More

    ಕಲಿಯುಗದ ಅಮೃತ ಕಲ್ಪರಸ

    ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

    ಜಿಲ್ಲಾ ಭಾರತೀಯ ಕಿಸಾನ್ ಸಂಘ ಮಾರ್ಗದರ್ಶನದಲ್ಲಿ ಕಲ್ಪರಸ ಸಂಗ್ರಹ, ಸಂಸ್ಕರಣೆ, ಮಾರಾಟ, ಉಪ ಉತ್ಪನ್ನ ತಯಾರಿಗೆ ಉಡುಪಿ ಕಲ್ಪರಸ ತೆಂಗು ಮತ್ತು ಸರ್ವ ಸಾಂಬಾರ ಉತ್ಪಾದಕರ ಕಂಪನಿಗೆ (ಉಕಾಸ) ಅಬಕಾರಿ ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ.
    ಮೊದಲ ಹಂತದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ 54 ತೆಂಗು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಕಲ್ಪರಸ ತೆಗೆಯುವ ಅವಕಾಶ ಪಡೆಯಲಿದ್ದಾರೆ. ಪ್ರತಿ ರೈತ ಸದಸ್ಯರು ತಮ್ಮ ತೋಟದ 8 ತೆಂಗಿನ ಮರದಿಂದಷ್ಟೇ ಕಲ್ಪರಸ ಸಂಗ್ರಹಿಸಬಹುದು. ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಆರಂಭವಾಗಲಿರುವ ನೀರಾ ಘಟಕ ರಾಜ್ಯದಲ್ಲಿ ಎರಡನೆಯದು. ಇನ್ನೊಂದು ಘಟಕ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿದೆ.

    ಹಾಲು ಉತ್ಪಾದಕರ ಒಕ್ಕೂಟ ಮಾದರಿಯಲ್ಲಿ ಕನಿಷ್ಠ 25 ಸದಸ್ಯರನ್ನು ಹೊಂದಿರುವ ಗ್ರಾಮಕ್ಕೊಂದು ಸೊಸೈಟಿ ರಚಿಸಿ, ಅಲ್ಲಿಂದಲೇ ಕಲ್ಪರಸ ಮಾರಾಟ, ಬಾಕ್ಸ್, ಐಸ್, ಪ್ಲಾಸ್ಟಿಕ್ ಕವರ್ ನೀಡಿ, ಪ್ರತಿನಿತ್ಯ ಗುಣಮಟ್ಟದ ಕಲ್ಪರಸ ಸಂಗ್ರಹ ಮಾಡಲಾಗುವುದು. ಕಲ್ಪರಸ ತೆಗೆಯುವುದು, ಸಾಗಾಟ, ಮಾರಾಟ ಶೀತಲೀಕರಣ ವ್ಯವಸ್ಥೆಯಲ್ಲೇ ನಡೆಯಲಿದೆ. ರೈತರದ್ದೇ ಉತ್ಪಾದಕ ಕಂಪನಿ ರಚಿಸಿ ಮಾರಾಟ ಮಾಡಲಾಗುತ್ತದೆ. ಕಲ್ಪರಸಕ್ಕೆ ಪಾವತಿಸುವ ಮೌಲ್ಯ ಹಾಗೂ ಕಂಪನಿಯ ಲಾಭದಲ್ಲೂ ರೈತರಿಗೆ ಪಾಲು ಇರುತ್ತದೆ.
    ಬೆಳಗ್ಗೆ ಮತ್ತು ಸಾಯಂಕಾಲ ಒಂದು ಮರದಿಂದ ದಿನಕ್ಕೆ ಕನಿಷ್ಠ 1.5 ಲೀಟರ್, ಗರಿಷ್ಠ 2.5 ಲೀಟರ್ ಕಲ್ಪರಸ ತೆಗೆಯಬಹುದು. ಉತ್ತಮ ನೀರಾವರಿ, ಆರೋಗ್ಯಯುತ ಮರದಿಂದ ವರ್ಷಕ್ಕೆ ಕನಿಷ್ಠ 500 ಲೀಟರ್ ಕಲ್ಪರಸ ನಿರೀಕ್ಷಿಸಬಹುದು. ಗರಿಷ್ಠ 800 ಲೀಟರ್‌ವರೆಗೂ ಸಾಧ್ಯವಿದೆ. ರೈತರಿಗೆ ಕಲ್ಪರಸ ತೆಗೆಯಲು ತರಬೇತಿ ನೀಡಲಾಗುತ್ತದೆ. ರೈತರು ಸಂಗ್ರಹಣಾ ಬಾಕ್ಸ್, ಸಾಧನ ಸುರಕ್ಷತೆಗೆ ಠೇವಣಿ ಇಡಬೇಕು. ಮರಕ್ಕೆ ಏಣಿ ಅಥವಾ ಟೈರ್ ಅಳವಡಿಕೆ ವೆಚ್ಚವನ್ನು ರೈತರು ಭರಿಸಬೇಕು. ರೈತರಿಗೆ ಕಲ್ಪರಸ ತೆಗೆಯಲು ಆಗದಿದ್ದರೆ ಕಂಪನಿಯೇ ಟ್ಯಾಪರ್ ನೀಡುತ್ತದೆ.

    ಪೋಷಕಾಂಶದ ಕಣಜ
    ಅಮಲುಮುಕ್ತ, ರಾಸಾಯನಿಕ ಮುಕ್ತ ನೈಸರ್ಗಿಕ ಪಾನೀಯ ಕಲ್ಪರಸದಲ್ಲಿ ಪೋಷಕಾಂಶದ ಕಣಜವೇ ಇದೆ ಎಂಬುದನ್ನು ಕಾಸರಗೋಡು ಸಿಪಿಸಿಆರ್‌ಐ ವೈಜ್ಞಾನಿಕ ಸಂಶೋಧನೆಯಲ್ಲಿ ಕಂಡುಕೊಂಡಿದೆ. ಇದು ದೈಹಿಕ ಶಕ್ತಿ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ. ಅಮಿನೋ ಆಮ್ಲ ಇರುವುದರಿಂದ ಹೆಚ್ಚಿನ ಪ್ರೊಟೀನ್ ಉತ್ಪಾದನೆ, ಮೂತ್ರಕೋಶದ ಕಲ್ಲಿನ ಸಮಸ್ಯೆ ನೀಗಿಸಿ ಆರೋಗ್ಯ ಕಾಪಾಡುವ ಶಕ್ತಿ, ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಮಲಬದ್ಧತೆ ದೂರ ಮಾಡುತ್ತದೆ. ವಿಟಮಿನ್ ಎ, ಬಿ ಕಾಂಪ್ಲೆಕ್ಸ್ ಮತ್ತು ವಿಟಮಿನ್ ಸಿ ಹೊಂದಿದ ಏಕೈಕ ಪಾನೀಯ. ಸಕ್ಕರೆ ಕಾಯಿಲೆ ಇರುವವರೂ ಸೇವಿಸಬಹುದು. ಕಲ್ಪರಸದಲ್ಲಿ ಅತಿ ಕಡಿಮೆ ಗ್ಲೈಸಮಿಕ್ ಇಂಡೆಕ್ಸ್ (35ಇಎಂ) ಇದೆ. ಇದು ರಾಗಿಗಿಂತ ಕಡಿಮೆ ಇರುವುದರಿಂದ ಅಗತ್ಯ ಪೋಷಕಾಂಶವನ್ನು ದೇಹಕ್ಕೆ ಒದಗಿಸುತ್ತದೆ. ಹೈ ಕೊಲೆಸ್ಟ್ರಾಲ್ ನಿಯಂತ್ರಿಸಿ, ಹೃದಯದ ಆರೋಗ್ಯ ಕಾಪಾಡುತ್ತದೆ. ಮೂಳೆಗಳ ಆರೋಗ್ಯಕ್ಕೆ ಉತ್ತಮ. ಆಸ್ಟಿಯೋಪೋರೋಸಿಸ್ ತಡೆಗಟ್ಟುವ ಶಕ್ತಿ ಹೊಂದಿದೆ. ದೇಹದ ವಿಷ ಪದಾರ್ಥ ಮತ್ತು ಯೂರಿಕ್ ಆಸಿಡ್ ಹೊರಹಾಕುವ ಸಾಮರ್ಥ್ಯವಿದೆ. ಕ್ಯಾನ್ಸರ್ ತಡೆಗಟ್ಟುವ ಶಕ್ತಿಯೂ ಇದೆ. ಕಣ್ಣಿನ ಹಾಗೂ ಚರ್ಮದ ಆರೋಗ್ಯಕ್ಕೆ ಉತ್ತಮ ಪೇಯ. ಕರುಳು ಸಂಬಂಧಿತ ಕಾಯಿಲೆ ಗುಣಪಡಿಸುವ ಶಕ್ತಿಯನ್ನೂ ಹೊಂದಿದೆ.

    ಪ್ರತಿ ಷೇರುದಾರ ಕುಟುಂಬ 8 ಮರಗಳಿಂದ ಕಲ್ಪರಸ ತೆಗೆದು ವಾರ್ಷಿಕ 1 ಲಕ್ಷ ಹೆಚ್ಚುವರಿ ಆದಾಯ ಪಡೆಯಬಹುದು. ಮಂಗಗಳ ಕಾಟ, ನುಸಿ ರೋಗ ಮೊದಲಾದ ಕಾರಣಗಳಿಂದ ತೆಂಗಿನ ಕಾಯಿ ಸಿಗದ ಈ ಕಾಲಘಟ್ಟದಲ್ಲಿ ಕಲ್ಪರಸ ರೈತರಲ್ಲಿ ಹೊಸ ನಂಬಿಕೆ ಮೂಡಿಸಿದೆ. ಯುವಕರಿಗೆ ಉದ್ಯೋಗ ಸಿಗುತ್ತದೆ.
    ಜಪ್ತಿ ಸತ್ಯನಾರಾಯಣ ಉಡುಪ ಬಲಮುರಿ, ಪ್ರಧಾನ ಕಾರ‌್ಯದರ್ಶಿ, ಭಾಕಿಸಂ, ಉಡುಪಿ

    ನುಸಿ, ಕಪ್ಪುತಲೆ ಹುಳಬಾಧೆಯಿಂದ ಇಳುವರಿ ಕುಸಿದಿದೆ. ಬೆಳಗಾರರು ಕಷ್ಟದಲ್ಲಿದ್ದಾರೆ. ಕಲ್ಪರಸ ತೆಂಗು ಕೃಷಿಕರಿಗೆ ವರವಾಗಲಿದೆ. ಕಲ್ಪರಸ ತೆಗೆಯುವುದರಿಂದ ತೆಂಗಿನ ಇಳುವರಿ ಕಡಿಮೆಯಾಗಿ, ಮಾರುಕಟ್ಟೆಯಲ್ಲಿ ಕಾಯಿಗೆ ಒಳ್ಳೆಯ ಧಾರಣೆ ಬರುವ ಸಾಧ್ಯತೆ ಇದೆ.
    ರಮೇಶ್ ಆಚಾರ್, ಅಧ್ಯಕ್ಷ, ಭಾಕಿಸಂ, ಹೊಸಾಡು

    35 ವರ್ಷದಿಂದ ನೀರಾ ಇಳಿಸುವ ಮೂಲಕ ಜೀವನ ಕಟ್ಟಿಕೊಂಡಿದ್ದೇನೆ. ಕಲ್ಪರಸ ಮಾರುಕಟ್ಟೆಗೆ ಬಿಡುಗಡೆ ಆಗುತ್ತಿರುವುದು ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ವಿಶ್ವಾಸವಿದೆ. ನೀರಾ ಟ್ಯಾಪರ್‌ಗಳಿಗೆ ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಕೆಲಸ. ಸಮಯದ ಹೊಂದಾಣಿಕೆ ಮೂಲಕ ಬೇರೆ ಕೆಲಸ ಮಾಡುತ್ತ, ಆರ್ಥಿಕ ಸ್ಥಿತಿ ಉತ್ತಮಪಡಿಸಿಕೊಳ್ಳಬಹುದು.
    ಕೃಷ್ಣ ಪೂಜಾರಿ, ನೀರಾ ಇಳಿಸುವ ತರಬೇತುದಾರ, ಸಾಸ್ತಾನ, ಪಾಂಡೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts