More

    ಕಳವಾಡಿ ದೇವಸ್ಥಾನ ಪುನಃ ಪ್ರತಿಷ್ಠಾಪನೆ

    ಬೈಂದೂರು: ಬೈಂದೂರು ತಾಲೂಕಿನ ಪೌರಾಣಿಕ ಪ್ರಸಿದ್ಧ ದೇವಸ್ಥಾನ ಕಳವಾಡಿ ಶ್ರೀ ಈಶ್ವರ ಮಾರಿಕಾಂಬಾ ದೇವಸ್ಥಾನ ಜೀರ್ಣೋದ್ಧಾರಗೊಂಡು ಲೋಕಾರ್ಪಣೆ ಸಿದ್ಧತೆಯಲ್ಲಿದೆ. ಮಾರ್ಚ್ 27ರಿಂದ ಏಪ್ರಿಲ್ 4ರ ತನಕ ಶಿಲಾದೇಗುಲ ಸಮರ್ಪಣೆ, ಪುನಃಪ್ರತಿಷ್ಠಾಪನೆ, ಅಷ್ಟಬಂಧ, ಸಹಸ್ರಕಲಶ, ಬ್ರಹ್ಮಕುಂಬಾಭಿಷೇಕ, ಮಹಾಅನ್ನಸಂತರ್ಪಣೆ ಮೊದಲಾದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

    ಬೈಂದೂರಿನಿಂದ ಪೂರ್ವಕ್ಕೆ ಸುಮಾರು 3 ಕಿ.ಮೀ. ಅಂತರದಲ್ಲಿರುವ ಈ ದೇವಸ್ಥಾನ ಪೌರಾಣಿಕ ಹಿನ್ನೆಲೆ ಹೊಂದಿದೆ. ಸುಮಾರು 850 ವರ್ಷಗಳ ಹಿಂದೆ ಋಷಿ ಮುನಿಗಳ ತಪಸ್ಸಿಗೆ ಮುಖ್ಯ ಸ್ವಯಂಭೂ ರೂಪದಲ್ಲಿ ಇರುವ ಮಹೇಶ್ವರ ದಿವ್ಯ ಸನ್ನಿಧಿಗೆ ಕೊಲ್ಲೂರು ಶ್ರೀ ಮೂಕಾಂಬಿಕೆ ದಕ್ಷಿಣಕ್ಕೆ ಸಂಚಾರ ಮಾಡುವ ಸಂದಭರ್ ಈ ಸ್ಥಳದಲ್ಲಿ ನಿಂತು ಭಕ್ತರನ್ನು ಅನುಗ್ರಹಿಸಿದ್ದರಂತೆ. ಸ್ವಯಂಭೂ ಲಿಂಗದಲ್ಲಿ ಸ್ವರ್ಣರೇಖೆ ಇದೆ. ದೇವರ ದಿವ್ಯ ಪ್ರಕಾಶದ ದೃಷ್ಟಿ ದೊರೆತಲ್ಲಿ ಅಭಿವೃದ್ಧಿಗೆ ನಾಂದಿಯಾಗುವುದು ಎಂಬ ಪ್ರತೀತಿ ಕೂಡ ಇದೆ. ಪ್ರಧಾನ ಶಕ್ತಿಯಾಗಿ ಈಶ್ವರ, ಮಾರಿಕಾಂಬಾ, ವಿಷ್ಣು, ಮಹಾಕಾಳಿ, ವೀರಭದ್ರ, ಜಟ್ಟಿಗ, ಹ್ಯಾಗುಳಿ, ಭೂತರಾಜ, ಚೌಡೇಶ್ವರಿ, ನಾಗ, ಯಕ್ಷಿ ಸಾನ್ನಿಧ್ಯಗಳಿವೆ. ಪೊದುವಾಳ್‌ರಿಂದ ಅಷ್ಟಮಂಗಲ ಪ್ರಶ್ನೆ ಇಟ್ಟು ಜೀರ್ಣೋದ್ಧಾರ ಕಾರ್ಯ ಆರಂಭಿಸಲಾಗಿದೆ.

    ವಿವಿಧೆಡೆಯಿಂದ ಭಕ್ತರ ಆಗಮನ: ಕಳವಾಡಿ ಗ್ರಾಮದ ಸುಮನಾವತಿ ನದಿ ತಟದಲ್ಲಿರುವ ಈ ದೇವಾಲಯ ಅತಿ ಪ್ರಾಚೀನವಾದುದು. ಕ್ಷೇತ್ರವನ್ನು ನಂಬಿದ ಸಾವಿರಾರು ಕುಟುಂಬಗಳಿವೆ. ಉಡುಪಿ, ಮಂಗಳೂರು, ಉತ್ತರಕನ್ನಡ, ಹುಬ್ಬಳ್ಳಿ, ಶಿವಮೊಗ್ಗ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ರಾಜ್ಯದ ಇತರ ಭಾಗದಲ್ಲೂ ಈ ಕ್ಷೇತ್ರದ ಭಕ್ತರಿದ್ದಾರೆ. ಮಕರ ಸಂಕ್ರಮಣದಂದು ವಾರ್ಷಿಕ ಗೆಂಡಸೇವೆ, ಮರುದಿನ ವಾರ್ಷಿಕ ಜಾತ್ರೆ, ತುಲಾಭಾರ, ಮಡೆಸ್ನಾನ ನಡೆಯುತ್ತದೆ. ಅಲ್ಲದೆ ಇತರೆ ದಿನ ವಿಶೇಷ ಅಲಂಕಾರ ಪೂಜೆ, ಹಾಲು, ಪರಮಾನ್ನ ಸೇವೆ, ರಂಗಪೂಜೆ, ಭಜನೆ ನಿರಂತರ ನಡೆಯುತ್ತದೆ.

    ಕಾಮಗಾರಿ ಅಂತಿಮ ಹಂತ: ದೇವಾಲಯ ಶಿಥಿಲಗೊಂಡಿರುವ ಕಾರಣ ಭಕ್ತರು, ದಾನಿಗಳು, ಸ್ಥಳೀಯರು ಸೇರಿ ಐದು ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕೈಗೊಂಡಿದ್ದಾರೆ. ಬಹುತೇಕ ಕಾಮಗಾರಿ ಅಂತಿಮ ಹಂತದಲ್ಲಿದೆ. ಈಶ್ವರ, ಮಾರಿಕಾಂಬಾ, ವೆಂಕಟರಮಣ, ವೀರಭದ್ರ, ಗಣಪತಿ ದೇವರ ಗುಡಿಗಳನ್ನು ಶಿಲಾಮಯವಾಗಿಸಲಾಗಿದೆ. ವಿಶಾಲ ಸುತ್ತುಪೌಳಿ, ನಂದಿ ಮಂಟಪ, ಪರಿವಾರ ದೇವರ ಆಲಯ, ಪ್ರಭಾರ ದ್ವಾರ -ಉಪದ್ವಾರಗಳಲ್ಲಿ ಶಿಲ್ಪಿಗಳ ಅದ್ಭುತ ಕೈಚಳಕ ಗಮನ ಸೆಳೆಯುತ್ತದೆ. ಕಲಾ ನೈಪುಣ್ಯ ಪಾರಂಪರಿಕ ಶೈಲಿ, ತಾಮ್ರದ ಹೊದಿಕೆ, ಪೌರಾಣಿಕ ಸೊಬಗು ಮುಂತಾದವುಗಳು ದೈವಸ್ಥಾನಕ್ಕೆ ಮೆರುಗು ನೀಡುತ್ತಿದೆ. ವಿವಿಧ ಸಮಿತಿ ರಚನೆ ಮಾಡಿ ಪುನಃಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಊರಿನ ಎಲ್ಲ ಹಿರಿಯರ ಮಾರ್ಗದರ್ಶನ, ಯುವಕರ ಸ್ಪೂರ್ತಿ, ದಾನಿಗಳ ನೆರವಿನಿಂದ ಕಾರ್ಯ ನಡೆಯಲಿದೆ ಎನ್ನುವುದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕಳವಾಡಿ ದಿವಾಕರ ಹೆಗ್ಡೆ ಅಭಿಪ್ರಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts