More

    ಕರೊನಾ ಅಟ್ಟಹಾಸಕ್ಕೆ ಠಾಣೆಯೇ ಸ್ಥಳಾಂತರ!

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಕರೊನಾ ಮಹಾಮಾರಿ ಕಾಟಕ್ಕೆ ಪೊಲೀಸ್ ಠಾಣೆಯನ್ನೇ ಸ್ಥಳಾಂತರ ಮಾಡಬೇಕಾದ ಸಂದಿಗ್ಧ ಪರಿಸ್ಥಿತಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ಗೆ ಬಂದೊದಗಿದೆ!

    ಹಾಗೆ ಹೊಸ ಜಾಗ ಹುಡುಕಿಕೊಂಡು ಹೋಗಲಿರುವುದು ಇಲ್ಲಿನ ಉತ್ತರ ಉಪ ವಿಭಾಗ ವ್ಯಾಪ್ತಿಯ ಕಮರಿಪೇಟ ಪೊಲೀಸ್ ಠಾಣೆ.

    ಕರಾಡಿ ಓಣಿಯ ಸ್ಮಶಾನ ಕಾಯುವ ವ್ಯಕ್ತಿಯೊಬ್ಬನಿಗೆ ಕರೊನಾ ಸೋಂಕು ದೃಢಪಟ್ಟಿದೆ. ಅಲ್ಲಿಯ 100 ಮೀ. ವ್ಯಾಪ್ತಿಯಲ್ಲಿ ಸೀಲ್​ಡೌನ್ ಆದೇಶ ಘೊಷಣೆಯಾಗಿದೆ. ಈ ಹಿನ್ನೆಲೆಯಲ್ಲಿ, 100 ಮೀ. ವ್ಯಾಪ್ತಿಯಲ್ಲೇ ಇರುವ ಕಮರಿಪೇಟ ಠಾಣೆಯನ್ನು ಸ್ಥಳಾಂತರಿಸಲು ಪೊಲೀಸ್ ಕಮಿಷನರೇಟ್ ನಿರ್ಧರಿಸಿದೆ.

    ಕಾರವಾರ ರಸ್ತೆಯ ಬಾಸೆಲ್ ಮಿಷನ್ ಚರ್ಚ್​ನ ಮದುವೆ ಮಂಟಪಕ್ಕೆ ಕಮರಿಪೇಟ ಪೊಲೀಸ್ ಠಾಣೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿರುವ ಇಲಾಖೆ, ಸೋಮವಾರ ಕಚೇರಿಯ ಎಲ್ಲ ಕಡತಗಳನ್ನು ಸ್ಥಳಾಂತರಿಸಿ, ಸೋಮವಾರದಿಂದಲೇ ಕಾರ್ಯಾಚರಣೆ ನಡೆಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಹಗಲಿರುಳು ಕೆಲಸ: ಕಮರಿಪೇಟ ಪೊಲೀಸ್ ಠಾಣೆ ಹತ್ತಾರು ವರ್ಷಗಳಿಂದ ಕಮರಿಪೇಟೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ವರ್ಷದ 365 ದಿನ, ದಿನದ 24 ಗಂಟೆ ಬಾಗಿಲು ತೆರೆದೇ ಇರುತ್ತಿತ್ತು. ಅಂದರೆ, ಸದ್ಯ ಠಾಣೆ ಇರುವ ಕಟ್ಟಡದ ಬಾಗಿಲನ್ನು ಅನೇಕ ವರ್ಷದಿಂದ ಮುಚ್ಚಿರಲೇ ಇಲ್ಲ. ಕರೊನಾ ಕಾರಣದಿಂದ ಇದೀಗ ಬಾಗಿಲು ಹಾಕುವ ಸಂದರ್ಭ ಬಂದೊದಗಿದೆ.

    60 ಸಿಬ್ಬಂದಿ: ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಓರ್ವ ಇನ್ಸ್​ಪೆಕ್ಟರ್ ಸೇರಿ 60ಕ್ಕೂ ಹೆಚ್ಚು ಪೊಲೀಸರು ಸೇವೆ ಸಲ್ಲಿಸುತ್ತಿದ್ದಾರೆ. ಮುಲ್ಲಾ ಓಣಿಯ ಸೋಂಕಿತನ ಸಂಪರ್ಕದಿಂದ ಐವರು ಸಿಬ್ಬಂದಿ ಸ್ವಯಂ ಕ್ವಾರಂಟೈನ್​ಗೆ ಒಳಪಟ್ಟ ಬಳಿಕ ಕೊಂಚ ವಿಚಲಿತರಾಗಿದ್ದ ಕೆಲ ಸಿಬ್ಬಂದಿ ಅವರ ವರದಿ ನೆಗೆಟಿವ್ ಬಂದ ಬಳಿಕ ನಿಟ್ಟುಸಿರು ಬಿಟ್ಟಿದ್ದರು. ಠಾಣೆ ಸ್ಥಳಾಂತರದ ನಂತರ ಮತ್ತಿಷ್ಟು ನಿರಾಳರಾಗಬಹುದು.

    ಕಮರಿಪೇಟ ಪೊಲೀಸ್ ಠಾಣೆ ಪ್ರದೇಶವನ್ನು ಕಂಟೈನ್​ವೆುಂಟ್ ಪ್ರದೇಶವೆಂದು ಘೊಷಿಸಲಾಗಿದೆ. ಸಿಬ್ಬಂದಿಯ ರಕ್ಷಣೆ, ಸರ್ಕಾರದ ಆದೇಶ ಪಾಲನೆಗಾಗಿ ಅನಿವಾ ರ್ಯವಾಗಿ ಠಾಣೆಯನ್ನು ಸ್ಥಳಾಂತರಿಸಲಾಗುತ್ತಿದೆ.

    | ಪಿ. ಕೃಷ್ಣಕಾಂತ ಡಿಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts