More

    ಈಶ್ವರಪ್ಪ ಆಶೀರ್ವಾದ ಸಿಗಲಿದೆ: ಬಿ.ವೈ.ರಾಘವೇಂದ್ರ ವಿಶ್ವಾಸ

    ಬಾಳೆಹೊನ್ನೂರು: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಎಲ್ಲ ಚುನಾವಣೆಗಳಲ್ಲೂ ನಮ್ಮ ಪರ ಇದ್ದವರು. ಯಾವುದೋ ಕಾರಣಗಳಿಂದ ಇಂದು ಕೆಲವು ತಪ್ಪು ಅಭಿಪ್ರಾಯಗಳು ಅವರಲ್ಲಿ ಬಂದಿದೆ. ಆದಷ್ಟು ಬೇಗ ನಮ್ಮ ನಡುವಿನ ಅಂತರ ಸರಿಯಾಗಲಿದೆ. ಈ ಬಾರಿಯೂ ನಮಗೆ ಅವರ ಆಶೀರ್ವಾದ ಸಿಗಲಿದೆ ಎಂದು ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

    ರಂಭಾಪುರಿ ಪೀಠಕ್ಕೆ ಶುಕ್ರವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್ ಸಿಂಹ ಈ ಬಾರಿಯೂ ಸಂಸತ್‌ನಲ್ಲಿ ಇರಬೇಕಿತ್ತು. ಈ ಹಿಂದೆ ಎರಡು ಬಾರಿ ನಾವು ಒಟ್ಟಿಗೆ ಸಹೋದರರಂತೆ ಕೆಲಸ ಮಾಡಿದ್ದೇವೆ. ಆದರೆ ಬೇರೆ ಬೇರೆ ಕಾರಣಗಳಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಪಕ್ಷ ಬದಲಾವಣೆ ಮಾಡಿದೆ. ಇದು ರಾಜಕಾರಣದ ಅಂತ್ಯ ಎಂದು ಭಾವಿಸುವುದು ಬೇಡ. ಇದೊಂದು ಬಿಡುವು ಎಂದುಕೊಳ್ಳಬಹುದು. ಈ ಬಾರಿಯೂ ಪ್ರತಾಪ್ ನೇತೃತ್ವದಲ್ಲಿ ಮೈಸೂರು ಕ್ಷೇತ್ರವನ್ನು ಮತ್ತೊಮ್ಮೆ ಗೆಲ್ಲಿಸಿಕೊಂಡು ಬರುತ್ತಾರೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.
    ಹಿಂದುತ್ವ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು: ರಾಜ್ಯದಲ್ಲಿ ತುಷ್ಟೀಕರಣ ರಾಜಕಾರಣದಿಂದ ಹಿಂದುತ್ವ ವಿರೋಧಿ ಶಕ್ತಿಗಳಿಗೆ ಕುಮ್ಮಕ್ಕು ದೊರೆಯುತ್ತಿದೆ. ಇದರ ಫಲವಾಗಿಯೇ ಇತ್ತೀಚೆಗೆ ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹಾಕಿದವರ ಮೇಲೆ ಹಲ್ಲೆ ನಡೆದಿದೆ. ಹಿಂದು ವಿರೋಧಿಗಳಿಗೆ ಬೆಂಬಲ ನೀಡುತ್ತಿರುವುದರ ಪ್ರತಿಫಲವೇ ಇಂತಹ ಘಟನೆಗಳು. ಹನುಮಾನ್ ಚಾಲೀಸಾ ಹಾಕಿಕೊಂಡು ಭಜನೆ ಮಾಡುವ ಹಾಗಿಲ್ಲ ಎಂದರೆ ಹೇಗೆ? ಕಾಂಗ್ರೆಸ್‌ನ ತುಷ್ಟೀಕರಣ ಇಮಿತಿಮೀರಿದೆ. ಅಲ್ಲಲ್ಲಿ ಹಿಂದು ಕಾರ್ಯಕರ್ತರ ಮೇಲಿನ ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಿ ಹಿಂದುಗಳಿಗೆ ರಕ್ಷಣೆ ನೀಡಬೇಕು ಎಂದು ಬಿ.ವೈ.ರಾಘವೇಂದ್ರ ಆಗ್ರಹಿಸಿದರು.
    ರಂಭಾಪುರಿ ಶ್ರೀಗಳ ಆಶೀರ್ವಾದ: ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ನಿಮಿತ್ತ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಶ್ರೀ ಪೀಠದ ಎಲ್ಲ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದು, ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದ ಪಡೆದರು. ಚುನಾವಣಾ ನೀತಿಸಂಹಿತೆ ಕಾರಣ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ನಿರ್ಗಮಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts