More

    ಪಾಳುಬಿದ್ದ ಹಸಿಮೀನು ಮಾರುಕಟ್ಟೆ

    ಕಡಬ: ತಾಲೂಕು ಕೇಂದ್ರ ಕಡಬ ಪೇಟೆಯಲ್ಲಿ ಮೂಲಸೌಲಭ್ಯ ವಂಚಿತ ಹಸಿಮೀನು ಮಾರುಕಟ್ಟೆಯಿಂದಾಗಿ ಮೀನು ಮಾರಾಟಗಾರರು ರಸ್ತೆಬದಿ ವ್ಯಾಪಾರ ನಡೆಸುವಂತಾಗಿದೆ. ಸ್ವಚ್ಛ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಡಬ ಗ್ರಾಮ ಪಂಚಾಯಿತಿ ಈಗ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದೆ. ಸುಸಜ್ಜಿತ ಮಾರುಕಟ್ಟೆ ಅಗತ್ಯ ಎನ್ನುವುದು ಜನರ ಬೇಡಿಕೆ.

    ಪ್ರಸ್ತುತ ಸಂತಕಟ್ಟೆ ಬಳಿಯಿರುವ ಹಸಿಮೀನು ಮಾರುಕಟ್ಟೆಯಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ. ಮಾರುಕಟ್ಟೆಯಿಂದ ತ್ಯಾಜ್ಯನೀರು ಹರಿದುಹೋಗಲು ಸರಿಯಾದ ವ್ಯವಸ್ಥೆಗಳಿಲ್ಲ. ತ್ಯಾಜ್ಯ ನೀರು ಸಂಗ್ರಹವಾಗಲು ನಿರ್ಮಿಸಲಾಗಿದ್ದ ಚಿಕ್ಕದಾದ ಗುಂಡಿಯಲ್ಲಿ ನೀರು ತುಂಬಿ ಉಕ್ಕಿಹರಿದು ದುರ್ವಾಸನೆ ಆರಂಭವಾದ್ದರಿಂದ ಮೀನು ಮಾರಾಟಗಾರರು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಸಾಧ್ಯವಿಲ್ಲ ಎಂದು 2 ವರ್ಷಗಳ ಹಿಂದೆ ಪಂಚಾಯಿತಿಗೆ ದೂರು ನೀಡಿದ್ದರು. ಬಳಿಕ ರಸ್ತೆಯ ಬದಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಮೀನು ಮಾರಲು ಪಂಚಾಯಿತಿ ಅವಕಾಶ ನೀಡಿದೆ.

    ಸ್ಥಳಿಯಾಡಳಿತಕ್ಕಿದೆ ಆದಾಯ: ಕಡಬ ಪೇಟೆಯಲ್ಲಿ ಸಂತೆ ಮಾರುಕಟ್ಟೆ ಹಾಗೂ ಕಡಬದ ರೈತ ಸಂಪರ್ಕ ಕೇಂದ್ರ ಬಳಿ ಹಸಿಮೀನು ಮಾರಾಟ ಮಾಡಲಾಗುತ್ತಿದೆ. 2 ವರ್ಷಗಳ ಹಿಂದೆ ಮೀನು ವ್ಯಾಪಾರಿಗಳ ಪೈಪೋಟಿಯಿಂದಾಗಿ ಮೇಲಿನ ಎರಡೂ ಸ್ಟಾಲ್‌ಗಳು ಒಟ್ಟು 14 ಲಕ್ಷ 31 ಸಾವಿರ ರೂ.ಗಳಿಗೆ ಹರಾಜಾಗಿತ್ತು. ಆದರೆ ಕಳೆದ 2 ಅವಧಿಗಳಲ್ಲಿ ಬಿಡ್ ಮೌಲ್ಯ ಕಡಿಮೆಯಾಗಿ ಈ ಎರಡೂ ಕಡೆ ಮಾರಾಟದ ಹಕ್ಕಿಗಾಗಿ ಮೀನು ಮಾರಾಟಗಾರರು 1 ವರ್ಷದ ಅವಧಿಗೆ ಪಂಚಾಯಿತಿಗೆ 9 ಲಕ್ಷ ರೂ. ಪಾವತಿಸಿದ್ದಾರೆ. ಕಳೆದ ತಿಂಗಳು (ಅ.15) ಹರಾಜಿನ ಅವಧಿ ಮುಗಿದಿದೆ. ಮುಂದೆ ಪಟ್ಟಣ ಪಂಚಾಯಿತಿ ವತಿಯಿಂದ ಹರಾಜು ಪ್ರಕ್ರಿಯೆ ನಡೆಯಲಿದೆ.

    ಮೀನು ಮಾರಾಟದ ಹಕ್ಕಿನ ಹರಾಜು ಪ್ರಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಸಂತೆಕಟ್ಟೆಯ ಬಳಿ ಇರುವ ಮೀನು ಮಾರುಕಟ್ಟೆಯ ಕಟ್ಟಡ ಶಿಥಿಲಗೊಂಡಿದ್ದು, ಅದರ ದುರಸ್ತಿ ನಡೆಸಿ ಅಲ್ಲಿಯೇ ಮೀನು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ದುರಸ್ತಿ ಕಾರ್ಯ ಮುಗಿಯುವ ತನಕ ಮೀನು ಮಾರುಕಟ್ಟೆ ಆವರಣದಲ್ಲಿಯೇ ವಾಹನದಲ್ಲಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಲು ನಿಧರ್ರಿಸಲಾಗಿದೆ.
    ಅರುಣ್ ಕೆ., ಮುಖ್ಯಾಧಿಕಾರಿ, ಕಡಬ ಪಟ್ಟಣ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts