More

    ಕರೊನಾ ಹೆಮ್ಮಾರಿ ತಡೆಗೆ ಊರಬಾಗಿಲಿಗೆ ಬೇಲಿ

    ಕಲಾದಗಿ: ಗ್ರಾಮದಲ್ಲಿ ಕರೊನಾ ಸೋಂಕಿತರು ಪ್ರವೇಶಿಸಿದಂತೆ ಮುಖಂಡರು ಹಾಗೂ ಯುವಕರು ಗ್ರಾಮದ ಪ್ರವೇಶ ಮಾರ್ಗದಲ್ಲಿ ಮುಳ್ಳುಕಂಟಿ ಹಚ್ಚುವ ಮೂಲಕ ಊರ ರಕ್ಷಣೆಗೆ ಮುಂದಾಗಿದ್ದಾರೆ. ಖಜ್ಜಿಡೋಣಿ ಗ್ರಾಮ ರಾಯಚೂರು-ಬೆಳಗಾವಿ ಮುಖ್ಯ ರಸ್ತೆಯಲ್ಲಿರುವುದರಿಂದ ವ್ಯವಹಾರಕ್ಕೆಂದು ಪರ ಊರಿನವರು ಗ್ರಾಮಕ್ಕೆ ಬಂದು ಹೋಗುತ್ತಾರೆ. ಹೊರಗಿನವರು ಪ್ರವೇಶಿಸದಂತೆ ಹಾಗೂ ತಮ್ಮೂರಿನವರು ಹೊರಗೆ ಹೋಗುವಾಗ ಕಡ್ಡಾಯವಾಗಿ ಮುಖಗವಸುಗಳನ್ನು ಹಾಕಿಕೊಳ್ಳುವಂತೆ ಒತ್ತಾಯಿಸಲಾಗುತ್ತಿದೆ.

    ಮುಖಗವಸು ಕಡ್ಡಾಯ
    ಊರಿನಲ್ಲಿರುವವರಿಗೆ ಹಾಗೂ ಊರಿಗೆ ಬಂದು ಹೋಗುವವರಿಗೆ ಮುಖಗವಸನ್ನು ಕಡ್ಡಾಯ ಮಾಡಲಾಗಿದೆ. ಮುಖಗವಸಿಲ್ಲದೆ ಯಾರೊಬ್ಬರಿಗೆ ಊರೊಳಗೆ ಪ್ರವೇಶವಿಲ್ಲ. ಅದನ್ನು ಊರ ಪ್ರವೇಶದಲ್ಲಿಯೇ ಗಮನಿಸಲು ಹಾಗೂ ಊರೊಳಗೆ ಹೋಗುವವರ ಹಾಗೂ ಹೊರಬರುವವರ ಹೆಸರು ವಿವರಗಳನ್ನು ದಾಖಲಿಸಿಕೊಳ್ಳಲು ಪಂಚಾಯಿತಿಯವರು ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ.

    ಸ್ಕ್ರೀನಿಂಗ್ ನಡೆಸಿದರು
    ಗ್ರಾಮದಲ್ಲಿರುವ ಹೊರ ಜಿಲ್ಲೆ, ರಾಜ್ಯಗಳಿಂದ ಬಂದ ಅನೇಕರಿಗೆ ಆರೋಗ್ಯದ ಸ್ಕ್ರೀನಿಂಗ್ ಮಾಡಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ಕರಿಗೌಡರ ಮತ್ತವರ ಸಿಬ್ಬಂದಿ 14 ದಿನ ಎಲ್ಲರೂ ಮನೆಯೊಳಗೆ ಇರಲು ಸೂಚಿಸಿದರು.

    ಗ್ರಾಮದ ಮುಖಂಡರಾದ ತಿಮ್ಮಣ್ಣ ಬಟಕುರ್ಕಿ, ಬಿ.ವಿ. ಬಾಲಚಂದ್ರ, ಎ.ಎಸ್. ಪಾಟೀಲ, ಸುಭಾಷ ಮುರುನಾಳ ಮತ್ತಿತರರು ತಾಪಂ ಇಒ ಎನ್.ವೈ. ಬಸರಿಗಿಡದ, ಕಂದಾಯ ವೃತ್ತ ನಿರೀಕ್ಷಕ ಆರ್.ಆರ್. ಕುಲಕರ್ಣಿ, ಪಿಡಿಒ ಸುನೀತಾ ಅಂಕೋಲೆ, ಗ್ರಾಮಲೆಕ್ಕಾಧಿಕಾರಿ ಶ್ರೀಕಾಂತ ಪಾಟೀಲ ಮತ್ತಿತರರ ಸಮ್ಮಖದಲ್ಲಿ ಊರ ಪ್ರವೇಶ ಬಂದ್ ಮಾಡಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು, ಊರಿನ ಕಿರಾಣಿ ಅಂಗಡಿಗಳ ಮುಂದೆ ಗ್ರಾಹಕರು ಅಂತರ ಕಾಯ್ದುಕೊಳ್ಳಲು ಚೌಕ್‌ಗಳನ್ನು ಹಾಕಲು ಮುಂದಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts