More

    ಮೀಸಲು ಕೊಡದಿದ್ರೆ ಕೈಗೆ ಬೇಡ ವೋಟ್

    ಕಲಬುರಗಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಗೆ ಮುನ್ನ ದೀಕ್ಷ-ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲು ಸೌಲಭ್ಯ ನೀಡದಿದ್ದರೆ ಯಾರೊಬ್ಬರೂ ಕಾಂಗ್ರೆಸ್‌ಗೆ ವೋಟ್ ಹಾಕಬೇಡಿ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಆಗ ನಾನೇ ಮಾಡಿ ತೋರಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದರು.

    ೨ಎ, ಒಳಪಂಗಡಗಳಿಗೆ ೨ಡಿ ಮೀಸಲು ಸೌಲಭ್ಯಕ್ಕೆ ಒತ್ತಾಯಿಸಿ ನಗರದ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ದೀಕ್ಷ-ಪಂಚಮಸಾಲಿ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ನ್ಯಾಯ ಕೇಳಲು ಯಾರೂ ಹೆದರಬಾರದು. ಸಮಾಜಕ್ಕಾಗಿ ಯಾವ ಸ್ವಾಮೀಜಿ ದುಡಿಯುತ್ತಾರೆಯೋ ಅವರ ಹಿಂದೆ ಹೋಗಿ ಬರೀ ಮನವಿಪತ್ರ ಕೊಟ್ಟು ಮಠಗಳ ಅಭಿವೃದ್ಧಿ ಮಾಡಿಕೊಳ್ಳುವವರ ಹಿಂದೆ ಬೀಳಬೇಡಿ ಎಂದು ಹೇಳಿದರು.

    ವೀರಶೈವ ಲಿಂಗಾಯತ ಸಮುದಾಯವನ್ನು ಬರೀ ಸ್ವಾರ್ಥಕ್ಕಾಗಿ ಬಳಸಲಾಗಿದೆ. ಸಮಾಜಕ್ಕಾಗಿ ೭೫೦ ಕಿಮೀ ಪಾದಯಾತ್ರೆ ಹೋರಾಟ ಮಾಡಿದ್ದು ಕೂಡಲಸಂಗಮದ ಪಂಚಮಸಾಲಿ ಪೀಠದ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ. ೨ಎ ಮೀಸಲು ಕೊಡಿ. ಇಲ್ಲವಾದರೆ ಸೋಲು ಖಚಿತ ಎಂದು ಎಚ್ಚರಿಸಿದರು.

    ನೀತಿ ಸಂಹಿತೆ ಘೋಷಣೆ ಆಗುವುದರೊಳಗೆ ಮೀಸಲು ನೀಡದಿದ್ದರೆ ನಾವ್ಯಾರೂ ಮತ ಹಾಕುವುದಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ನೀಡಿದ ಮೀಸಲು ಮಾದರಿಯಲ್ಲಿ ನಮಗೂ ಕೊಡಬೇಕು ಎಂದು ಒತ್ತಾಯಿಸಿದರು.

    ಬಸವಣ್ಣ ಸಾಂಸ್ಕೃತಿಕ ನಾಯಕ ಘೋಷಣೆ ಮಾಡಿದ್ದಕ್ಕಾಗಿ ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಸಿಎಂ ಸಿದ್ದರಾಮಯ್ಯ ಅವರನ್ನು ಕರೆದು ಸನ್ಮಾನ ಮಾಡಿದರು. ಆದರೆ ಇದರ ಉದ್ದೇಶವೇ ಬೇರೆ. ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಮಾಡಿರುವ ನಾಟಕವಿದು. ರಾಜ್ಯದಲ್ಲಿ ಯಡಿಯೂರಪ್ಪ, ಖಂಡ್ರೆ, ಶಾಮನೂರು ಶಿವಶಂಕರಪ್ಪ ಈ ಮೂರು ಕುಟುಂಬಗಳು ತಮ್ಮ ಮಕ್ಕಳ ಸಲುವಾಗಿ ಬಡಿದಾಡುತ್ತಿವೆ. ಸಮಾಜದ ಒಳಿತಿಗಾಗಿ ಇವರ ಕೊಡುಗೆ ಏನು ಎಂದು ಖಾರವಾಗಿ ಪ್ರಶ್ನಿಸಿದರು.

    ಕೆಲವರು ಮೀಸಲು ಹೋರಾಟಕ್ಕೆ ತಡೆಯಲು ಯತ್ನಿಸಿದ್ದರೂ ಸ್ವಾಮೀಜಿ ೭೫೦ ಕಿಮೀ ಪಾದಯಾತ್ರೆ ಮಾಡಿದರು. ಈಗ ಮತ್ತೊಂದು ಹೊಸ ನಾಟಕ ಕಂಪನಿ ಬಂದಿದೆ. ಹೋರಾಟ ಯಾಕೆ ಮಾಡ್ತೀರಿ? ನಾವು ಮೀಸಲು ಕೊಡಿಸುತ್ತೇವೆ ಎನ್ನುತ್ತಿದೆ. ನಾವು ಅಧಿಕಾರದಲ್ಲಿ ಇದ್ದಾಗ ಒಂದು ನಾಟಕ ಕಂಪನಿ ಇತ್ತು. ಈಗ ಮತ್ತೊಂದು ಬಂದಿದೆ. ಆಗ ಮೀಸಲಾತಿಗಾಗಿ ಪ್ರಾಣ ಕೊಡುತ್ತೇವೆ ಎಂದವರು ಈಗ ಬೇರೆ ನಾಟಕ ಶುರು ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಎಂ.ಬಿ. ಪಾಟೀಲ್ ಕಾಲೆಳೆದರು.

    ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ಒಂಬತ್ತು ತಿಂಗಳಿಂದ ಆರನೇ ಹಂತದ ಹೋರಾಟ ಪ್ರಾರಂಭವಾಗಿದೆ. ಸರ್ಕಾರ ಯಾವುದಾದರೂ ಇರಲಿ, ಸಮುದಾಯಕ್ಕೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಮುಖ್ಯ ಬೇಡಿಕೆ. ಲೋಕಸಭಾ ಚುನಾವಣೆ ಒಳಗಾಗಿ ೨ಎ ಮೀಸಲಾತಿ ನೀಡುವಂತೆ ಹಕ್ಕೊತ್ತಾಯ ಮಂಡಿಸಿದರು.

    ಪಂಚಮಸಾಲಿ ದೀಕ್ಷ ಸಮಾಜಕ್ಕೆ ಯಾವ ಸರ್ಕಾರ ಅನ್ಯಾಯ ಮಾಡುತ್ತದೆಯೋ ಅದರ ಖುರ್ಚಿ ಅಲುಗಾಡುವುದು ಗ್ಯಾರಂಟಿ. ನಮ್ಮ ಸಮಾಜಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ. ಸಾಮಾಜಿಕ ನ್ಯಾಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡೋಣ. ಕಾಂತರಾಜು ವರದಿಯನ್ನು ಯಾವತ್ತೂ ಒಪ್ಪುವುದಿಲ್ಲ. ಮೀಸಲು ಸಿಗುವವರೆಗೂ ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ಸಮಾಜದ ಋಣ ತೀರಿಸೋಣ ಎಂದರು.

    ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದಂತೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೂ ಒತ್ತಡ ಹಾಕುತ್ತಿದ್ದೇವೆ. ಸರ್ಕಾರದ ಕಣ್ತೆರೆಸಲು ಹೋರಾಟ ಮಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮಾಜಿ ಶಾಸಕ ರಾಜಕುಮಾರ ಪಾಟೀಲï ತೆಲ್ಕೂರ ಮಾತನಾಡಿ, ಕಾಂತರಾಜು ವರದಿ ಒಂದು ಬಾಂಬ್ ಇದ್ದಂತೆ. ಅದನ್ನು ನಾವು ಯಾವತ್ತೂ ಒಪ್ಪುವುದಿಲ್ಲ. ದೀಕ್ಷ ಪಂಚಮಸಾಲಿ ಸಮುದಾಯ ೨ಎ ಮೀಸಲಾತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

    ಸಮಾಜದ ಯುವ ಮುಖಂಡ ಚಂದು ಪಾಟೀಲ್ ಮಾತನಾಡಿ, ಮೀಸಲು ಸಿಗುವುದರಿಂದ ಸ್ವಾಮೀಜಿಗೆ ಏನೂ ಲಾಭ ಇಲ್ಲ. ಆದರೆ ಮೀಸಲು ದೊರೆತರೆ ನಮ್ಮ ಸಮಾಜದ ಮಕ್ಕಳಿಗೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ. ನಮ್ಮ ಹೋರಾಟ ಮೀಸಲಾತಿ ಸಿಗುವವರೆಗೂ ನಿಲ್ಲುವುದಿಲ್ಲ ಎಂದು ಗುಡುಗಿದರು.

    ದೀಕ್ಷ- ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಶರಣು ಪಪ್ಪಾ ಪ್ರಾಸ್ತಾವಿಕ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಸಮಾಜದ ಬಡ ಮಕ್ಕಳಿಗೆ ಅವಕಾಶ ಸಿಗುವಂತಾಗಲು ಎಲ್ಲರೂ ಸಂಘಟಿತರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು.

    ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಎಂ.ವೈ. ಪಾಟೀಲ್, ಪ್ರಮುಖರಾದ ಅಶೋಕ ಮನಗೂಳಿ, ಮಲ್ಲಣಗೌಡ ಪಾಟೀಲ್, ಹರಿಹರದ ಎಚ್.ಎಸ್. ಶಿವಶಂಕರ್, ಅಮರನಾಥ ಪಾಟೀಲ್, ಆರ್.ಕೆ. ಪಾಟೀಲ್, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಬಿ.ಎಸ್. ಪಾಟೀಲ್ ನಾಗರಾಳ, ಮಲ್ಲಣಗೌಡ ಮಾಳನೂರ, ರಾಜು ಜಡಿ, ಸಚಿನ್ ಕಡಗಂಚಿ, ಶಿವಾನಂದ ಪಿಸ್ತಿ, ಬಸವರಾಜ ಕರಡಿ, ಅಭಿಷೇಕ ಪಾಟೀಲ್, ಆರ್.ಕೆ. ಪಾಟೀಲ್, ಬಿ.ಎಸ್. ಪಾಟೀಲ್ ಇತರರಿದ್ದರು.

    ಈಗಿನ ಸರ್ಕಾರದ ಎದುರು ಸಹ ನಮ್ಮ ಹಕ್ಕು ಮಂಡಿಸಿದ್ದೇವೆ. ೬ನೇ ಹಂತದ ಹೋರಾಟ ಶುರುವಾಗಿದೆ. ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಇಡೀ ಕರ್ನಾಟಕ ಒಂದಾಗಿದೆ. ಹೋರಾಟ ಮುಗಿದೇ ಹೋಯ್ತು ಅಂತ ಕೆಲವರು ಭಾವಿಸಿದ್ದಾರೆ. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ.
    | ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಂಚಮಸಾಲಿ ಪೀಠ, ಕೂಡಲಸಂಗಮ

    ಸಮಾಜಕ್ಕೆ ಅನ್ಯಾಯವಾದಾಗ ಪ್ರತಿಭಟಿಸಲು ಯಾರೂ ಹಿಂದೇಟು ಹಾಕಬಾರದು. ಸಮಾಜದ ಹೆಸರು ಹೇಳಿ ಸ್ವಾರ್ಥ ರಾಜಕಾರಣ ಮಾಡುವವರನ್ನು ದೂರವಿಡಿ. ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಹೋರಾಡುತ್ತಿರುವ ಸ್ವಾಮೀಜಿ ಕೈ ಬಲಪಡಿಸಿ. ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಲ್ಲ.
    | ಬಸನಗೌಡ ಪಾಟೀಲ್ ಯತ್ನಾಳ್ ಶಾಸಕ, ವಿಜಯಪುರ

    ರಾಜ್ಯದಲ್ಲಿ ಲಿಂಗಾಯತರು ಸುಮಾರು ೨ ಕೋಟಿ ಜನಸಂಖ್ಯೆ ಇದ್ದರೂ ೬೫ ಲಕ್ಷ ತೋರಿಸಲಾಗಿದೆ. ಈ ಅವೈಜ್ಞಾನಿಕ ಜನಗಣತಿ ವರದಿ ಯಾವ ಕಾರಣಕ್ಕೂ ಒಪ್ಪಲಾಗದು. ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ದೀಕ್ಷ-ಪಂಚಮಸಾಲಿ ಮೀಸಲಾತಿಗೆ ನಡೆಯುತ್ತಿರುವ ಹೋರಾಟಕ್ಕೆ ಕಕ ಸಮುದಾಯದ ಜನ ಸಂಘಟಿತರಾಗಿ ಬೆಂಬಲಿಸೋಣ. ನ್ಯಾಯ ಸಿಗುವವರೆಗೂ ನಿರಂತರ ಹೋರಾಟ ಮಾಡೋಣ.
    | ಚಂದು ಪಾಟೀಲ್ ಮಹಾನಗರ ನಗರ ಜಿಲ್ಲಾಧ್ಯಕ್ಷ, ಬಿಜೆಪಿ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts