More

    ಇಳೆ ಎಂಬ ಆಲೆಮನೆ…

    ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ |

    ಬಚ್ಚಿಡುವುದದನು ಜೀವಿತೆಯ ಮಾಯಿಕತೆ ||

    ಇಕ್ಷುವೊಲು ಜೀವ; ಗಾಣದವೊಲ್ ಜಗನ್ಮಾಯೆ|

    ನಿಚ್ಚವಿಳೆಯಾಲೆಮನೆ – ಮಂಕುತಿಮ್ಮ ||

    ಇಳೆ ಎಂಬ ಆಲೆಮನೆ...‘ಸತ್, ಚಿತ್, ಆನಂದವೇ ಆತ್ಮದ ಸ್ವಭಾವ ಸಹಜವಾದ ಗುಣಸತ್ತ್ವ. ಇದನ್ನು ಜೀವನದ ಮಾಯೆ ಬಚ್ಚಿಡುತ್ತದೆ. ಜೀವವು ಕಬ್ಬಿನಂತೆ, ಜಗತ್ತಿನ ಮಾಯೆ ಗಾಣದಂತೆ. ಇಳೆ ನಿಶ್ಚಯವಾಗಿ ಆಲೆಮನೆ’ ಎನ್ನುತ್ತದೆ ಈ ಕಗ್ಗ.

    ಅವಿನಾಶಿಯೂ, ಅವ್ಯಕ್ತನೂ, ಅನಂತನೂ ಆಗಿರುವ ಆತ್ಮನು ಜೀವದೆಶೆ ಪಡೆದು ಇಹದ ಬಾಳುವೆಗೆ ಇಳಿಯುತ್ತಾನೆ. ಆತನ ಲಕ್ಷ್ಯವು ಪರಮಾತ್ಮನನ್ನು ಸೇರುವುದೇ ಆಗಿದೆ. ಉಡುಪಿನಂತೆ ಆತ ಶರೀರವನ್ನು ಧರಿಸಿದ್ದಾನೆ. ಅದು ಆತ್ಮನ ಪ್ರಯಾಣಕ್ಕೆ ಮಾಧ್ಯಮವಾಗಿದೆ. ದೇಹವು ನಾಶವಾಗುತ್ತದೆ, ಆದರೆ ಆತ್ಮನಿಗೆ ಇದ್ಯಾವುದೂ ಇಲ್ಲ. ಆತ್ಮದ ಬಗ್ಗೆ ಅರಿವಿಲ್ಲದ ವ್ಯಕ್ತಿಯು ತನ್ನನ್ನು ಶರೀರದ ಮೂಲಕವೇ ಗುರುತಿಸುತ್ತಾನೆ. ಆದ್ದರಿಂದಲೇ ಬದುಕಿನಲ್ಲಿ ಇನ್ನಿಲ್ಲದಷ್ಟು ನೋವು, ಸಂಕಟಗಳನ್ನು ಅನುಭವಿಸಬೇಕಾಗುತ್ತದೆ.

    ಕಾಮ, ಕ್ರೋಧಾದಿಗಳು ಅವನನ್ನು ಆಳುತ್ತವೆ. ಮನುಷ್ಯನ ಈ ಅವಸ್ಥೆಗೆ ಕಾರಣ ಜಗತ್ತಿನ ಮಾಯೆ. ಮಾಯೆಯಿಂದ ಬುದ್ಧಿಗೆ ಮಂಕು ಕವಿದು, ಮನಸ್ಸು ಪರವಶವಾಗಿ ನಾನಾ ಕರ್ಮಗಳನ್ನು ಮಾಡಬೇಕಾಗುತ್ತದೆ. ಇವುಗಳ ಫಲವಾಗಿ ಮನುಷ್ಯನು ತನ್ನ ನಿಜಸ್ವರೂಪವನ್ನು ಮರೆತು ಕ್ಷಣಿಕ ಸುಖ-ಸಂತೋಷಗಳನ್ನು ಪಡೆಯುವುದೇ ಜೀವನದ ಸಾಧನೆ ಎಂದುಕೊಳ್ಳುತ್ತಾನೆ. ಮನುಷ್ಯನಲ್ಲಿರುವ ಭ್ರಮಾಧೀನ ಸ್ಥಿತಿಯಿಂದಾಗಿ ಆತ್ಮಶಕ್ತಿ ಕುಂದುತ್ತದೆ.

    ಸರೋವರದಲ್ಲಿ ಪ್ರತಿಫಲಿತವಾಗುವ ಸೂರ್ಯನ ಪ್ರತಿಬಿಂಬ ಅಲೆಯ ಚಲನಕ್ಕೆ ಅಲುಗಿದಂತೆ ಭಾಸವಾಗಬಹುದು. ಹಾಗೆಂದು ಸೂರ್ಯನೇನೂ ಕಂಪಿಸಿರುವುದಿಲ್ಲ. ಹಾಗೆಯೇ ಲೋಕಜೀವನದ ಸೊಗಸು, ಸುಖಗಳು ಆತ್ಮನಿಗೆ ಬಾಧಕವಲ್ಲ.

    ಆತ್ಮನು ಸತ್, ಚಿತ್, ಆನಂದ ಸ್ವರೂಪಿಯಾಗಿದ್ದಾನೆ. ಯಾವುದು ಶಾಶ್ವತವಾದದ್ದೋ ಅದು ಒಳ್ಳೆಯದು, ಅದುವೇ ಭಗವಂತ, ಅಂದರೆ ಸತ್. ಚಿತ್ ಎಂದರೆ ಜ್ಞಾನ. ಇಂದ್ರಿಯಗಳ ಮೂಲಕ ಪಡೆವ ಜ್ಞಾನವು ಅನಿತ್ಯ, ಶಾಶ್ವತವಾದುದರ ತಿಳಿವೇ ನೈಜ ಜ್ಞಾನ. ಅಂದರೆ ಆತ್ಮದ ಬೆಳಕೇ ಜ್ಞಾನ. ಜತೆಗೆ ಪರಮಾತ್ಮನ ಅಂಶವೇ ಆಗಿರುವ, ಆತನಲ್ಲಿ ಲೀನವಾಗಲು ತವಕಿಸುವ ಆತ್ಮನು ಸದಾ ಆನಂದಸ್ವರೂಪಿ.

    ಆತ್ಮಪ್ರಜ್ಞೆ ಜಾಗೃತವಾದರೆ ಜಗತ್ತಿನ ಮಾಯೆ ಹರಿದುಬೀಳುತ್ತದೆ. ಲೌಕಿಕ ಬೇನೆ-ಬೇಸರಗಳು ಕಂಗೆಡಿಸುವುದಿಲ್ಲ. ಆದರೆ ಅಹಂಕಾರದಿಂದ ಬೀಗುವ, ಜಗತ್ತಿನ ಮಾಯಾಪಾಶಕ್ಕೆ ಸಿಕ್ಕು ವಿವೇಚನೆ ಕಳೆದುಕೊಂಡಿರುವ ಮನುಷ್ಯನು ಈ ದಿವ್ಯಾನುಭೂತಿ ಪಡೆಯಲು ಸಾಧ್ಯವೇ? ಆತನನ್ನು ಆವರಿಸಿರುವ ಈ ಕೊಳಕು ಆವರಣವು ಕಳಚಿಬೀಳುವುದುಂಟೆ? ಇದಕ್ಕಾಗಿಯೇ ಇಳೆಯ ಬದುಕು ಆತನಿಗೆ ಪ್ರಾಪ್ತವಾಗುತ್ತದೆ.

    ಜೀವೋತ್ಕರ್ಷ ಪಡೆಯಲು, ಸಂಸ್ಕಾರಗೊಳ್ಳಲು ಜೀವನದ ಹೋರಾಟ ಅಗತ್ಯ. ಆಲೆಮನೆಯಲ್ಲಿ ಗಾಣದೊಳಗೆ ಕಬ್ಬನ್ನು ತಳ್ಳುತ್ತಾರೆ. ಅದು ನಿಧಾನವಾಗಿ ಅರೆದು ಕಬ್ಬಿನ ಹಾಲನ್ನು ಸಂಗ್ರಹಿಸಿ, ಜಲ್ಲೆಯನ್ನು ಬಿಸುಡುತ್ತದೆ. ಆ ಹಾಲನ್ನು ಹದ ಉರಿಯಲ್ಲಿ ಬಿಸಿಮಾಡಿ ಬೆಲ್ಲದಚ್ಚಿನಲ್ಲೋ, ಅಗಲ ಪಾತ್ರದೊಳಗೋ ಹರಡಿಕೊಂಡು ಪಾಕಗೊಂಡರೆ ಸವಿಬೆಲ್ಲ ಸಿದ್ಧವಾಗುತ್ತದೆ.

    ಮನುಷ್ಯಜನ್ಮಕ್ಕೂ ಈ ಭೂಮಿಯ ಬದುಕು ಆಲೆಮನೆಯಂತೆ. ಇಂದ್ರಿಯಾಭಿಲಾಷೆಗಳ ಮಾಯೆಯು ಗಾಣದಂತೆ ವ್ಯಕ್ತಿಯನ್ನು ಅರೆಯುತ್ತದೆ. ಬದುಕಿನ ಕಷ್ಟಗಳು ಒಳಗಿರುವ ನಿಜಶಕ್ತಿಯನ್ನು ಹೊರಗೆಳೆಯುತ್ತದೆ. ಪ್ರತಿಕೂಲ ಸಂದರ್ಭದಲ್ಲಿ ಮನುಷ್ಯನ ನಿಜಸಾಮರ್ಥ್ಯ ಅಭಿವ್ಯಕ್ತವಾಗುತ್ತದೆ.

    ಜತೆಗೆ ನಾನೇ ಶ್ರೇಷ್ಠ ಎಂಬ ಅಹಂಭಾವವೂ ಕಬ್ಬಿನ ಜಲ್ಲೆಯಂತೆ ಹೊರಬೀಳುತ್ತದೆ. ಜೀವವು ಪರಿಪಕ್ವತೆ ಹೊಂದುತ್ತದೆ. ಹಾಗಾಗಿ ಈ ಇಳೆಯ ಬದುಕು ವ್ಯರ್ಥವೆಂದೋ, ತುಚ್ಛವೆಂದೋ ನಿರಾಕರಿಸಬಾರದು. ಇದು ಜೀವವನ್ನು ಮಾಗುವುದಕ್ಕೆ, ಬೀಗುವುದನ್ನು ಮರೆತು ಬಾಗುವುದಕ್ಕೆ ಸಿದ್ಧಪಡಿಸುತ್ತದೆ. ಇದರಿಂದಲೇ ಆತ್ಮ ಔನ್ನತ್ಯಕ್ಕೇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts