More

    ಹುಲಿಹೈದರ್ ಗ್ರಾಮದಲ್ಲಿ ಅಧಿಕಾರಿಗಳ ಸೌಹಾರ್ದಯುತ ನಡಿಗೆ; ಪ್ರಮುಖ ಬೀದಿಗಳಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳ ಸಂಚಾರ

    ಕನಕಗಿರಿ: ಹುಲಿಹೈದರ್ ಗ್ರಾಮವನ್ನು ಸಹಜಸ್ಥಿತಿಗೆ ತರಲು ಜಿಲ್ಲಾಧಿಕಾರಿ ಆದೇಶದಂತೆ ಶುಕ್ರವಾರ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೌಹಾರ್ದಯುತ ನಡಿಗೆ ನಡೆಸಲಾಯಿತು.

    ಗ್ರಾಮದಲ್ಲಿ ಆ.11ರಂದು ನಡೆದ ಗುಂಪು ಘುರ್ಷಣೆಯಿಂದ ಆ.25ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿತ್ತು. ಘಟನೆ ಬಳಿಕ ಕೆಲವರು ಗ್ರಾಮ ತೊರೆದಿದ್ದರು. ಇದರಿಂದ ಮನೆಯಲ್ಲಿರುವ ಮಹಿಳೆಯರು, ವೃದ್ಧರು, ಮಕ್ಕಳು ಕಷ್ಟಪಡುವಂತಾಗಿತ್ತು. ಈ ನಡುವೆ ಶಾಸಕ ಬಸವರಾಜ ದಢೇಸುಗೂರು, ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ, ಧೈರ್ಯ ತುಂಬಿ ಘಟನೆಯಲ್ಲಿ ಪಾಲ್ಗೊಳ್ಳದವರು ಗ್ರಾಮಕ್ಕೆ ಮರಳಲು ತಿಳಿಸುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದರು. ಅಲ್ಲದೆ, ಜಿಲ್ಲಾಧಿಕಾರಿ ಸುಂದರೇಶ್ ಬಾಬು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಗ್ರಾಮ ಯಥಾಸ್ಥಿತಿಗೆ ಬರಲು ವಿವಿಧ ಕಾರ್ಯಕ್ರಮ ಕೈಗೊಂಡು ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಅಧಿಕಾರಿ ವರ್ಗಕ್ಕೆ ಸೂಚಿಸಿದ್ದರು. ಹೀಗಾಗಿ ಶುಕ್ರವಾರ ತಾಪಂ ಇಒ ಚಂದ್ರಶೇಖರ ಕಂದಕೂರು, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಗ್ಯಾನನಗೌಡ ಹಾಗೂ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೌಹಾರ್ದಯುತ ನಡಿಗೆ ಕೈಗೊಳ್ಳಲಾಗಿತ್ತು. ವಿದ್ಯಾರ್ಥಿಗಳು ಪಾಲ್ಗೊಂಡು ಶಾಂತಿ ಮಂತ್ರ ಜಪಿಸಿದರು. ಅಸ್ಪಶ್ಯತೆ ನಿವಾರಣೆ ಕುರಿತು ಪ್ರಮಾಣ ವಚನ ಬೋಧಿಸಲಾಯಿತು.

    ತಾಪಂ ಇಒ ಚಂದ್ರಶೇಖರ ಮಾತನಾಡಿ, ಅಮಾಯಕರು ಗ್ರಾಮ ಸೇರಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರನ್ನು ಪ್ರೆರೇಪಿಸಬೇಕು. ಯಾವುದೇ ಕಾರಣಕ್ಕೂ ಆತಂಕಪಡಬಾರದು ಎಂದು ತಿಳಿಸಿದರು. ಪಿಎಸ್‌ಐ ಮಾನಪ್ಪ ನಾಯಕ, ಶಿಕ್ಷಣ ಸಂಯೋಜಕ ಡಿ.ಆಂಜನೇಯ, ಸಿಆರ್‌ಪಿ ಶಿವಪ್ಪ ಹೆಳವರ, ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts