More

    ಕಲ್ಸಂಕ-ಗುಂಡಿಬೈಲು ರಸ್ತೆ ಅಪಾಯಕಾರಿ

    ಉಡುಪಿ: ಕಲ್ಸಂಕ ಜಂಕ್ಷನ್‌ನಿಂದ ಅಂಬಾಗಿಲು ಸಂಪರ್ಕಿಸುವ ಕಲ್ಸಂಕ-ಗುಂಡಿಬೈಲು ದ್ವಿಪಥ ರಸ್ತೆ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆಗಳಲ್ಲಿನ ಗುಂಡಿ, ಎಲ್ಲೆಂದರಲ್ಲಿ ವಾಹನಗಳ ಪಾರ್ಕಿಂಗ್‌ನಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಕಂಟಕವಾಗಿ ಪರಿಣಮಿಸಿದೆ.

    ಈ ದ್ವಿಪಥ ರಸ್ತೆ ದಿನೇದಿನೆ ಅಪಘಾತ ವಲಯವಾಗಿ ಮಾರ್ಪಡಾಗುತ್ತಿದೆ. ರಸ್ತೆ ಬದಿಯಲ್ಲಿ ಕಾರು ಪಾರ್ಕಿಂಗ್, ತಿರುವುಗಳಿಂದ ಅಪಘಾತ ಸಂಭವಿಸಲು ಕಾರಣವಾಗುತ್ತಿದೆ. ಅಂಬಾಗಿಲಿನಿಂದ ಕಲ್ಸಂಕ ಸಂಪರ್ಕಿಸುವ ನಗರಸಭೆ ರಸ್ತೆ ಇದಾಗಿದ್ದು, ದಿನಕಳೆದಂತೆ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದಂತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ವಾರದ ಹಿಂದೆ ರಸ್ತೆ ಬದಿ ನಿಂತಿದ್ದ ಕಾರಿಗೆ ರಿಕ್ಷಾ ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಗಂಭೀರ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ಬಳಿಕ ಸ್ಥಳೀಯರು ಮತ್ತಷ್ಟು ಅಘಾತಗೊಂಡಿದ್ದಾರೆ.
    ಕಲ್ಸಂಕದಿಂದ ಗುಂಡಿಬೈಲಿನವರೆಗೆ ಎರಡು ಬದಿಯಲ್ಲಿ ನಗರ ವೇಗವಾಗಿ ಬೆಳೆಯುತ್ತಿದೆ. ವಸತಿ ಸಮುಚ್ಚಯಗಳು, ಬೃಹತ್ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತಿದ್ದು, ರಸ್ತೆ ಬದಿ ವ್ಯಾಪಾರ ಚಟುವಟಿಕೆ ಗರಿಗೆದರಿದೆ. ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಅಂಗಡಿ, ವ್ಯಾಪಾರ ಮಳಿಗೆಗಳಿಗೆ ತೆರಳುವುದು ಇಲ್ಲಿ ಸಾಮಾನ್ಯವಾಗಿದೆ. ಈ ಹಿಂದೆ ಇಲ್ಲಿ ವಾಹನಗಳ ಡೋರ್ ತೆಗೆಯುವಾಗ, ಹಾಕುವಾಗ ಹಿಂದಿನಿಂದ ಬರುವ ದ್ವೀಚಕ್ರ ವಾಹನಗಳು, ಅಥವಾ ಇನ್ನೊಂದು ವಾಹನ ಡೋರ್‌ಗೆ ತಾಗಿದ ಪರಿಣಾಮ ಸಣ್ಣಪುಟ್ಟ ಅಪಘಾತ ಸಂಭವಿಸಿದ್ದೂ ಇದೆ.ಗುಂಡಿಬೈಲು ಒಳಚರಂಡಿ ಕಾಮಗಾರಿಯನ್ನು ಅವಸರವಾಗಿ ನಡೆಸಿದ ಪರಿಣಾಮ ಲಕ್ಷಾಂತರ ರೂ. ವೆಚ್ಚದಲ್ಲಿ ಡಾಂಬರು ಕಾಮಗಾರಿ ಮಾಡಲಾದ ಗುಂಡಿಬೈಲು ದೊಡ್ಡಣಗುಡ್ಡೆಯ ರಸ್ತೆ ವಾಹನ ಸಂಚಾರ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಹಲವೆಡೆ ರಸ್ತೆಗಳು ಗುಂಡಿಗಳಿಂದ ಆವೃತವಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿ. ರಾತ್ರಿವೇಳೆ ಕೆಲವರು ಬಿದ್ದು ಸಣ್ಣಪುಟ್ಟ ಗಾಯವನ್ನು ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕಲ್ಸಂಕ ಗುಂಡಿಬೈಲು ರಸ್ತೆಯಲ್ಲಿ ಹೆಚ್ಚಿನ ವಾಹನ ಓಡಾಟವಿಲ್ಲ. ಎರಡು ಬದಿಯಲ್ಲಿ ವಾಹನಗಳು ಸೀಮಿತ ಸಂಖ್ಯೆಯಲ್ಲಿ ಪಾರ್ಕಿಂಗ್ ಮಾಡುತ್ತಿರುವುದರಿಂದ ಇತರೆ ವಾಹನಗಳ ಓಡಾಟಕ್ಕೆ ಅಷ್ಟೇನೂ ಸಮಸ್ಯೆಯಾಗಿಲ್ಲ. ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು.
    ಅಬ್ದುಲ್ ಖಾದರ್, ಸಂಚಾರ ಠಾಣೆ ಎಸ್‌ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts