More

    ವ್ಯಾಸಭೂಮಿಯಲ್ಲಿ ನೆಲೆನಿಂತ ಹರಿದಾಸವರ್ಯರು

    ಒಂದು ಕಾಲದಲ್ಲಿ ಹಿಡಿಂಬಾಸುರನ ವನವಾಗಿದ್ದ ಆದುದರಿಂದಲೇ ‘ಹಿಡಿಂಬವನ’ ಎಂದೇ ಪುರಾಣಪ್ರಸಿದ್ಧವಾಗಿರುವ, ಪಾಂಡವರು ಲಾಕ್ಷಾಗೃಹದಹನಾನಂತರ ಆಗಮಿಸಿ ಆ ಅಸುರನನ್ನು ಸಂಹರಿಸಿ ತರುವಾಯ ವೇದವ್ಯಾಸರ ಉಪದೇಶ ಪಡೆದ ಪ್ರಾಚೀನಪಟ್ಟಣವೇ ಚಿತ್ರದುರ್ಗ. ಈ ನಗರಿಯಲ್ಲಿ ಚಾಲುಕ್ಯರೂ, ಹೊಯ್ಸಳರೂ, ದೇವಗಿರಿಯ ಯಾದವರೂ ರಾಜಭಾರ ನಡೆಸಿದ್ದರು. ತರುವಾಯ ಇದು ವಿಜಯನಗರದ ಸಂಸ್ಥಾನಕ್ಕೂ ಒಳಪಟ್ಟು ಸಾಮಂತರಾಜ್ಯವಾಗಿ ಪಾಳೆಯಗಾರರಿಂದ ಆಳಲ್ಪಟ್ಟಿತು. ವಿಜಯನಗರದ ರಾಜರ ಆಳ್ವಿಕೆಯಿಂದ ಕ್ರಮೇಣ ಹೊರಗುಳಿದ ಈ ನಗರಿಯು ಸ್ವತಂತ್ರರಾಜ್ಯವಾಗಿಯೂ ಹೊರಹೊಮ್ಮಿತು. ತದನಂತರ ಹೈದರಾಲಿ, ಟಿಪ್ಪುಗಳ ವಶಕ್ಕೊಳಪಟ್ಟು ತತಃ ಮೈಸೂರು ಅರಸರ ಕೈಸೇರಿ ಕೊನೆಗೆ ಬ್ರಿಟಿಷರ ವಶಕ್ಕೆ ಸೇರಿತು. ಇಂತು, ಈ ನಗರಿ ರಾಜಕೀಯವಾಗಿಯೂ ಹೆಸರುವಾಸಿಯಾಗಿದೆ. ಇಲ್ಲಿನ ಮೇಲುದುರ್ಗದಲ್ಲಿರುವ ಶ್ರೀವೇಣುಗೋಪಾಲಸ್ವಾಮಿಯ ದೇವಾಲಯ ಹಾಗೂ ಪುಷ್ಕರಿಣಿಯು ಇಂದಿಗೂ ಯಾತ್ರಿಕರ ಕಣ್ಮನಗಳನ್ನು ಸೆಳೆಯುತ್ತಿವೆ.

    ವ್ಯಾಸಭೂಮಿಯಲ್ಲಿ ನೆಲೆನಿಂತ ಹರಿದಾಸವರ್ಯರುಪ್ರಸ್ತುತ, ಶ್ರೀ ಗುರುರಾಯರ ಬೃಂದಾವನವನ್ನು ಹೊಂದಿರುವ ಈ ನಗರಿಯು ಅನೇಕ ಐತಿಹಾಸಿಕ ಪವಾಡಗಳಿಂದಲೂ ಪ್ರಸಿದ್ಧಿ ಪಡೆದಿದೆ. ಶ್ರೀಗೋಪಾಲಸ್ವಾಮಿ ಬೆಟ್ಟದ ಈಶಾನ್ಯದಿಕ್ಕಿಗೆ ಬಸವನ ಬುರುಜು ಎಂಬ ಬತೇರಿಯಿದೆ. ಇದಕ್ಕೆ ಕೆಳಭಾಗದಲ್ಲಿ ಅಂಜುಮನ್ ರಸ್ತೆಗೆ ಹೊಂದಿಕೊಂಡಿರುವುದೇ ಶ್ರೀರಾಘವೆಂದ್ರಸ್ವಾಮಿಗಳ ಮಠ. ಇದು ಶ್ರೀಸುಮತೀಂದ್ರತೀರ್ಥರ ಮಠವೆಂದೂ ಪ್ರತೀತಿ ಪಡೆದಿದೆ. ಹಿಂದೆ ಗುರುರಾಯರ ಬಳಿಯಲ್ಲಿ ಅವರ ಬಲೆಸೇವೆ ಮಾಡುತ್ತಿದ್ದ ವೆಂಕಣ್ಣನೆಂಬ ಮುಗ್ಧ ಸೇವಕನಿದ್ದನಂತೆ. ಆತನು ವೃದ್ಧಾಪ್ಯದಲ್ಲಿ ತನ್ನೂರಾದ ಚಿತ್ರದುರ್ಗಕ್ಕೆ ಹೋಗಬೇಕೆಂದೂ ಅದಕ್ಕಾಗಿ ಗುರುರಾಯರು ಸಮ್ಮತಿಸಬೇಕೆಂದೂ ಯಾಚಿಸಿದನು. ರಾಯರು ‘ನಿನಗೆ ಇಷ್ಟವಾದುದನ್ನು ಕೇಳು. ಕೊಟ್ಟು ಕಳುಹಿಸುತ್ತೇವೆ’ ಎಂದರು. ಆತನು ಮೋಕ್ಷವನ್ನು ಬೇಡಿದನು. ಆಗ ರಾಯರು ‘ಅವಶ್ಯ ಕೊಡುತ್ತೇವೆ. ಆದರೆ ಅದಕ್ಕೆ ಕಾಲ ಇನ್ನೂ ಪಕ್ವವಾಗಬೇಕಿದೆ. ಸಕಾಲದಲ್ಲಿ ಕೊಡಿಸುತ್ತೇವೆ’ ಎಂದು ಆಶ್ವಾಸನೆಯನ್ನು, ಫಲಮಂತ್ರಾಕ್ಷತೆಗಳನ್ನಿತ್ತು ಆತನನ್ನು ಬೀಳ್ಕೊಟ್ಟರು. ಆತನೋ ಚಿತ್ರದುರ್ಗಕ್ಕೆ ತೆರಳಿ ಗುರುರಾಯರ ಆದೇಶ, ಉಪದೇಶಗಳಂತೆ ಸತ್ಕರ್ವಚರಣೆಯಲ್ಲಿ ತೊಡಗಿದನು. ಇತ್ತ ಗುರುರಾಯರು ಸಚ್ಛಾಸ್ತ್ರಪ್ರಸಾರಕ್ಕಾಗಿ ಅನೇಕ ರಾಜ್ಯಗಳನ್ನು ಸುತ್ತುತ್ತ ಸಂಚಾರಕ್ರಮೇಣ ಚಿತ್ರದುರ್ಗಕ್ಕೆ ಆಗಮಿಸಿದರು. ವೇದವ್ಯಾಸರ-ಭೀಮಸೇನದೇವರ ವಿಶೇಷಸನ್ನಿಧಾನ ಹೊಂದಿದ್ದ ಚಿತ್ರದುರ್ಗಕ್ಕೆ ಆಗಮಿಸಿದ ಗುರುರಾಯರಿಗೆ ಪಾಳೆಯಗಾರರು, ವಿದ್ವಾಂಸರು, ಹರಿದಾಸರು ಮುಂತಾದ ಅನೇಕ ಹರಿಭಕ್ತರು ಭವ್ಯಸ್ವಾಗತ ಕೋರಿದರು. ಭಕ್ತ ವೇಂಕಣ್ಣನೂ ಗುರುಗಳಿಗೆ ಸಾಷ್ಟಾಂಗವಾಗಿ ಎರಗಿ ತಾನು ಪೂರ್ವದಲ್ಲಿ ಗುರುರಾಯರಲ್ಲಿಟ್ಟಿದ್ದ ಅಪೂರ್ವಬೇಡಿಕೆಯನ್ನೇ ಮರುಪ್ರಸ್ತಾಪಿಸಿದನು. ಗುರುರಾಯರೋ ಶ್ರೇಷ್ಠ ಯಾಜ್ಞಿಕರಿಂದ ವೇದೋಕ್ತಹೋಮವನ್ನು ಮಾಡಿಸಿ ಕೊನೆಗೆ ವೇಂಕಣ್ಣನನ್ನು ಅದರಲ್ಲಿ ಆತ್ಮಾಹುತಿ ಮಾಡಲು ಆದೇಶಿಸಿದರು. ಎಲ್ಲರೂ ನೋಡನೋಡುತ್ತಿದ್ದಂತೆಯೇ ವೇಂಕಣ್ಣನು ಗುರುರಾಯರಿಗೆ ಅಭಿವಂದಿಸಿ ಆ ಯಜ್ಞಕುಂಡದಲ್ಲಿ ಹಾರಿಯೇಬಿಟ್ಟನು. ಅಲ್ಲಿದ್ದವರಲ್ಲಿ ಅನೇಕರು ರಾಯರನ್ನು ಹತ್ತಿರದಿಂದ ಬಲ್ಲವರಾಗಿದ್ದರು, ಕೆಲವರು ಅಷ್ಟಾಗಿ ತಿಳಿಯದವರು. ತಿಳಿದವರು ರಾಯರ ಕಾರುಣ್ಯವನ್ನು ಕೊಂಡಾಡಿದರೆ, ಅರಿಯದವರು ಜರಿದರು. ಪ್ರಾಣಹಾನಿಗೆ ರಾಯರನ್ನೇ ಕಾರಣರನ್ನಾಗಿ ಪ್ರತಿಬಿಂಬಿಸಿದರು. ಅಷ್ಟರಲ್ಲಾಗಲೇ ಎಲ್ಲರಿಗೂ ಕಾಣುವಂತೆ ದಿವ್ಯ ವಿಮಾನವೊಂದರೊಳಗೆ ದೇವತೆಗಳು ವೇಂಕಣ್ಣನನ್ನು ಕೂರಿಸಿಕೊಂಡು ಹೋಗುತ್ತಿದ್ದರು. ನೆರೆದಿದ್ದ ಜನರಿಗಂತೂ ಆಶ್ಚರ್ಯ. ರಾಯರ ತಪಃಪ್ರಭಾವವನ್ನು ಕಣ್ಣಾರೆ ಕಂಡು ಕಣ್ಗಳು ತೇವಗೊಂಡವು. ಇನ್ನೆಲ್ಲಿ ಅಗ್ನಿ? ಹೋಮಕುಂಡ ಪುಷ್ಪಪೂರ್ಣವಾಗಿತ್ತು. ಇಂದು ಅದೇ ಸ್ಥಳದಲ್ಲೇ ಗುರುರಾಯರ ಮೃತ್ತಿಕಾಬೃಂದಾವನವು ನೆಲೆಗೊಂಡಿದೆ. ವೇಂಕಣ್ಣನ ದೌಹಿತ್ರವಂಶಸ್ಥರು ಗುರುರಾಯರನ್ನು ಅರ್ಚಿಸುತ್ತಿದ್ದಾರೆ. ಮುಂದೆ ಗುರುರಾಯರ ಪರಮ ಪ್ರೀತ್ಯಾಸ್ಪದರಾಗಿರುವ ಶ್ರೀಸುಮತೀಂದ್ರತೀರ್ಥಶ್ರೀಪಾದರು ಸಂಚಾರಾಂಗತಯಾ ಚಿತ್ರದುರ್ಗಕ್ಕೆ ಬಂದಿದ್ದರು 18ನೇ ಶತಮಾನದಲ್ಲಿ. ಅವರಿಗೆ ಗುರುರಾಯರು ಕನಸಿನಲ್ಲಿ ಏನೋ ಸೂಚನೆ ಇತ್ತಿದ್ದರು. ಅದರಂತೆ ಅವರು ಸ್ನಾನಾಹ್ನಿಕಾದಿಗಳ ಬಳಿಕ ರಾಯರು ಸೂಚಿಸಿದ್ದ ಸ್ಥಳಕ್ಕೆ ಬಂದು ಭೂಮಿಯನ್ನು ಅಗೆಸಿದರು. ದೊಡ್ಡ ಘಟಸರ್ಪ ಮೇಲೆ ಬಂದು ಸ್ವಾಮಿಗಳನ್ನು ದಿಟ್ಟಿಸಿನೋಡಿ ಎತ್ತಲೋ ಅದೃಶ್ಯವಾಯಿತು. ಅಗೆದ ಬುವಿಯನ್ನು ನೋಡಿದಾಗ ಅದರಲ್ಲಿ ಶ್ರೀರಾಮಚಂದ್ರದೇವರ ಲೋಹಮಯ ದಿವ್ಯವಿಗ್ರಹ ಹಾಗೂ ಶಿಲಾಮಯವಾದ ಐದು ಘಂಟೆಯ ವರದಹಸ್ತದ ಆಂಜನೇಯನ ವಿಗ್ರಹ ಕಂಡಿತು. ಇತಿಹಾಸವನ್ನು ಕೆದಕಿದ ತಜ್ಞರು ಅದು ಪಾಂಡವರಿಂದ ಪೂಜಿತವಾಗಿದ್ದ ವಿಗ್ರಹಗಳೆಂದು ಗುರುಗಳಿಗೆ ನಿವೇದಿಸಿದಾಗ ಶ್ರೀಗಳು ಆ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಅಲ್ಲಿಯೇ ಪ್ರತಿಷ್ಠಾಪಿಸಿ ಅದರೊಂದಿಗೆ ತಾವು ನಿತ್ಯವೂ ಪೂಜಿಸುತ್ತಿದ್ದ ಶ್ರೀಗುರುರಾಯರ ಬೃಂದಾವನವನ್ನೂ ಅಲ್ಲಿಯೇ ಇರಿಸಿ ವೇಂಕಣ್ಣನ ದೌಹಿತ್ರ ವಂಶಸ್ಥರಿಗೇ ಅವೆಲ್ಲದರ ಸಪರ್ಯೆಯ ಜವಾಬ್ದಾರಿ ಹೊರಿಸಿ ಸಂತೃಪ್ತಿಯಿಂದ ತೆರಳಿದರು. ರಾಯರ ಮೂಲಬೃಂದಾವನ ತಯಾರಿಸಿ ಉಳಿದ ಶಿಲೆಯಿಂದ ತಯಾರಿಸಲ್ಪಟ್ಟಿದ್ದ ಗುರುರಾಯರ ಆ ಚಲಬೃಂದಾವನವನ್ನು ಶ್ರೀಯೋಗೀಂದ್ರತೀರ್ಥರು ಸ್ವಕರಕಮಲದಿಂದ ಅರ್ಚಿಸಿದ್ದರು. ಮುಂದೆ ಮೂಲತಃ ಚಿತ್ರದುರ್ಗನಿವಾಸಿಗಳಾಗಿದ್ದ ಶ್ರೀಕೃಷ್ಣಾಚಾರ್ಯರು ಅಂದರೆ ಶ್ರೀಸುವ್ರತೀಂದ್ರತೀರ್ಥರು ಇಲ್ಲಿನ ಗುರುರಾಯರ ಸೇವಾಫಲವಾಗಿ ರಾಯರ ಪೀಠವನ್ನೇ ಅಲಂಕರಿಸಿದರು. ಈ ಚಲಬೃಂದಾವನವು ಮುಂದೆ ಶ್ರೀ ಸುಯಮೀಂದ್ರತೀರ್ಥಶ್ರೀಪಾದರ ಕಾಲದಲ್ಲಿ ಸ್ಥಿರಬೃಂದಾವನವಾಗಿ ನೆಲೆಗೊಂಡು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts