More

    ಲೋಕಸಭೆ ಕ್ಷೇತ್ರದಲ್ಲಿ ಕಬಡ್ಡಿ ಹಬ್ಬ 19ರಿಂದ

    ಹುಬ್ಬಳ್ಳಿ: ಧಾರವಾಡ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಜ. 19ರಿಂದ ಧಾರವಾಡ ಸಂಸದ ಕ್ರೀಡಾ ಮಹೋತ್ಸವ-ಕಬಡ್ಡಿ ಹಬ್ಬ ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

    ಹುಬ್ಬಳ್ಳಿಯಲ್ಲಿ ಮಂಗಳವಾರ ಕಬಡ್ಡಿ ಹಬ್ಬದ ಲಾಂಛನ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಕಬಡ್ಡಿ ಹೆಚ್ಚು ಪ್ರಚಲಿತವಾಗಿರುವುದರಿಂದ ಕ್ರೀಡಾ ಮಹೋತ್ಸವಕ್ಕೆ ಕಬಡ್ಡಿ ಹಬ್ಬ ಎಂದು ಹೆಸರಿಸಿದ್ದೇವೆ. ಲೋಕಸಭೆ ಕ್ಷೇತ್ರ ಮಟ್ಟದಲ್ಲಿ ವಾಲಿಬಾಲ್, ಚೆಸ್, ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಪಂದ್ಯಗಳು ನಡೆಯಲಿವೆ ಎಂದರು.

    ಧಾರವಾಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಯೋಗದೊಂದಿಗೆ ಕಬಡ್ಡಿ ಪಂದ್ಯಗಳನ್ನು ನಡೆಸಲಾಗುವುದು. ಆಟಗಾರರಿಗೆ ವಯೋಮಿತಿ ಹಾಗೂ ದೇಹ ತೂಕದ ನಿರ್ಬಂಧವಿರುವುದಿಲ್ಲ. ಪ್ರೊ ಕಬ್ಬಡ್ಡಿ ನಿಯಮಾವಳಿಯನ್ನು ಅಳವಡಿಸಲಾಗುವುದು. ಲೋಕಸಭೆ ಮತಕ್ಷೇತ್ರ ವ್ಯಾಪ್ತಿಯ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಆಟಗಾರರು ಪಾಲ್ಗೊಳ್ಳಲು ಮಾತ್ರ ಅವಕಾಶವಿರುತ್ತದೆ. ಜ. 17 ರೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

    ಜ. 19, 20ರಂದು ನವಲಗುಂದ ವಿ.ಕ್ಷೇ. ವ್ಯಾಪ್ತಿಯ ಕಬಡ್ಡಿ ಪಂದ್ಯಗಳು ಅಲ್ಲಿಯ ಶಂಕರ ಕಾಲೇಜ್ ಮೈದಾನ, 31ರಂದು ಹು-ಧಾ ಪೂರ್ವ, ಫೆ. 1ರಂದು ಹು-ಧಾ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ಪಂದ್ಯಗಳು ನೆಹರು ಮೈದಾನದಲ್ಲಿ, ಫೆ. 3ರಂದು ಹು-ಧಾ ಪಶ್ಚಿಮ ಕ್ಷೇತ್ರ ವ್ಯಾಪ್ತಿಯ ಪಂದ್ಯಗಳು, 3 ಮತ್ತು 4ರಂದು ಧಾರವಾಡ ಕ್ಷೇತ್ರ ವ್ಯಾಪ್ತಿಯ ಪಂದ್ಯಗಳು ನರೇಂದ್ರ ಗ್ರಾಮದಲ್ಲಿ, 10 ಮತ್ತು 11ರಂದು ಕುಂದಗೋಳ, ಶಿಗ್ಗಾಂವ, 17 ಮತ್ತು 18ರಂದು ಕಲಘಟಗಿ ಕ್ಷೇತ್ರ ವ್ಯಾಪ್ತಿಯ ಪಂದ್ಯಗಳ ನಡೆಯಲಿವೆ ಎಂದರು.

    ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಪ್ರಥಮ 40 ಸಾವಿರ ರೂ. ನಗದು ಮತ್ತಪ ಟ್ರೋಫಿ, ದ್ವಿತೀಯ 20 ಸಾವಿರ ರೂ. ನಗದು ಮತ್ತು ಟ್ರೋಫಿ, ತೃತೀಯ ಹಾಗೂ ಚತುರ್ಥ ತಲಾ 10 ಸಾವಿರ ರೂ. ನಗದು ಮತ್ತು ಟ್ರೋಫಿ, ವೈಯುಕ್ತಿಕವಾಗಿ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್ ಹಾಗೂ ಆಲ್ರೌಂಡರ್​ಗಳಿಗೆ ತಲಾ ರೂ. 5,000 ನಗದು ಬಹುಮಾನ ನೀಡಲಾಗುವುದು. ಪ್ರತಿ ವಿಧಾನಸಭೆ ಕ್ಷೇತ್ರದಿಂದ ವಿಜೇತ 4 ತಂಡಗಳು ಧಾರವಾಡ ಲೋಕಸಭೆ ಕ್ಷೇತ್ರ ಮಟ್ಟದ ಪಂದ್ಯಾವಳಿಗೆ ಪ್ರವೇಶ ಪಡೆಯಲಿವೆ. ಇಲ್ಲಿ ಪ್ರಥಮ 1ಲಕ್ಷ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ 60 ಸಾವಿರ ರೂ., ಮೂರು ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ತಲಾ 30 ಸಾವಿರ ರೂ ನಗದು, ವೈಯುಕ್ತಿಕವಾಗಿ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್ ಹಾಗೂ ಆಲ್ರೌಂಡರ್​ಗಳಿಗೆ ತಲಾ 10 ಸಾವಿರ ರೂ ನಗದು ಬಹಮಾನ ಮತ್ತು ಟ್ರೋಫಿಯನ್ನು ಪಡೆಯಲಿದ್ದಾರೆ ಎಂದು ವಿವರಿಸಿದರು.

    ಮಹಿಳಾ ಕಬಡ್ಡಿ ಪಂದ್ಯಾವಳಿಯನ್ನು ನೇರವಾಗಿ ಲೋಕಸಭೆ ಮಟ್ಟದಲ್ಲಿ ನಡೆಸಲಾಗುವುದು. ಮಹಿಳಾ ಮತ್ತು ಪುರುಷ ತಂಡಗಳು ಸಮಾನ ಮೊತ್ತದ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.

    ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts