More

    ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಅಪಾಯಕಾರಿ

    ಕನಕಗಿರಿ: ಕಾಂಗ್ರೆಸ್ ಅಧಿಕಾರದ ಆಸೆಗೆ ಘೋಷಣೆ ಮಾಡುತ್ತಿರುವ ಗ್ಯಾರಂಟಿ ಯೋಜನೆಗಳು ಸುಭದ್ರವಾಗಿರುವ ರಾಜ್ಯ ಹಾಗೂ ದೇಶವನ್ನು ದಿವಾಳಿಗೆ ತಲುಪಿಸುವಂತಿವೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

    ಪಟ್ಟಣದ ಬಿಜೆಪಿ ಕಚೇರಿ ಬಳಿ ಪಕ್ಷದ ಜಿಲ್ಲಾಮಟ್ಟದ ರೈತ ಹಾಗೂ ಒಬಿಸಿ ಮೋರ್ಚಾ ಸಮಾವೇಶವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಪಾಕಿಸ್ತಾನ ಈಗಾಗಲೇ ದಿವಾಳಿ ಆಗಿದ್ದು, ಅಲ್ಲಿನ ಜನರು ಜೀವನ ಸಾಗಿಸುವುದು ಕಷ್ಟವಾಗಿದೆ. ಅಲ್ಲಿನ ನಾಗರಿಕರು ಭಾರತದ ಪಿಎಂ ನರೇಂದ್ರ ಮೋದಿ ನಮಗೂ ಪ್ರಧಾನಿಯಾಗಲಿ ಎಂದು ಬಯಸುತ್ತಿದ್ದಾರೆ. ದೇಶದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್, ಹೇಗಾದರೂ ಮಾಡಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಬೇಕು ಎನ್ನುವ ನಿಟ್ಟಿನಲ್ಲಿ ಉಚಿತ ಯೋಜನೆಗಳನ್ನು ನೀಡುವ ಭರವಸೆ ನೀಡುತ್ತಿದ್ದಾರೆ. ಇವು ರಾಜ್ಯ ಮತ್ತು ದೇಶಕ್ಕೆ ಅಪಾಯ ತರಲಿವೆ. ಡಬಲ್ ಇಂಜಿನ್ ಬಿಜೆಪಿ ಸರ್ಕಾರ, ರೈತ ಪರ ಯೋಜನೆ ಜಾರಿಗೊಳಿಸಿವೆ. ಯಡಿಯೂರಪ್ಪ ಅವಧಿಯಲ್ಲಿ ರೈತರಿಗೆ ಬಡ್ಡಿ ಇಲ್ಲದೆ 3 ಲಕ್ಷ ರೂ. ಸಾಲ ನೀಡಲಾಗಿತ್ತು. ಇದೀಗ ಬಸವರಾಜ ಬೊಮ್ಮಾಯಿ ಸರ್ಕಾರ 5 ಲಕ್ಷ ರೂ. ಬಡ್ಡಿ ರಹಿತ ಸಾಲ ಘೋಷಿಸಿದೆ ಎಂದರು.

    ಮಾಜಿ ಸಿಎಂ ಸಿದ್ದರಾಮಯ್ಯಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ. ಈ ಮೊದಲು ಕೋಲಾರ, ವರುಣಾ, ಬಾದಾಮಿ ಎನ್ನುತ್ತಿದ್ದು, ಎಲ್ಲಿ ಸ್ಪರ್ಧಿಸುತ್ತಾರೋ ನೋಡಬೇಕಿದೆ ಎಂದು ತಿಳಿಸಿದರು.

    ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಮನೆ, ಮನೆಗೂ ಕಾಂಗ್ರೆಸ್‌ನವರು ನೀಡುತ್ತಿರುವ ಗ್ಯಾರಂಟಿ ಕಾರ್ಡ್ ಸುಳ್ಳಿನ ಚೀಟಿ. ಬಿಜೆಪಿ ಸರ್ಕಾರ ಕೃಷಿ, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದೆ. ಸರ್ಕಾರ ಸಮನಾಂತರ ಜಲಾಶಯ, ತೋಟಗಾರಿಕೆ ಪಾರ್ಕ್ ಯೋಜನೆಗೆ ಅಸ್ತು ಎಂದಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಇದಕ್ಕೂ ಮೊದಲು ಎತ್ತಿನ ಬಂಡಿಯಲ್ಲಿ ವೇದಿಕೆವರೆಗೆ ಮೆರವಣಿಗೆ ನಡೆಸಲಾಯಿತು. ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶೋಭಾ ಮಾಣಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲಂಕೇಶ್ ಗುಳದಾಳ ಮಾತನಾಡಿದರು. ಮಾಜಿ ಶಾಸಕ ಜಿ. ವೀರಪ್ಪ ಕೇಸರಹಟ್ಟಿ, ಪ್ರಮುಖರಾದ ಈಶಪ್ಪ ಹಿರೇಮನಿ, ವೀರೇಶ ಸಾಲೋಣಿ, ಡಾ.ಡಿ.ಎಂ.ಅರವಟಗಿಮಠ, ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ರಾಜಾ ಶರಶ್ಚಂದ್ರ ನಾಯಕ ಇತರರಿದ್ದರು.

    ಕುರ್ಚಿಗಳು ಖಾಲಿ ಖಾಲಿ: ಬಿಜೆಪಿ ಜಿಲ್ಲಾ ಮಟ್ಟದ ಒಬಿಸಿ, ರೈತ ಮೋರ್ಚಾ ಸಮಾವೇಶದಲ್ಲಿ ಜನರಿಲ್ಲದೆ ಕುರ್ಚಿಗಳು ಖಾಲಿ ಖಾಲಿಯಾಗಿದ್ದವು. ಕಾರ್ಯಕ್ರಮ ತಡವಾಗಿ ಆರಂಭವಾಗಿದ್ದರಿಂದ ಜನ ಕಾರ್ಯಕ್ರಮಕ್ಕೆ ಬರಲು ಹಿಂದೇಟು ಹಾಕಿದರು ಎನ್ನುವ ಮಾತುಗಳ ನಡುವೆ ಆರಂಭಿಕ ಮುಖಂಡರ ಭಾಷಣದ ವೇಳೆಗೆ ಪಾಲ್ಗೊಂಡದ್ದವರಲ್ಲಿ ಕೆಲವರು ಊಟ ಮುಗಿಸಿಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಿರುವುದು ಕಂಡುಬಂತು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts