More

    ನೆಲೆ ಕಳೆದುಕೊಂಡ ಮೂರಾಜೆ ಶಾಲೆ

    ಪ್ರವೀಣ್‌ರಾಜ್ ಕೊಲ, ಕಡಬ
    ಕೋಡಿಂಬಾಳ ಗ್ರಾಮದ ಮೂರಾಜೆ ಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅತಂತ್ರ ಸ್ಥಿತಿಯಲ್ಲಿದೆ. ಶಾಲಾ ಕಟ್ಟಡದ ಗೋಡೆ ಹಾಗೂ ಛಾವಣಿಯಲ್ಲಿ ಬಿರುಕು ಕಂಡುಬಂದಿರುವ ಕಾರಣದಿಂದ ಅದನ್ನು ತೆರವುಗೊಳಿಸಲು ಸರ್ಕಾರ ಆದೇಶಿಸಿದೆ. ಆದರೆ ಹೊಸ ಕಟ್ಟಡ ನಿರ್ಮಿಸಲು ಜಾಗದ ಸಮಸ್ಯೆಯಿಂದಾಗಿ ಅನುದಾನ ಇರಿಸಲು ತೊಡಕಾಗಿದೆ. ಕರೊನಾ ಸಂಕಷ್ಟ ಕಳೆದು ಶಾಲೆ ಆರಂಭಗೊಂಡರೂ ಶಾಲೆಯ ಮಕ್ಕಳು ನೆಲೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
    ಪ್ರಸ್ತುತ 40 ವಿದ್ಯಾರ್ಥಿಗಳಿರುವ ಮೂರಾಜೆ ಕೊಪ್ಪ ಶಾಲೆ ಆರಂಭಗೊಂಡು ಕೇವಲ 16 ವರ್ಷ ಕಳೆದಿವೆ. 14 ವರ್ಷಗಳ ಹಿಂದೆ ಶಾಲೆಗೆ ಕಟ್ಟಡ ನಿರ್ಮಾಣಗೊಂಡಿದೆ. 2 ತರಗತಿ ಕೊಠಡಿಗಳು ಹಾಗೂ 1 ಕಚೇರಿ ಕೊಠಡಿ ಇರುವ ಈ ಕಟ್ಟಡದ ಕಾಂಕ್ರೀಟ್ ಛಾವಣಿಯಲ್ಲಿ ಬಿರುಕು ಕಾಣಿಸಿಕೊಂಡು ಛಾವಣಿಗೆ ಹಾಕಿದ ಕಬ್ಬಿಣದ ಸರಳು ಹೊರಗೆ ಕಾಣಿಸುತ್ತಿವೆ. ಕಳಪೆ ಕಾಮಗಾರಿಯಿಂದಾಗಿ ಛಾವಣಿ ಬಾಗಿರುವುದರೊಂದಿಗೆ ಗೋಡೆಯೂ ಬಿರುಕುಬಿಟ್ಟು ಅಪಾಯ ಆಹ್ವಾನಿಸುವಂತಿದೆ. ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದೆ ಎನ್ನುವ ಕಾರಣಕ್ಕಾಗಿ ಕಳೆದ 2 ವರ್ಷಗಳಿಂದ ಶಾಲೆಯ ಪಕ್ಕದ ಭಜನಾ ಮಂದಿರದ ಜಗಲಿಯಲ್ಲಿ ಹಾಗೂ ತಾತ್ಕಾಲಿಕ ಶೆಡ್‌ನಲ್ಲಿ ತರಗತಿ ನಡೆಸಲಾಗುತ್ತಿತ್ತು. ಈಗ ಶಿಥಿಲ ಕಟ್ಟಡವನ್ನು ತೆರವುಗೊಳಿಸಲು ಇಲಾಖೆ ಅದೇಶಿಸಿದೆ. ಆದರೆ ಹೊಸ ಕಟ್ಟಡ ಮಾತ್ರ ನಿರ್ಮಾಣವಾಗಿಲ್ಲ.

    ಅನುದಾನ ಇರಿಸಲು ಜಾಗದ ತೊಡಕು
    ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಶಾಸಕರು ಅನುದಾನ ಇರಿಸಲು ಮುಂದಾದಾಗ ಜಾಗದ ತೊಡಕು ಎದುರಾಗಿದೆ. ಶಾಲೆ ಆರಂಭಗೊಂಡು ಇಷ್ಟು ವರ್ಷ ಕಳೆದರೂ ಶಾಲೆಯ ಹೆಸರಿನಲ್ಲಿ ಜಾಗದ ಪಹಣಿ ಆಗಿಲ್ಲ. ಭಾಗಶಃ ಅರಣ್ಯ ಪ್ರದೇಶದಲ್ಲಿ ಶಾಲೆ ಇದೆ. ಬದಲಿ ಸರ್ಕಾರಿ ಜಮೀನು ಗುರುತಿಸಿ ಶಾಲೆಯ ಹೆಸರಿಗೆ ಪಹಣಿ ಮಾಡಿಸಿದರೆ ಅನುದಾನ ಇರಿಸಬಹುದು ಎನ್ನುವ ಉತ್ತರ ಸರ್ಕಾರದ ಮಟ್ಟದಲ್ಲಿ ಲಭಿಸಿದೆ. ಸಮಸ್ಯೆ ಬಗೆಹರಿಸಿಕೊಡುವಂತೆ ಸ್ಥಳೀಯರ ನಿಯೋಗ ಶಾಸಕರಿಂದ ಹಿಡಿದು ಮುಖ್ಯಮಂತ್ರಿಗಳ ತನಕ ಮನವಿ ಸಲ್ಲಿಸಿದೆ. ಒಟ್ಟಿನಲ್ಲಿ 16 ವರ್ಷಗಳಿಂದ ಪರಿಸರದ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ವಿದ್ಯಾ ದೇಗುಲವೊಂದು ನೆಲೆ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ.

    ಕಟ್ಟಡದ ಸಮಸ್ಯೆಯಿಂದಾಗಿ ಶಾಲೆ ಮುಚ್ಚುವ ಸ್ಥಿತಿ ತಲುಪಿರುವುದು ನೋವಿನ ಸಂಗತಿ. ಶಾಲೆಯನ್ನು ಇಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನ ಆಗಬೇಕಿದೆ.
    ಗುಣವತಿ ದೊಡ್ಡಕೊಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ

    ಶಾಲೆ ಇರುವ ಜಮೀನು ಅರಣ್ಯ ಭೂಮಿ ಎನ್ನುವ ಕಾರಣದಿಂದಾಗಿ ಶಾಲೆಯ ಹೆಸರಿನಲ್ಲಿ ಜಮೀನಿನ ಪಹಣಿ ಆಗಿಲ್ಲ. ಅದರಿಂದಾಗಿ ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದ ಅನುದಾನ ಇರಿಸಲು ತಾಂತ್ರಿಕ ತೊಡಕು ಎದುರಾಗಿದೆ. ಹತ್ತಿರದಲ್ಲಿ ಬೇರೆ ಸರ್ಕಾರಿ ಜಮೀನು ಗುರುತಿಸಿ ಅಲ್ಲಿಗೆ ಶಾಲೆಯನ್ನು ಸ್ಥಳಾಂತರಿಸಿ ಶಾಲೆಯ ಹೆಸರಿಗೆ ಜಾಗದ ಪಹಣಿ ಆದ ಮೇಲಷ್ಟೇ ಅನುದಾನ ಸಿಗಲಿದೆ. ಸಮಸ್ಯೆ ಬಗೆಹರಿಸಲು ಎಲ್ಲ ರೀತಿಯಿಂದಲೂ ಪ್ರಯತ್ನ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಶಾಲೆಯನ್ನು ಮುಚ್ಚಲು ಅವಕಾಶ ನೀಡುವುದಿಲ್ಲ.
    ಲೋಕೇಶ್ ಸಿ. ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts