More

    ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿತ

    ಕನಕಗಿರಿ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ನೀರಿನ ಅಭಾವ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯಾಗದಿದ್ದರೆ ನೀರಿಗಾಗಿ ಜನ ಪರದಾಡಬೇಕಾದ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡಬೇಕಿಲ್ಲ.

    ಪಟ್ಟಣದಲ್ಲಿನ 17 ವಾರ್ಡ್‌ಗಳಿಗೆ 32 ಬೋರ್‌ವೆಲ್ ಹಾಗೂ ಲಕ್ಷ್ಮೀದೇವಿ ಕೆರೆಯಿಂದ ಇಸ್ರೇಲ್ ಮಾದರಿ ಯೋಜನೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ದೊಡ್ಡ ಪ್ರಮಾಣದ ಬರಗಾಲ ಬಂದರೂ ಒಂದೆರಡು ವಾರ್ಡ್‌ಗಳಿಲ್ಲಿ ಮಾತ್ರ ನೀರಿನ ಅಭಾವ ಸೃಷ್ಟಿಯಾಗುತ್ತಿತ್ತು. ಆದರೆ ಈಗ 4 ಹಾಗೂ 5ನೇ ವಾರ್ಡ್ ಸೇರಿ ವಿವಿಧ ವಾರ್ಡ್‌ಗಳಿಗೆ ನೀರು ಸರಬರಾಜಾಗುತ್ತಿದ್ದ ಬೋರ್‌ವೆಲ್‌ನಲ್ಲಿ ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಉಂಟಾಗಿದೆ. ಪಪಂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹಾಸ್ಟೆಲ್‌ಗಳಿಗೂ ಟ್ಯಾಂಕರ್ ನೀರೆ ಗತಿಯಾಗಿದೆ.

    ಕೆರೆಯು ಡೆಡ್ ಸ್ಟೋರೆಜ್‌ಗೆ ತಲುಪಿದೆ. ಹೀಗಾಗಿ ಕೆರೆಯಿಂದ ಇಸ್ರೇಲ್ ಮಾದರಿ ಯೋಜನೆಯಡಿ ಪಟ್ಟಣಕ್ಕೆ ಸರಬರಾಜಾಗುತ್ತಿದ್ದ ಮೋಟಾರ್‌ಗಳನ್ನು ಕಳೆದ ನಾಲ್ಕೈದು ದಿನಗಳಿಂದ ಬಂದ್ ಮಾಡಲಾಗಿದೆ. ಮಳೆ ಅಭಾವದಿಂದ ಅಂತರ್ಜಲ ಕುಸಿತದಿಂದ 6 ಬೋರ್‌ವೆಲ್‌ಗಳು ಬತ್ತಿದ್ದು, ಈ ಪೈಕಿ 3 ಬೋರ್‌ವೆಲ್‌ಗಳನ್ನು ಪಪಂ ರೀ ಬೋರ್ ಮಾಡಿಸಿ ಹೆಚ್ಚಿನ ಪೈಪ್‌ಗಳನ್ನು ಆಳಕ್ಕೆ ಇಳಿಸಿದೆ. ಮಳೆಯಾಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಜೀವ ಜಲಕ್ಕಾಗಿ ಸಂಕಷ್ಟವಾಗಲಿದೆ ಎನ್ನುವ ಆತಂಕ ಪಪಂ ಸಿಬ್ಬಂದಿಗೆ ಶುರುವಾಗಿದೆ.

    ಪಟ್ಟಣ ಪಂಚಾಯಿತಿ ಆಯ್ದ ನಾಲ್ಕು ಕಡೆಗಳಲ್ಲಿ ಬೋರ್‌ವೆಲ್ ಕೊರೆಯಿಸಿದೆ. ಅದರಲ್ಲಿ 14,15,1ನೇ ವಾರ್ಡ್‌ನಲ್ಲಿ ನೀರು ದೊರೆತಿದ್ದರಿಂದ ಪಂಚಾಯಿತಿಗೆ ಸಮಾಧಾನ ತಂದಿದೆ. ನಲ್ಲಿಗಳಲ್ಲಿ ನೀರು ಬರದಿದ್ದರೆ ಸಾರ್ವಜನಿಕರು ತಮ್ಮ ವಾರ್ಡಿನ ಸದಸ್ಯರಿಗೆ ಸಮಸ್ಯೆ ಪರಿಹರಿಸುವಂತೆ ಕರೆ ಮಾಡುತ್ತಿದ್ದಾರೆ. ಈ ಸಮಸ್ಯೆ ಹೊತ್ತು ಪಪಂ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಬಳಿ ಬಂದರೆ ಬೋರ್‌ವೆಲ್‌ಗಳು ಬತ್ತಿವೆ, ನೀರು ಕಡಿಮೆಯಾಗಿವೆ, ಸರಿಪಡಿಸುತ್ತೇವೆ ಎನ್ನುವ ಉತ್ತರವೇ ಸಿಗುತ್ತಿದೆ ಇದರಿಂದ ಸದಸ್ಯರು ಉಭಯ ಸಂಕಟದಲ್ಲಿ ಒದ್ದಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts