More

    ಆಂಬುಲೆನ್ಸ್‌ಗೆ ಬೇಕಿದೆ ತುರ್ತು ಚಿಕಿತ್ಸೆ

    ಕನಕಗಿರಿ: ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವಾಗಬೇಕಾದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಆಂಬುಲೆನ್ಸ್ ರಿಪೇರಿ ಕಂಡರೂ ತಕ್ಷಣಕ್ಕೆ ಚಾಲು ಆಗುತ್ತಿಲ್ಲ. ಹೀಗಾಗಿ ಆಸ್ಪತ್ರೆ ಸಿಬ್ಬಂದಿ ಇಲ್ಲವೆ ಜನರೇ ತಳ್ಳಬೇಕಾದ ಸ್ಥಿತಿ ಇದೆ.

    ಪಟ್ಟಣದ 30 ಹಾಸಿಗೆಗಳ ಆಸ್ಪತ್ರೆ ಇದೀಗ ಸುಧಾರಣೆ ಕಾಣುತ್ತಿದೆ. ವೈದ್ಯಾಧಿಕಾರಿ ನೇಮಕವಾಗಿದ್ದು, ನಿಯೋಜನೆ ಮೇಲೆ ಕೆಲ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ದೊರೆಯುತ್ತಿದೆ. ಆಸ್ಪತ್ರೆ ವ್ಯಾಪ್ತಿಯಲ್ಲಿ ಅಪಘಾತಗಳು ಸಂಭವಿಸಿ ಗಾಯಗೊಂಡವರಿಗೆ, ಕಷ್ಟಕರ ಹೆರಿಗೆ, ತೀವ್ರ ಸ್ವರೂಪದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೆಚ್ಚಿನ ಸೌಲಭ್ಯವಿರುವ ಆಸ್ಪತ್ರೆಗಳಿಗೆ ಸಾಗಿಸಲು ಆಂಬುಲೆನ್ಸ್ ಬೇಕು. ಆದರೆ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿರುವ ಆಂಬುಲೆನ್ಸ್ ತಳ್ಳಿದರೆ ಮಾತ್ರ ಚಾಲು ಆಗುತ್ತಿದೆ. ಅದೂ ಒಮ್ಮೊಮ್ಮೆ ಆಗಲ್ಲ. ದಾರಿಮಧ್ಯೆ ಕೈಕೊಟ್ಟರೆ ಏನು ಗತಿ ಎಂಬ ಭಯ ರೋಗಿಗಳು, ಸಂಬಂಧಿಕರನ್ನು ಕಾಡುತ್ತಿದೆ. ಆಂಬುಲೆನ್ಸ್ ಹಳೆಯದಾಗಿದ್ದು, ಎಷ್ಟೇ ಸಲ ರಿಪೇರಿ ಮಾಡಿಸಿದರೂ ಅಷ್ಟೇ ಎನ್ನುವಂತಿದೆ. ಇದರಿಂದ ತುರ್ತಾಗಿ ಆಂಬುಲೆನ್ಸ್ ಬೇಕೆಂದು 108 ಸಂಖ್ಯೆಗೆ ಕರೆ ಮಾಡಿದರೆ, ಅದು ಬರುವವರೆಗೆ ಜೀವ ಕೈಯಲ್ಲಿ ಹಿಡಿದು ಕಾಯಬೇಕಾಗಿದೆ.

    ಆಸ್ಪತ್ರೆಯಲ್ಲಿ ವಿಶೇಷ ವೈದ್ಯರು ಇಲ್ಲವಾದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿಗೆ ತೆರಳಬೇಕು. ಇಲ್ಲಿನ ಹಳೆಯ ಆಂಬುಲೆನ್ಸ್ ಬದಲಿಸಿ ಇಲಾಖೆ ಸುಸಜ್ಜಿತ ಹೊಸ ವಾಹನವನ್ನು ನೀಡಲು ಮುಂದಾಗುತ್ತಿಲ್ಲ ಎಂಬ ಆರೋಪವಿದೆ. ಇದರಿಂದ ಖಾಸಗಿ ವಾಹನಗಳನ್ನು ಬಳಸಬೇಕಾಗಿದ್ದು, ಬಡವರಿಗೆ ಕಷ್ಟಸಾಧ್ಯವಾಗಿದೆ.

    ನಿಂತಲ್ಲೇ ನಿಂತಿದ್ದಕ್ಕೆ ಆರಂಭವಾಗಲಿಲ್ವ?
    ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಉದ್ಯೋಗ ಭದ್ರತೆ, ವೇನತ ಹೆಚ್ಚಳ ಇತರ ಬೇಡಿಕೆ ಈಡೇರಿಕೆಗಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ವಾಹನ ಸಂಚರಿಸದೆ ನಿಂತಲ್ಲೇ ನಿಂತಿತ್ತು. ಇದೀಗ ಚಾಲಕರು ಬಂದಿದ್ದು, ಚಾಲನೆ ಮಾಡಲು ಹೋದಾಗ ಸ್ಟಾರ್ಟ್ ಆಗುತ್ತಿಲ್ಲ. ಗಾಡಿ ತಳ್ಳಿದರೂ ಚಾಲು ಆಗಲಿಲ್ಲ. ವಾಹನ ದುರಸ್ತಿ ಸಾಮಾನ್ಯವಾಗಿದ್ದು ಆಗಾಗ ರಿಪೇರಿ ಮಾಡಿಸುತ್ತಿದ್ದೇವೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದರು.

    ಆಂಬುಲೆನ್ಸ್ ದುರಸ್ತಿಗೆ ಇಂತಿಷ್ಟು ಎಂದು ಅನುದಾನ ನಿಗದಿಯಾಗಿರುತ್ತದೆ. ಆದರೆ, ಈಗಾಗಲೇ ರಿಪೇರಿ ಮಾಡಿಸಲು ಅಷ್ಟೂ ಹಣ ಖರ್ಚಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು, ವಾಹನವನ್ನು ಕೊಪ್ಪಳಕ್ಕೆ ಕಳಿಸಲಾಗುವುದು. ಹೊಸ ಆಂಬುಲೆನ್ಸ್ ನೀಡುವಂತೆ ಕೋರಲಾಗುವುದು.
    | ಡಾ.ಸತೀಶ್ ಕುಮಾರ್, ವೈದ್ಯಾಧಿಕಾರಿ, ಸಿಎಚ್‌ಸಿ, ಕನಕಗಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts