More

    ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸಿಗಂದೂರು ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

    ಶಿವಮೊಗ್ಗ: ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಸರ್ಕಾರ ರಚನೆ ಮಾಡಿರುವ ಮೇಲ್ವಿಚಾರಣಾ ಮತ್ತು ಸಲಹಾ ಸಮಿತಿ ಆದೇಶವನ್ನು ಹಿಂಪಡೆದು ಯಥಾ ಸ್ಥಿತಿ ಕಾಯ್ದುಕೊಳ್ಳುವ ಸಂಬಂಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಶ್ರೀ ಸಿಗಂದೂರು ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ ಎಂದು ಸಮಿತಿ ಉಪಾಧ್ಯಕ್ಷ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
    ಸಮಿತಿಯಲ್ಲಿ ಇಬ್ಬರು ಕಾರ್ಯಾಧ್ಯಕ್ಷರು, 17 ಉಪಾಧ್ಯಕ್ಷರು, 22 ಸಂಚಾಲಕರು, 12 ಜಂಟಿ ಕಾರ್ಯದರ್ಶಿಗಳು, ತಲಾ 9 ಸಂಘಟನಾ ಕಾರ್ಯದರ್ಶಿಗಳು, ವಿಶೇಷ ಆಹ್ವಾನಿತರಿದ್ದು, ತಲಾ ಒಬ್ಬರು ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿ 97 ಪದಾಧಿಕಾರಿಗಳು ಸಮಿತಿಯಲ್ಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರ್‌ಎಸ್‌ಎಸ್ ಮುಖಂಡ ಸತ್ಯಜಿತ್ ಸುರತ್ಕಲ್ ಕಾರ್ಯಾಧ್ಯಕ್ಷರಾಗಿ, ಶಾಸಕರಾದ ಕುಮಾರ್ ಬಂಗಾರಪ್ಪ, ಹರತಾಳ ಹಾಲಪ್ಪ, ಎಂಎಲ್‌ಸಿಗಳಾದ ಬಿ.ಕೆ.ಹರಿಪ್ರಸಾದ್, ಆರ್.ಪ್ರಸನ್ನಕುಮಾರ್ ಒಳಗೊಂಡಂತೆ ಸಮಿತಿಯಲ್ಲಿ ಎಲ್ಲ ಸಮಾಜದವರಿದ್ದಾರೆ ಎಂದು ಹೇಳಿದರು.
    ಆದೇಶ ಹಿಂಪಡೆಯದಿದ್ದರೆ ಹೋರಾಟ ನಿಶ್ಚಿತ:
    ಮೇಲ್ವಿಚಾರಣಾ ಮತ್ತು ಸಲಹಾ ಸಮಿತಿಯನ್ನು ತಕ್ಷಣವೇ ಹಿಂಪಡೆದು ದೇವಸ್ಥಾನದ ವಿಚಾರದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಎಲ್ಲ ಸಮಾಜದವರು ಬೀದಿಗಳಿದು ಹೋರಾಟ ಮಾಡಲಾಗುವುದು. ಮೂರ್ನಾಲ್ಕು ದಿನದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಬೇಳೂರು ಹೇಳಿದರು.
    ಸಿಗಂದೂರು ವಿಚಾರದಲ್ಲಿ ಸರ್ಕಾರ ಏಕೆ ಇಷ್ಟೊಂದು ಹಠ ಮಾಡುತ್ತಿದೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ. ಸಣ್ಣ ವಿಚಾರವನ್ನು ದೊಡ್ಡದು ಮಾಡುತ್ತಿರುವ ಸರ್ಕಾರ ಉದ್ದೇಶವೇನು ಎಂಬುದು ತಿಳಿಯುತ್ತಿಲ್ಲ ಎಂದರು.
    ಅರಣ್ಯ ಜಾಗ ಒತ್ತುವರಿ ಸಂಬಂಧ ಸಾರ್ವಜನಿಕ ಹಿತಾಸಕ್ತಿ ವಿರುದ್ಧ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು ಕಾನೂನು ಹೋರಾಟ ಮಾಡುವರು. ಸಮಿತಿಯದ್ದೇನಿದ್ದರೂ ದೇವಸ್ಥಾನ ಉಳಿಸುವಂತೆ ಹೋರಾಟ ಮಾಡಲಾಗುವುದು ಎಂದು ಹೇಳಿದರು.
    ಸಿಗಂದೂರಿನಲ್ಲೇ ಹಲವು ಬಾರಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಿದ್ದಾರೆ. ಸರ್ಕಾರ ಅಲ್ಲಿನ ಯಾತ್ರಿ ನಿವಾಸಕ್ಕೂ ಹಣ ನೀಡಿದೆ. 8-9 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಿದೆ. ಆದರೆ ಇದೀಗ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆ ಜಾಗ ಒತ್ತುವರಿ ಆಗಿದೆ ಎಂದು ವರದಿ ಕೊಟ್ಟಿದ್ದಾರೆ. ಆಗಾದರೆ ಇಷ್ಟು ದಿನ ಡಿಸಿ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
    ಸಮಿತಿ ಉಪಾಧ್ಯಕ್ಷರಾದ ಕೆ.ಬಿ.ಪ್ರಸನ್ನಕುಮಾರ್, ಎಂ.ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ಆರ್.ಶ್ರೀಧರ್ ಹುಲ್ತಿಕೊಪ್ಪ, ಸಂಚಾಲಕರಾದ ಕೆ.ಪಿ.ಶ್ರೀಪಾಲ್, ಎನ್.ಮಂಜುನಾಥ್, ಎನ್.ರವಿಕುಮಾರ್, ಗೀತಾಂಜಲಿ ದತ್ತಾತ್ರೇಯ, ಜಂಟಿ ಕಾರ್ಯದರ್ಶಿ ಜಿ.ಡಿ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts