿಳ್ಳೆ ಕ್ಯಾತ ಮುಂತಾದ ಸಮುದಾಯಗಳ ಸ್ಥಿತಿಗತಿ ಅವಲೋಕಿಸದೆ ವರದಿ ಅನುಷ್ಠಾನಗೊಳಿಸುವುದು ಸರಿಯಲ್ಲ. ಈವರೆಗೆ ಒಂದೇ ತಾಯಿ ಮಕ್ಕಳಂತಿದ್ದ ನಮ್ಮನ್ನು ಹೊರ-ಒಳ ಮೀಸಲಾತಿ ಎಂದು ಒಕ್ಕಲೆಬ್ಬಿಸುವ ಹುನ್ನಾರ ನಿಲ್ಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ, ವರದಿ ಜಾರಿ ವಿಚಾರ ಕೈಬಿಟ್ಟು ಆ ಸಮುದಾಯಗಳಿಗೆ ಹೆಚ್ಚುವರಿ ಅನುದಾನ ನೀಡುವ ಮೂಲಕ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

    ಭೋವಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಬಸವರಾಜ ವಣಿಗೇರಿ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ಬಿಟ್ಟು ಕೊರಮ, ಕೊರಚ, ಭೋವಿ, ಲಂಬಾಣಿ ಸಮುದಾಯಗಳಿಗೆ ನ್ಯಾಯ ಕೊಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

    ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಯಿತು. ಇದಕ್ಕೂ ಮೊದಲು ಪಟ್ಟಣದ ಕಲ್ಮಠದಿಂದ ವಾಲ್ಮೀಕಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಪ್ರಮುಖರಾದ ಸತ್ಯಪ್ಪ ಭೋವಿ, ಚಿದಾನಂದಪ್ಪ ಕೊರವರ, ಮರಿಸ್ವಾಮಿ ಭಜಂತ್ರಿ, ಭೋಜಪ್ಪ ವಡ್ಡರ, ಲಿಂಗಪ್ಪ, ರಾಮಣ್ಣ, ವೆಂಕಟೇಶ ಭೋವಿ, ಲಕ್ಷ್ಮಣ ಭೋವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts