More

    ಅತ್ಯಾಚಾರ, ಹತ್ಯೆ ಆರೋಪಿಗಳಿಗೆ ಶಿಕ್ಷೆಯಾಗಲಿ

    ಕಂಪ್ಲಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದವರ ಬಂಧನಕ್ಕೆ ಆಗ್ರಹಿಸಿ ತಾಲೂಕು ವೀರಶೈವ ಸಂಘ, ಸಮಸ್ತ ಕಂಪ್ಲಿ ತಾಲೂಕು ವೀರಶೈವ ಲಿಂಗಾಯತ ಸಮಾಜ, ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೌಸಿಯಾಬೇಗಂಗೆ ಬುಧವಾರ ಮನವಿ ಸಲ್ಲಿಸಿದರು.

    ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಗಂಗಾವತಿಯ ವೀರಶೈವ ಲಿಂಗಾಯತ ಸಮುದಾಯದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದಿದ್ದಾರೆ. ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಜಾಮೀನು ಮೇಲೆ ಬಿಡುಗಡೆಗೊಳಿಸಬಾರದು. ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅತ್ಯಾಚಾರಕ್ಕೊಳಗಿ ಹತ್ಯೆಗೀಡಾದ ಅಪ್ರಾಪ್ತೆ ಕುಟುಂಬಕ್ಕೆ ಸರ್ಕಾರ 25ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

    ಅಖಿಲ ಕರ್ನಾಟಕ ಬೇಡಜಂಗಮ ಸಮಾಜದ ಅಧ್ಯಕ್ಷ ಎನ್.ಎಂ.ಪತ್ರಯ್ಯಸ್ವಾಮಿ, ಕಾರ್ಯದರ್ಶಿ ಟಿ.ಎಚ್.ಎಂ.ರಾಜಕುಮಾರ್ ಮಾತನಾಡಿ, ಅಪ್ರಾಪ್ತ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಮಹಿಳಾ ಆಯೋಗ, ಮಹಿಳಾ ಸಂಘಟನೆಗಳು ಸದರಿ ಕೇಸ್‌ಗೆ ಹೆಚ್ಚಿನ ಒತ್ತು ನೀಡದೆ ಉದಾಸೀನತೆ ತೋರಿವೆ ಎಂದು ಆರೋಪಿಸಿದರು. ಅತ್ಯಾಚಾರ, ಹತ್ಯೆ ಮಾಡಿದ ಆರೋಪಿಗಳ ಪರ ವಕೀಲರು ವಾದಿಸಬಾರದು. ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ಮನವಿ ಸಲ್ಲಿಕೆ ವೇಳೆ ವೀರಶೈವ ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳಾದ ಮರಿಶೆಟ್ರು ವಿಜಯಲಕ್ಷ್ಮೀ, ಬಿ.ಪಾರ್ವತಮ್ಮ, ಬಿ.ಎಂ.ಪುಷ್ಪಾ, ರೂಪಾ ಪಾಟೀಲ್, ನೀರಜಾ, ಮಾಂತಮ್ಮ, ಎಚ್.ನಾಗರಾಜ, ಎಸ್.ಎಂ.ನಾಗರಾಜ, ವಾಲಿ ಕೊಟ್ರಪ್ಪ, ಅಳ್ಳಳ್ಳಿ ವೀರೇಶ್, ಜಿ.ಚಂದ್ರಶೇಖರಗೌಡ, ಕೆ.ಎಂ.ವಾಗೀಶ್, ಎಸ್.ಎಸ್.ಎಂ.ಚನ್ನಬಸವರಾಜಸ್ವಾಮಿ, ಕರಿಬಸವರಾಜ ನೆಲ್ಲೂಡಿ, ಎಚ್.ಗಂಗಾಧರ, ಎಸ್.ಡಿ. ಬಸವರಾಜ, ಜಿ.ಶೇಖರ, ಕಲ್ಯಾಣಿ ಚೌಕಿಮಠದ ಬಸವರಾಜಶಾಸ್ತ್ರಿ, ಘನಮಠದಯ್ಯ ಹಿರೇಮಠ, ಆನಂದರೆಡ್ಡಿ, ಬಳೆ ಮಲ್ಲಿಕಾರ್ಜುನ ಇತರರಿದ್ದರು. ಇದಕ್ಕೂ ಮುನ್ನ ಎಪಿಎಂಸಿ ದ್ವಾರದಿಂದ ತಹಸಿಲ್ ಕಚೇರಿತನಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts