More

    ಕೋಣಗಳಿಗೆ ಸೌಕರ್ಯ, ಮಾಲೀಕರ ಶ್ಲಾಘನೆ

    ಬೆಂಗಳೂರು: ಬೆಂಗಳೂರು ಕಂಬಳದಲ್ಲಿ ಭಾಗಿಯಾಗಿರುವ ಕೋಣ ಜೋಡಿಗಳಿಗೆ ಉತ್ತಮ ಸೌಕರ್ಯ ಒದಗಿಸಿರುವ ಆಯೋಜಕರ ಕಾರ್ಯ ಶ್ಲಾಘನೆಗೆ ಒಳಗಾಗಿದೆ.

    ಕರಾವಳಿ ಭಾಗದಿಂದ ಬೆಂಗಳೂರಿಗೆ ಕೋಣಗಳನ್ನು ಕರೆತರುವುದು ಸಾಹಸದ ಕೆಲಸ. ಇದರಲ್ಲಿ ಯಶಸ್ವಿಯಾದರೂ, ಕೋಣಗಳು ಬೆಂಗಳೂರಿನ ವಾತಾವರಣಕ್ಕೆ ಹೊಂದಿಕೊಳ್ಳಬಹುದೇ ಎಂಬ ಪ್ರಶ್ನೆ ಎದ್ದಿತು. ಈ ಅಂಶವೂ ಸೇರಿದಂತೆ ಕೋಣಗಳು, ಅವುಗಳ ಆರೈಕೆ ತಂಡದ ಸದಸ್ಯರು ಹಾಗೂ ಓಟಗಾರರಿಗೆ ಸಕಲ ಸೌಕರ್ಯವನ್ನು ಕಲ್ಪಿಸಲಾಗಿದೆ. ಸಂಘಟಕರು ನೀಡಿದ್ದ ಭರವಸೆಯಂತೆ ನಡೆದುಕೊಂಡಿದ್ದಾರೆ ಎಂದು ಹಲವು ಮಂದಿ ಕೋಣಗಳ ಮಾಲೀಕರು ಪ್ರತಿಕ್ರಿಯಿಸಿದರು.

    ಪ್ರತೀ ಕೋಣಗಳ ಜೋಡಿಗೆ ಪ್ರತ್ಯೇಕ ಜಾಗವನ್ನು ಮೀಸಲಿಡಲಾಗಿದೆ. ಇಲ್ಲಿ ಟೆಂಟ್ ಮಾದರಿಯಲ್ಲಿ ಕೋಣಗಳಿಗೆ ವಿಶ್ರಾಂತಿ ಪಡೆಯುವ ಜತೆಗೆ ಅವುಗಳಿಗೆ ಆಹಾರ ಒದಗಿಸುವುದು, ಮೇವು, ನೀರು, ನೆಲಹಾಸು (ಮ್ಯಾಟ್) ಒದಗಿಸಲಾಗಿದೆ. ಪಶುವೈದರಿಂದ ತಪಾಸಣೆಗೂ ಪಶು ತಜ್ಞರು ಹಾಗೂ ಪಶುವೈದ್ಯರು, ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಂ ಹೂಡಿ ಸೇವೆಯನ್ನು ಒದಗಿಸಿದರು.

    ಸ್ವಂತ ಊರುಗಳಿಂದಲೇ ನೀರು:

    ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳಿಗೆ ನೀರು ಯಥೇಚ್ಛವಾಗಿ ಬೇಕು. ಬೆಳಗ್ಗೆಯಿಂದ ರಾತ್ರಿವರೆಗೆ ಹಲವು ಬಾರಿ ಕೋಣಗಳಿಗೆ ಆಹಾರದ ಜತೆ ನೀರನ್ನು ಕುಡಿಸಲಾಗುತ್ತದೆ. ಜತೆಗೆ ಮಸಾಜ್ ಮಾಡುವ ಮುನ್ನ ಕೋಣಗಳಿಗೆ ಸ್ನಾನ ಮಾಡಿಸುವುದು ರೂಢಿ. ಹೀಗಾಗಿ ಬಹುತೇಕ ಕೋಣಗಳ ಯಜಮಾನರು ತಮ್ಮೂರಿನಿಂದಲೇ ಸಣ್ಣ ಟ್ಯಾಂಕರ್‌ಗಳಲ್ಲೇ ನೀರನ್ನು ತಂದಿದ್ದಾರೆ. ಇದೇ ನೀರನ್ನು ಕೋಣಗಳ ಆರೈಕೆಗೆ ಬಳಸಲಾಗುತ್ತಿದೆ. ಆಹಾರ ಹಾಗೂ ವಾತಾವರಣದಿಂದ ಸಮಸ್ಯೆಯಾಗದಿರಲು ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಕಾರ್ಕಳದ ಬೇಲಾಡಿ ಭಾವ ಅಶೋಕ್ ಶೆಟ್ಟಿ ಪ್ರತಿಕ್ರಿಯಿಸಿದರು.

    ಪ್ರತೀ ಕೋಣ ಜೋಡಿಗಳ ಜತೆ ತಲಾ 10ರಿಂದ 15 ಮಂದಿ ಸಹಾಯಕರು ಆಗಮಿಸಿದ್ದಾರೆ. ಇವರಲ್ಲಿ ಓಟಗಾರರು, ಕೋಣಗಳಿಗೆ ಮಸಾಜ್ ಮಾಡುವವರು ಸೇರಿದ್ದಾರೆ. ಈ ಕಾರ್ಯದಲ್ಲಿ 2 ಸಾವಿರ ಮಂದಿ ತೊಡಗಿಸಿಕೊಂಡಿದ್ದು, ಅಷ್ಟೂ ಜನರಿಗೂ ವಸತಿ, ಆಹಾರ ಸೌಲಭ್ಯವನ್ನು ಆಯೋಜಕರು ಅಚ್ಚುಕಟ್ಟು ಮಾಡಿಕೊಡಲಾಗಿದೆ.

    ಬೆಂಗಳೂರು ಕಂಬಳಕ್ಕೆ ತಂದಿರುವ ನಮ್ಮ ಕೋಣಗಳಿಗೆ ಅಗತ್ಯ ವ್ಯವಸ್ಥೆ ಆಯೋಜಕರಿಂದ ದೊರೆತಿದೆ. ನಾವು ನಿರೀಕ್ಷೆ ಮಾಡಿದ್ದಂತೆ ಸೌಕರ್ಯ ಸಿಕ್ಕಿದೆ. ಹವಾಮಾನವೂ ಕಂಬಳ ನಡೆಸಲು ಪೂರಕವಾಗಿದೆ. ಮುಂಜಾಗ್ರತೆಯಿಂದಾಗಿ ನಮ್ಮ ಕೋಣಗಳಿಗೆ ಊರಿನಿಂದ ತಂದಿರುವ ಬಾವಿ ನೀರನ್ನೇ ಬಳಸುತ್ತಿದ್ದೇವೆ. ಕಂಬಳದ ಓಟಗಾರರು, ಕೋಣ ಸಹಾಯಕರಿಗೆ ಯಾವುದೇ ತೊಂದರೆ ಆಗಿಲ್ಲ.
    – ಬೇಲಾಡಿ ಭಾವ ಅಶೋಕ್ ಶೆಟ್ಟಿ, ಕಾರ್ಕಳ

    ಕಂಬಳ ತುಳುನಾಡಿನ ಅಸ್ಮಿತೆಯ ಪ್ರತೀಕ. ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಬಳಕೆಯಾಗುವ ಕೋಣಗಳನ್ನು ಮನೆಯ ಮಕ್ಕಳಂತೆ ಕಾಪಿಟ್ಟುಕೊಳ್ಳಲಾಗುತ್ತದೆ. ಕೋಣ ಓಡಿಸುವ ಓಟಗಾರರಿಗೆ ಹೆಚ್ಚಿನ ಗೌರವ ಇದೆ. ಲಕ್ಷಗಟ್ಟಲೇ ಹಣ ಖರ್ಚು ಮಾಡಿದರೂ ಕರಾವಳಿ ಸಂಸ್ಕೃತಿ ಉಳಿಸಲು ಊರಿನವರೆಲ್ಲರೂ ಒಟ್ಟಾಗಿ ಕೈಜೋಡಿಸುತ್ತೇವೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ ನಡೆದಿದ್ದು ನಮಗೆ ಭಾರೀ ಸಂತೋಷ ತಂದಿದೆ.
    – ಚಿತ್ರರಂಜನ್ ಭಂಡಾರಿ, ಐಕಳ, ದಕ್ಷಿಣಕನ್ನಡ (ಕಾಂತಬಾರೆ-ಬೂದಾಬಾತಿ ಕಂಬಳ ಸಮಿತಿಯ ಮುಖ್ಯಸ್ಥ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts