More

    ನಿತ್ಯಸಚಿವ ಶಂಕರಗೌಡರ ಕುಟುಂಬಕ್ಕೆ ಶಕ್ತಿ ಕೊಡಿ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮನವಿ

    ಮಂಡ್ಯ: ಕ್ಷೇತ್ರದ ಜನರು ಆಶೀರ್ವದಿಸಿದರಷ್ಟೇ ನಾನು ಗೆಲುವು ಕಾಣಲು ಸಾಧ್ಯ. ನೀವೆಲ್ಲ ನನ್ನ ಕೈಬಿಟ್ಟರೆ ನಮ್ಮ ಕುಟುಂಬದ ಹೋರಾಟ ಇಲ್ಲಿಗೆ ಅಂತ್ಯಗೊಳ್ಳುತ್ತದೆ. ಹಾಗಾಗಲು ಬಿಡಬೇಡಿ. ನನಗೆ ಶಕ್ತಿ ತುಂಬಿ ಎಂದು ನಿತ್ಯಸಚಿವ ಕೆ.ವಿ.ಶಂಕರಗೌಡ ಮೊಮ್ಮಗ, ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮನವಿ ಮಾಡಿದರು.
    ತಾಲೂಕಿನ ಹೊಸಬೂದನೂರು ಗ್ರಾಮದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಸಬಾ ಹೋಬಳಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ನನ್ನ ತಾತ ಕೆ.ವಿ.ಶಂಕರಗೌಡರು ಜೀವನದುದ್ದಕ್ಕೂ ಹೋರಾಟ ಮಾಡುತ್ತಲೇ ಬಂದರು. ನನ್ನ ತಂದೆ ಕೆ.ಎಸ್.ಸಚ್ಚಿದಾನಂದ ಸಹ ಹೋರಾಟ ಮಾಡುತ್ತಲೇ ಮಡಿದರು. ಇನ್ನು ಮೂರನೇ ತಲೆಮಾರು ನಾನೂ ಸಹ ಕಷ್ಟಗಳ ನಡುವೆ ಹೋರಾಟ ಮಾಡುತ್ತಿದ್ದೇನೆ. ಎಷ್ಟೇ ಕಷ್ಟ ಬಂದರೂ ನಾನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಾವಿರುವ ಪರಿಸ್ಥಿತಿಗೆ ಯಾರನ್ನೂ ಹೊಣೆ ಮಾಡುವುದಿಲ್ಲ. ದೂಷಿಸುವುದೂ ಇಲ್ಲ. ಇದಕ್ಕೆಲ್ಲಾ ನಾವೇ ಕಾರಣರು. ಮತದಾರರ ಮೇಲೆ ವಿಶ್ವಾಸವಿಟ್ಟು ಚುನಾವಣಾ ಅಖಾಡ ಪ್ರವೇಶಿಸಿದ್ದೇನೆ. ನನ್ನ ಸೋಲು-ಗೆಲುವು ಎರಡೂ ನಿಮ್ಮ ಕೈಯ್ಯಲ್ಲೇ ಇದೆ ಎಂದರು.
    ಮೂರನೇ ತಲೆಮಾರಾದರೂ ಹೋರಾಟದ ಬದುಕು ನಮ್ಮದಾಗಿದೆ. ಇಂದಿಗೂ ಸ್ವಂತ ಮನೆಯನ್ನು ಹೊಂದಲಾಗದ ಸ್ಥಿತಿಯಲ್ಲಿದ್ದೇವೆ. ನಿಮ್ಮೆಲ್ಲರ ಸೇವೆ ಮಾಡುವುದಕ್ಕೆ ನನಗೊಂದು ಅವಕಾಶ ಮಾಡಿಕೊಡಿ. ರಾಜಕೀಯ ಅಧಿಕಾರವನ್ನು ನಾನು ನನ್ನ ಸ್ವಾರ್ಥಕ್ಕಾಗಿ ಕೇಳುತ್ತಿಲ್ಲ. ಕಷ್ಟಗಳಿಂದ ಪಾರಾಗುವುದಕ್ಕೆ ಕೇಳುತ್ತಿದ್ದಾನೆಂದು ಭಾವಿಸಬೇಡಿ. ನಿಮ್ಮಗಳ ಸೇವೆ ಮಾಡುವ ಆಸೆಯಿಂದ ಮನವಿ ಮಾಡುತ್ತಿದ್ದೇನೆ. ನೀವೆಲ್ಲರೂ ಕೈ ಹಿಡಿದರೆ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತೇನೆ. ಸದಾಕಾಲ ನಿಮ್ಮೊಡನಿರುತ್ತೇನೆ. ನಿಮ್ಮ ಕಷ್ಟ-ಸುಖಗಳಲ್ಲಿ ಭಾಗಿಯಾಗಿರುತ್ತೇನೆ ಎಂದು ತಿಳಿಸಿದರು.
    ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತಗಳನ್ನು ಕೊಟ್ಟು ಗೆಲ್ಲಿಸಿದ್ದೀರಿ. ಈ ಚುನಾವಣೆಯಲ್ಲಿ ನನಗಿಂತಲೂ ಹೆಚ್ಚಿನ ಮತಗಳನ್ನು ಕೊಟ್ಟು ವಿಜಯಾನಂದ ಅವರನ್ನು ಗೆಲ್ಲಿಸಿ. ಅವರ ಬಳಿ ಹಣವಿಲ್ಲದಿರಬಹುದು. ಆದರೆ, ಹೃದಯ ಶ್ರೀಮಂತಿಕೆ ಇದೆ. ಎಲ್ಲರೂ ಒಗ್ಗಟ್ಟಿನಿಂದ ಅವರನ್ನು ಬೆಂಬಲಿಸೋಣ ಎಂದು ಮತದಾರರಲ್ಲಿ ಮನವಿ ಮಾಡಿದರು.
    ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಮಾತನಾಡಿ, ಚುನಾವಣೆಯಲ್ಲಿ ವಿಜಯಾನಂದ ಗೆಲುವು ನಿಶ್ಚಿತ. ಹೊರಗಿನ ಕ್ಷೇತ್ರದವರನ್ನು ಆಯ್ಕೆ ಮಾಡುವ ಅಗತ್ಯ ನಮಗಿಲ್ಲ ಎಂದರು.
    ತಾಪಂ ಮಾಜಿ ಸದಸ್ಯ ಎಂ.ಜಿ.ತಿಮ್ಮೇಗೌಡ, ಮುದ್ದನಘಟ್ಟ ಮಹಾಲಿಂಗೇಗೌಡ, ಟಿ.ಸಿ.ಶಂಕರೇಗೌಡ, ರಘು, ಬೋರೇಗೌಡ, ಲೋಕೇಶ್, ವಿಶಾಲ್‌ರಘು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts