More

    ಕೊನೆಯ ಕಂಬಳಕ್ಕೆ ಬಂಗಾಡಿ ರೆಡಿ

    ಮಂಗಳೂರು: ಒಂದೆಡೆ ಇತಿಹಾಸ ಪ್ರಸಿದ್ಧ ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ.. ಇನ್ನೊಂದೆಡೆ ಇತಿಹಾಸ ಪ್ರಸಿದ್ಧ ಕಾಜೂರು ಹಯಾರುಲ್ ಜಾಲಿಯಾ ದರ್ಗಾ ಶರೀಫ್.. ಇದರ ನಡುವೆ ಪ್ರಶಾಂತವಾಗಿ ಹರಿಯುವ ನೇತ್ರಾವತಿ ನದಿ. ಇದರ ವಿಶಾಲ ಕಿನಾರೆಯಲ್ಲಿ ನಡೆಯುವ ಈ ಋತುವಿನ ಕೊನೆಯ ಕಂಬಳಕ್ಕೆ ತುಳುನಾಡು ಸಾಕ್ಷಿಯಾಗಲಿದೆ.
    ಪ್ರಸಕ್ತ ಸಾಲಿನ ಕೊನೆಯ ಕಂಬಳ ಬಂಗಾಡಿ ಕೊಲ್ಲಿ 23ನೇ ವರ್ಷದ ಹೊನಲು ಬೆಳಕಿನ ಸೂರ್ಯ- ಚಂದ್ರ ಜೋಡುಕರೆ ಕಂಬಳ ಮಾರ್ಚ್ 7 ಮತ್ತು 8ರಂದು ನಡೆಯಲಿದೆ. ಪ್ರತಿವರ್ಷ ಕೋಣಗಳ ಮಾಲೀಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದ್ದು, 130ಕ್ಕೂ ಅಧಿಕ ಜೋಡಿ ಕೋಣಗಳು ಭಾಗವಹಿಸುತ್ತವೆ. ಈ ಬಾರಿ ಕಂಬಳಕ್ಕೆ ವಿಶೇಷ ಮನ್ನಣೆ ದೊರೆತಿರುವುದರಿಂದ ಹೆಚ್ಚು ಕೋಣಗಳು ಹಾಗೂ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ.

    ಮತ್ತೆ ಸುಂದರವಾದ ಕರೆ: ಕಳೆದ ಮಳೆಗಾಲದಲ್ಲಿ ಪಶ್ಚಿಮಘಟ್ಟದ ಬೆಟ್ಟಗಳಲ್ಲಿ ಜಲಸ್ಫೋಟದಿಂದ ನೇತ್ರಾವತಿ ಸಹಿತ ಹಲವು ನದಿಗಳಲ್ಲಿ ಬೃಹತ್ ದಿಮ್ಮಿಗಳು, ಬಂಡೆ ಕಲ್ಲುಗಳು, ಮಣ್ಣು ಮರಳು ಸಮೇತ ಕೊಚ್ಚಿಕೊಂಡು ಬಂದು ಹರಿದು ಊರಿಗೆ ಊರೇ ಬಯಲಿನಂತಾಗಿತ್ತು. ಇದರ ಪರಿಣಾಮ ನದಿತಟದ ಬಂಗಾಡಿ ಕಂಬಳ ಕರೆಯ ಮೇಲೂ ಆಗಿತ್ತು. ಎಲ್ಲವನ್ನೂ ತೆರವುಗೊಳಿಸಿ, ಹಾನಿಗೀಡಾದ ಕರೆಯನ್ನು ಸರಿಪಡಿಸಿ ಮತ್ತೆ ಸುಂದರಗೊಳಿಸಲಾಗಿದೆ. ರಾತ್ರಿ ಕರೆಗೆ ನೀರು ಹರಿಸಲಾಗಿದೆ ಎಂದು ಕಂಬಳ ಓಟಗಾರ ಹಮೀದ್ ಬಂಗಾಡಿ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.

    ಕಾರ್ಯಕ್ರಮ: ಮಾ.7ರಂದು ಬೆಳಗ್ಗೆ 8.30ಕ್ಕೆ ಉದ್ಘಾಟನೆ. ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ. ಗೌಡ, ಪ್ರಧಾನ ಕಾರ್ಯದರ್ಶಿ ಕಿಶೋರ್ ವಳಂಬ್ರ, ಕಾರ್ಯದರ್ಶಿಗಳಾದ ಭರತ್ ಕುಮಾರ್, ಅಶ್ರಫ್ ತಿಮ್ಮನಬೆಟ್ಟು, ಆನಂದ ಗೌಡ ಮೈರ್ನೋಡಿ, ಕೋಶಾಧಿಕಾರಿ ಕಾಸಿಂ ಮಲ್ಲಿಗೆಮನೆ, ಉಪಾಧ್ಯಕ್ಷರಾದ ಸೀತಾರಾಮ ಹಾರ್ತಕಜೆ, ತುಂಗಪ್ಪ ಪೂಜಾರಿ ಕಾಜೂರು, ಕಿಶೋರ್ ಹೂರ್ಜೆ, ವಿನಯಚಂದ್ರ ಗೌಡ ಪಂಡೆಕಲ್ಲು, ಹಸೈನಾರ್ ಬಾವಲಿಬನ ಮೊದಲಾದವರು ಉಪಸ್ಥಿತರಿರುವರು. ಮಾ.8ರಂದು ಬೆಳಗ್ಗೆ ಸಮಾರೋಪ ಸಮಾರಂಭ ನಡೆಯಲಿದೆ.

    ಮೂರು ಕಂಬಳ ರದ್ದು: ಈ ಬಾರಿ ಅವಿಭಜಿತ ಜಿಲ್ಲಾ ಕಂಬಳ ಸಮಿತಿ 18 ಕಂಬಳಗಳನ್ನು ನಿಗದಿ ಮಾಡಿದ್ದು, ಈ ಪೈಕಿ ಮೂರು ಕಂಬಳಗಳು ನಡೆದಿಲ್ಲ. ನಾಗಮಂಡಲ ಹಿನ್ನೆಲೆಯಲ್ಲಿ ವಾಮಂಜೂರು ತಿರುವೈಲು ಸಂಕುಪೂಂಜ-ದೇವುಪೂಂಜ ಜೋಡುಕರೆ ಕಂಬಳ ರದ್ದುಗೊಂಡಿತ್ತು. ಬೀಡು ಕಾಮಗಾರಿ ಕಾರಣದಿಂದ ಕಟಪಾಡಿ ಮೂಡು-ಪಡು ಜೋಡುಕರೆ ಕಂಬಳ ನಡೆದಿಲ್ಲ. ತಲಪಾಡಿ ಸೂರ್ಯ-ಚಂದ್ರ ಜೋಡುಕರೆ ಕಂಬಳಕ್ಕೆ ಜಾಗದ ವಿಚಾರ ಅಡ್ಡಿಯಾಗಿತ್ತು. ಉಳಿದಂತೆ 14 ಕಂಬಳಗಳು ಯಶಸ್ವಿಯಾಗಿ ನಡೆದಿದ್ದು, 15ನೇ ಕಂಬಳದೊಂದಿಗೆ ಋತು ಮುಕ್ತಾಯಗೊಳ್ಳುತ್ತಿದೆ.

    ಶ್ರೀನಿವಾಸ ಗೌಡ ಆಕರ್ಷಣೆ: ಈ ಬಾರಿ ಕಂಬಳಕ್ಕೆ ವಿಶ್ವವ್ಯಾಪಿ ರೂಪ ಕೊಟ್ಟವರು ವೇಗದ ಓಟಗಾರನೆಂದು ಹೆಸರಾದ ಅಶ್ವತ್ಥಪುರ ಶ್ರೀನಿವಾಸ ಗೌಡ. ಬಂಗಾಡಿ ಕಂಬಳದಲ್ಲೂ ಅವರ ಛಾಪು ಮುಂದುವರಿಯಲಿದ್ದು, ಆಕರ್ಷಣೆಯ ಕೇಂದ್ರವಾಗಿರಲಿದ್ದಾರೆ. ಒಂದೇ ಕಂಬಳ ಋತುವಿನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದು ಸಾರ್ವಕಾಲಿಕ ದಾಖಲೆ ಮಾಡಿರುವ ಅವರು 35 ಪದಕ ಗೆದ್ದ ದಾಖಲೆ ಹಕ್ಕೇರಿ ಸುರೇಶ್ ಶೆಟ್ಟಿಯವರ ದಾಖಲೆ ಮುರಿದಿದ್ದಾರೆ. ಇದುವರೆಗೆ 42 ಪದಕ ಗೆದ್ದಿದ್ದು, ಕೊನೆಯ ಕಂಬಳದಲ್ಲೂ ಪದಕ ಬೇಟೆ ಮುಂದುವರಿಯುವ ನಿರೀಕ್ಷೆ ಇದೆ. ಹಗ್ಗ ಕಿರಿಯ ವಿಭಾಗದಲ್ಲಿ 13 ಚಿನ್ನ, 1 ಬೆಳ್ಳಿ ಪದಕ ಪಡೆದಿರುವುದೂ ದಾಖಲೆಯಾಗಿದೆ.

    ಹೊಸ ಮಾದರಿಯ ಸೆನ್ಸರ್:
    ಉಪ್ಪಿನಂಗಡಿ ಕಂಬಳದಲ್ಲಿ ಕೋಣಗಳು ಹಾರಿದ್ದರಿಂದ ಕರೆ ಆರಂಭದ ಸೆನ್ಸರ್‌ಗೆ ಹಾನಿಯಾಗಿತ್ತು. ಈಗ ಅದನ್ನು ದುರಸ್ತಿ ಮಾಡಲಾಗಿದ್ದು, ಬಂಗಾಡಿ ಕಂಬಳದಲ್ಲಿ ಅಳವಡಿಸಲಾಗುತ್ತಿದೆ. ಮುಂದಿನ ಋತುವಿನ ಕಂಬಳಕ್ಕೆ ಹೊಸ ಸೆನ್ಸರ್ ಖರೀದಿಸಲು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ 4 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದ್ದಾರೆ. ಅದರಲ್ಲಿ ಅತ್ಯಾಧುನಿಕ ಸೆನ್ಸರ್ ಖರೀದಿಸಲಾಗುವುದು. ಇದರಿಂದ ಮುಂದೆ ಯಾವುದೇ ಸಮಸ್ಯೆ ಬರುವುದಿಲ್ಲ. ನಿಖರ ಸಮಯ ದಾಖಲಿಸುವುದೂ ಸಾಧ್ಯವಾಗುತ್ತದೆ. ಕಂಬಳ ಜನಪ್ರಿಯವಾಗಿರುವ ಈ ಹೊತ್ತಿನಲ್ಲಿ ಇದು ಅನಿವಾರ್ಯವೂ ಹೌದು ಎಂದು ಕಂಬಳ ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ ತಿಳಿಸಿದ್ದಾರೆ.

    ಉಪ್ಪಿನಂಗಡಿ ಕಂಬಳ 36 ಗಂಟೆಗಳಷ್ಟು ಕಾಲ ನಡೆದಿರುವುದಕ್ಕೆ ಹಲವು ಕಾರಣಗಳಿವೆ. ಏನೇ ಇರಲಿ, ಇದು ಬಂಗಾಡಿ ಕಂಬಳದಲ್ಲಿ ಪುನರಾವರ್ತನೆ ಆಗುವುದಿಲ್ಲ. ನಿಗದಿತ ಅವಧಿಯಲ್ಲಿ ಮುಗಿಸಲು ಸೂಚನೆ ನೀಡಲಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಲಾಗುವುದು.
    – ಪಿ.ಆರ್.ಶೆಟ್ಟಿ, ಅಧ್ಯಕ್ಷ, ಅವಿಭಜಿತ ಜಿಲ್ಲಾ ಕಂಬಳ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts