More

    ಕಾಳಾವರ ದೇವಳದಲ್ಲಿನ ಶಾಸನ ಮರುಪರಿಶೀಲನೆ

    ಕುಂದಾಪುರ: ಕಾಳಾವರ ಶ್ರೀ ಮಹಾಲಿಂಗೇಶ್ವರ ಮತ್ತು ಸುಬ್ರಹ್ಮಣ್ಯ ದೇವಾಲಯದಲ್ಲಿ ಎರಡು ವರ್ಷದ ಮೊದಲೇ ಇತಿಹಾಸ ತಜ್ಞರು ಪತ್ತೆ ಮಾಡಿ ಪ್ರಕಟಿಸಲಾದ ವಿಜಯನಗರದ ದೊರೆ ಎರಡನೇ ದೇವರಾಯನ ಶಾಸನವನ್ನು ಮರು ಅಧ್ಯಯನ ಮಾಡುವುದರ ಮೂಲಕ ಅದರಲ್ಲಿನ ಮಹತ್ವದ ಅಂಶಗಳನ್ನು ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಬೆಳಕಿಗೆ ತಂದಿದ್ದಾರೆ.

    37 ಸಾಲುಗಳನ್ನು ಹೊಂದಿರುವ ಈ ಶಾಸನವನ್ನು ಪ್ರಸ್ತುತ ದೇವಾಲಯದ ಪ್ರಾಕಾರದ ಗೋಡೆಯ ಬಳಿ ನಿಲ್ಲಿಸಲಾಗಿದೆ. ಶಾಸನವು ಎರಡನೇ ದೇವರಾಯನನ್ನು ಆತನ ಬಿರುದಾವಳಿಗಳ ಮೂಲಕ ಸಂಬೋಧಿಸಿದ್ದು, ಈತನ ಆಳ್ವಿಕೆಯ ಅವಧಿಯಲ್ಲಿ ಬಾರಕೂರು ಪ್ರದೇಶವನ್ನು ಚಂಡರಸ ಒಡೆಯ ಆಳ್ವಿಕೆ ಮಾಡುತ್ತಿದ್ದ ಎಂದು ಶಾಸನ ಅಧ್ಯಯನ ಮೂಲಕ ತಿಳಿದುಬರುತ್ತದೆ.

    ಶಾಸನವನ್ನು ಅಧ್ಯಯನ ದೃಷ್ಟಿಯಿಂದ ಮರು ಪರಿಶೀಲನೆಗೆ ಒಳಪಡಿಸಿದಾಗ ಶಕವರುಷ 1361ನೇ ವರ್ತಮಾನ ಸಿದ್ಧಾರ್ಥಿ ಸಂವತ್ಸರದ ಕಾರ್ತಿಕ ಸು 5 ಲೂ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಈ ಮೊದಲು ಅಧ್ಯಯನ ಮಾಡಿದ ಇಬ್ಬರು ವಿದ್ವಾಂಸರಲ್ಲಿ ಓರ್ವರು ಶಾಸನದ ಕಾಲವನ್ನು ಶಕವರುಷ 1360ನೆಯ ವರ್ತಮಾನ ಸಿದ್ಧಾರ್ಥಿ ಸಂವತ್ಸರದ ಕಾರ್ತಿಕ ಸು 5 ಲೂ ಎಂದು ತಪ್ಪಾಗಿ ಓದಿರುತ್ತಾರೆ.(ಶಾಸನದ ಕಾಲ ಶಕವರುಷ 1360 ಎಂದಾದರೆ ಅದು ಕಾಳಾಯುಕ್ತಿ ಸಂವತ್ಸರಕ್ಕೆ ಸರಿ ಹೊಂದುತ್ತದೆ) ಹಾಗೆಯೇ ಶಾಸನದಲ್ಲಿ ತೆಲುಗು ಪದ ಬಳಕೆ ಮಾಡಲಾಗಿದೆ ಎಂದು ಹೇಳಿರುತ್ತಾರೆ ಮತ್ತು ಆ ತೆಲುಗು ಪದಗಳು ಯಾವುದೆಂದು ಹೇಳಿರುವುದಿಲ್ಲ. ಶಾಸನವನ್ನು ಮರುಪರಿಶೀಲನೆ ಮಾಡಿದ ಸಂದರ್ಭ ಶಾಸನದಲ್ಲಿ ಯಾವುದೇ ತೆಲುಗು ಪದಗಳು ಕಂಡುಬಂದಿಲ್ಲ. ಶಾಸನ 14ನೇ ಶತಮಾನದ ಕನ್ನಡ ಲಿಪಿಯಲ್ಲಿದ್ದು, ಸಂಸ್ಕೃತ ಹಾಗೂ ಕನ್ನಡ ಭಾಷೆಯನ್ನು ಒಳಗೊಂಡಿದೆ ಎಂದು ಮರು ಪರಿಶೀಲನೆಯಲ್ಲಿ ತಿಳಿದುಬಂದಿದೆ.

    ಇನ್ನೋರ್ವ ವಿದ್ವಾಂಸರು ಶಾಸನದಲ್ಲಿರುವ ಜಯಾಭ್ಯುದಯ ಎಂಬ ಪದವನ್ನು ಶಾಲಿವಾಹನ ಎಂದೂ ಮತ್ತು ಸು 5 ಲೂ ಎಂಬುದನ್ನು ಶುದ್ಧ ಪಂಚಮಿ ಎಂದು ತಪ್ಪಾಗಿ ಓದಿರುತ್ತಾರೆ. ಶಾಸನದಲ್ಲಿ ‘ವರುಷಂಪ್ರತಿ ಅರಮನೆಗೆ ತೆರುವ ಸಿದ್ದಾಯ ಗ 27॥ ಯಿಪ್ಪತ್ತಯೆಳು ಹೊನ್ನು ಆರು ಹಣ’ ಎಂಬ ಉಲ್ಲೇಖವಿದ್ದು, ವಿದ್ವಾಂಸರು ಈ ಮಹತ್ವದ ವಿಷಯವನ್ನು ಎಲ್ಲೂ ಪ್ರಸ್ತಾಪಿಸಿಲ್ಲ. ಒಟ್ಟಿನಲ್ಲಿ ಈ ಶಾಸನದ ಮರು ಅಧ್ಯಯನವು ಶಾಸನದ ಕಾಲಮಾನ ಹಾಗೂ ಉಲ್ಲೇಖಿತ ನಾಣ್ಯಗಳ ಬಗ್ಗೆ ಹೊಸ ಬೆಳಕು ಚೆಲ್ಲಿದೆ ಎಂದು ಸಂಶೋಧನಾರ್ಥಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts