More

    ಕನ್ನಡ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳಿ

    ಕಮಲನಗರ: ತಾಲೂಕಿನ ಎಲ್ಲ ಅಂಗಡಿ ಮುಂಗಟ್ಟೆಗಳಲ್ಲಿ ಅಳವಡಿಸಿರುವ ಅನ್ಯಭಾಷೆಯ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ನಾಮಫಲಕ ಅಳವಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಗ್ರಹಿಸಿದೆ.

    ತಾಲೂಕು ಅಧ್ಯಕ್ಷ ಪ್ರಶಾಂತ ಮಠಪತಿ ನೇತೃತ್ವದ ನಿಯೋಗ ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ, ನಡೆದಾಡುವ ದೇವರೆಂದೆ ಖ್ಯಾತರಾದ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರಾದ ಕಮಲನಗರವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪ್ರಮುಖ ಶೈಕ್ಷಣಿಕ ಮತ್ತು ವ್ಯಾಪಾರಿ ಕೇಂದ್ರವಾಗಿದೆ. ಇಲ್ಲಿ ಅನೇಕ ಅಂಗಡಿ ಮತ್ತು ಮುಂಗಟ್ಟೆಗಳ ನಾಮಫಲಕಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಿ, ಅನ್ಯಭಾಷೆ ನಾಮಫಲಕ ಅಳವಡಿಸಿದ್ದರಿಂದ ಕನ್ನಡಾಭಿಮಾನಿಗಳಿಗೆ ನೋವುಂಟು ಮಾಡಿದೆ. ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡ ಹಾಗೂ ಶೇ.೪೦ ಅನ್ಯ ಭಾಷೆ ಬಳಸಬೇಕೆಂಬ ನಿಯಮವಿದ್ದರೂ ವಿವಿಧ ಅಂಗಡಿಗಳ ಮಾಲೀಕರು ಇದನ್ನು ಪಾಲಿಸುತ್ತಿಲ್ಲ. ಇವರಿಗೆ ಕನ್ನಡ ಭಾಷೆಗೆ ಪ್ರಾಶಸ್ತ್ಯ ನೀಡುವಂತೆ ಅನೇಕ ಸಲ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ವ್ಯಾಪಾರ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡೇತರ ಭಾಷೆ ಬಳಸುವಾಗ, ಮೊದಲು ಕನ್ನಡ ನಂತರ ಇತರ ಭಾಷೆಗಳಲ್ಲಿ ನಾಮಫಲಕ ಹಾಕುವುದು ಕಡ್ಡಾಯ. ಇಲ್ಲದಿದ್ದರೆ ವ್ಯಾಪಾರ-ವಾಣಿಜ್ಯ ಮಳಿಗೆಗಳ ಸನ್ನದು ರದ್ದುಗೊಳಿಸುವುದು ಇಲ್ಲವೇ ನವೀಕರಿಸಬಾರದು. ಕನ್ನಡ ನಾಮಫಲಕ ಅಳವಡಿಸದ ಅಂಗಡಿ ಮಾಲೀಕರಿಗೆ ರೂ.೧೦ ಸಾವಿರ ದಂಡ ವಿಧಿಸಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ತಾಲೂಕಿನಲ್ಲಿ ಈ ಕುರಿತು ಯಾವುದೇ ಕ್ರಮಕೈಗೊಳ್ಳದ ಕಾರಣ ನಾಮಫಲಕಗಳಲ್ಲಿ ಅನ್ಯ ಭಾಷೆಗಳು ರಾರಾಜಿಸುತ್ತಿವೆ. ಇದು ಕನ್ನಡಾಭಿಮಾನಿಗಳ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ ಆಕ್ರೋಶ ವ್ಯಕ್ತಪಡಿಸಿದರು.

    ಕನ್ನಡ ನಾಮಫಲಕ ಅಳವಡಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕನ್ನಡಪರ, ಜನಪರ ಸಂಘಟನೆಗಳ ಸಹಯೋಗದಲ್ಲಿ ನವೆಂಬರ್ ಕೊನೆಯ ವಾರದಲ್ಲಿ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಿಂಗಾನಂದ ಮಹಾಜನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಪಾಟೀಲ್, ಕಸಾಪ ತಾಲೂಕು ಉಪಾಧ್ಯಕ್ಷ ಧನರಾಜ ಭವರಾ, ಪ್ರಧಾನ ಕಾರ್ಯದರ್ಶಿ ಮಹಾದೇವ ಮಡಿವಾಳ, ಸಾಹಿತಿ ಸಂಗಮೇಶ್ವರ ಮುರ್ಕೆ, ಜನಾರ್ದನ ಸಾವರ್ಗೇಕರ್, ಬಾಲಾಜಿ ತೇಲಂಗ್, ಶ್ರೀರಂಗ ಪರಿಹಾರ, ಗಣಪತಿ ಕುರನಳ್ಳೆ, ಮಡಿವಾಳಪ್ಪ ಮಹಾಜನ, ಶಿವಕಾಂತ ಹಣಮೇಟ್ಟೆ, ಸೂರ್ಯಕಾಂತ ಬಿರಾದಾರ, ಶಿವಕುಮಾರ ಪಾಟೀಲ್, ಸಂತೋಷ ಸುಲಾಕೆ, ಪ್ರಶಾಂತ ಖಾನಾಪುರೆ ಇತರರಿದ್ದರು.

    ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡು ನ.೧ಕ್ಕೆ ೫೦ ವರ್ಷ ಪೂರ್ಣಗೊಳ್ಳಲಿರುವ ಈ ಸಂದರ್ಭದಲ್ಲಾದರೂ ಸಂಬಂಧಪಟ್ಟ ಅಧಿಕಾರಿಗಳು ಕನ್ನಡೇತರ ನಾಮಫಲಕಗಳನ್ನು ತೆರವುಗೊಳಿಸಿ, ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯ.
    |ಪ್ರಶಾಂತ ಮಠಪತಿ, ಕಸಾಪ ತಾಲೂಕು ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts